ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿರುವ ಬಜೆಟ್ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಂತೆ ಇದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇಕಡ 90ರಷ್ಟು ಅನುಷ್ಠಾನಕ್ಕೆ ಬಂದಿಲ್ಲ. ಈ ಬಜೆಟ್ ಕೂಡ ಅದೇ ರೀತಿ ಅನುಷ್ಠಾನದ ಬದ್ಧತೆ ಇಲ್ಲದ ಘೋಷಣೆಗಳ ಪುಸ್ತಕದಂತೆ ಕಾಣುತ್ತಿದೆ ಎಂದು ವಿಪ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮತ್ತು ಅವುಗಳನ್ನು ನಿವಾರಣೆ ಮಾಡುವ ದೂರದೃಷ್ಟಿಯ ಕಾರ್ಯಕ್ರಮಗಳು ಬಜೆಟ್ ನಲ್ಲಿ ಇಲ್ಲ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವಾಪಸ್ ಪಡೆದರೂ ರಾಜ್ಯದಲ್ಲಿ ಮುಂದುವರಿದಿರುವ ಮೂರು ರೈತ ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆ ಬಜೆಟ್ ನಲ್ಲಾದರೂ ಹೊರಬೀಳಬಹುದು ಎಂದು ರಾಜ್ಯದ ರೈತರು ಕಾಯುತ್ತಿದ್ದರು. ಆದರೆ, ಬೊಮ್ಮಾಯಿಯವರು ಕಾರ್ಪೊರೇಟ್ ಬಂಡವಾಳಷಾಹಿಗಳ ಬೆಂಬಲಕ್ಕೆ ನಿಂತು ಆ ಕಾನೂನುಗಳನ್ನು ಮುಂದುವರಿಸಿದ್ದಾರೆ ಎಂದಿದ್ದಾರೆ.
ರಸಗೊಬ್ಬರದ ದರ ಏರಿಕೆ ನಿಯಂತ್ರಣ, ಸಹಾಯಧನ ವಿತರಣೆ ಸೇರಿದಂತೆ ರೈತರನ್ನು ಆರ್ಥಿಕ ಸಂಕಷ್ಟಗಳಿಂದ ಪಾರುಮಾಡುವ ಯಾವ ಕಾರ್ಯಕ್ರಮವೂ ಬಜೆಟ್ ನಲ್ಲಿ ಇಲ್ಲ. ನೀರಾವರಿ ಯೋಜನೆಗಳಿಗೆ ₹25,000 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಜೆಟ್ ನಲ್ಲಿ ಹೇಳಿದ್ದಾರೆ. ಆದರೆ, ಅದರ ಸರಿಯಾದ ಚಿತ್ರಣವೇ ಇಲ್ಲ. ಇದು ರಾಜ್ಯದ ರೈತರನ್ನು ವಂಚಿಸುವ ಬಿಜೆಪಿ ಸರ್ಕಾರದ ತಂತ್ರಗಾರಿಕೆಯ ಭಾಗ ಎಂದಿದ್ದಾರೆ.
ಗೃಹಿಣಿ ಶಕ್ತಿ ಯೋಜನೆ ಹೆಸರಿನಲ್ಲಿ ರಾಜ್ಯದ ಗೃಹಿಣಿಯರಿಗೆ ಮಾಸಿಕ ₹1500ರಿಂದ ₹2000 ನೆರವು ನೀಡುವುದಾಗಿ ಬೊಮ್ಮಾಯಿ ಸರ್ಕಾರ ಘೋಷಿಸಿತ್ತು. ಆದರೆ, ಈಗ ಕಾರ್ಮಿಕ ಮಹಿಳೆಯರಿಗೆ ಮಾತ್ರ ತಿಂಗಳಿಗೆ ₹500 ನೆರವು ಪ್ರಕಟಿಸಿದೆ. ಇದು ನುಡಿದಂತೆ ನಡೆಯದ ಸರ್ಕಾರ ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು? ಎಂದಿದ್ದಾರೆ.
ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿ ಸೇರಿದಂತೆ ಅನೇಕ ವಿಷಯಗಳಲ್ಲಿ ಬಜೆಟ್ ಘೋಷಣೆಗಳಲ್ಲಿ ಸ್ಪಷ್ಟತೆ ಇಲ್ಲ. ಬಿಜೆಪಿಯ ಚುನಾವಣಾ ರಾಜಕಾರಣದ ಭಾಗವಾಗಿ ಹಲವು ಘೋಷಣೆಗಳನ್ನು ಮಾಡಲಾಗಿದೆ ಎಂದಿದ್ದಾರೆ.
ಮೇಕೆದಾಟು ಯೋಜನೆಗೆ ₹1,000 ಕೋಟಿ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿ ಹಿಂದೆ ವಿಧಾನಮಂಡಲದಲ್ಲೇ ಭರವಸೆ ನೀಡಿದ್ದರು. ಈಗ ಅದರಿಂದ ಹಿಂದೆ ಸರಿದು ಮಾತು ತಪ್ಪಿದ್ದಾರೆ. ಎತ್ತಿನಹೊಳೆ ಯೋಜನೆ ವಿಚಾರದಲ್ಲೂ ಅವರ ಕಳಕಳಿ ಮಾತಿಗೆ ಸೀಮಿತ ಎಂಬುದು ಈಗ ಬಯಲಾಗಿದೆ ಎಂದಿದ್ದಾರೆ.
ಒಟ್ಟಾರೆಯಾಗಿ ಈ ಬಜೆಟ್ ಅನುಷ್ಠಾನ ಯೋಗ್ಯವಲ್ಲದ, ಕಣ್ಕಟ್ಟಿನ ಘೋಷಣೆಗಳ ಪಟ್ಟಿ. ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಬಸವರಾಜ ಬೊಮ್ಮಾಯಿ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಕಾಟಾಚಾರದ ಘೋಷಣೆಗಳೊಂದಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಎಲ್ಲಿಯೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾದ ದೂರದೃಷ್ಟಿಯ ಯೋಜನೆಗಳು ಕಾಣಿಸುವುದಿಲ್ಲ. ಎಲ್ಲ ಜನರಿಗೂ ಸಾಮಾಜಿಕ ನ್ಯಾಯ ಒದಗಿಸುವ ಪ್ರಯತ್ನವೂ ಬಜೆಟ್ ನಲ್ಲಿ ಇಲ್ಲ. ಸಂಪ್ರದಾಯದಂತೆ ಬಸವರಾಜ ಬೊಮ್ಮಾಯಿ ಅವರು ವಿದಾಯ ಭಾಷಣವನ್ನು ಬಜೆಟ್ ರೂಪದಲ್ಲಿ ಮಂಡಿಸಿದ್ದಾರೆ. ಜನರನ್ನು ವಂಚಿಸುವ ಈ ಪ್ರಯತ್ನದಲ್ಲಿ ಬೊಮ್ಮಾಯಿ ಸರ್ಕಾರ ಮತ್ತು ಬಿಜೆಪಿಗೆ ಯಶಸ್ಸು ದೊರೆಯದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.