ಬೆಂಗಳೂರು: ಕಪ್ಪು ಹಣ ವರ್ಗಾವಣೆ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ₹ 30.91 ಕೋಟಿ ಮೊತ್ತದ ನಕಲಿ ನೋಟುಗಳನ್ನೂ ಜಪ್ತಿ ಮಾಡಿದ್ದಾರೆ.
‘ಬೆಂಗಳೂರಿನ ಸುಧೀರ್, ಕಿಶೋರ್, ತೀರ್ಥ ರಿಷಿ, ವಿನಯ್ ಹಾಗೂ ಚಂದ್ರಶೇಖರ್ ಬಂಧಿತರು. ತಮ್ಮದೇ ಜಾಲ ಸೃಷ್ಟಿಸಿಕೊಂಡಿದ್ದ ಆರೋಪಿಗಳು, ಟ್ರಸ್ಟ್ ಹಾಗೂ ಸಂಸ್ಥೆಗಳ ಸದಸ್ಯರನ್ನು ಸಂಪರ್ಕಿಸಿ ವಂಚಿಸುತ್ತಿದ್ದರು. ಟ್ರಸ್ಟ್ ಸದಸ್ಯರೊಬ್ಬರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಆರೋಪಿ ಸುಧೀರ್ ವಿರುದ್ಧ ಬಸವನಗುಡಿ ಹಾಗೂ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಈ ಹಿಂದೆಯೂ ಪ್ರಕರಣಗಳು ದಾಖಲಾಗಿದ್ದವು. ಪ್ರಮುಖ ಆರೋಪಿ ಎನ್ನಲಾದ ಕಿಶೋರ್ ವಿರುದ್ಧ ಮುಂಬೈನಲ್ಲಿ ಪ್ರಕರಣಗಳಿವೆ. ಅಲ್ಲಿಯೇ ಈತ, ನಕಲಿ ನೋಟುಗಳನ್ನು ಬಳಸಿ ಜನರನ್ನು ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಮುಂಬೈ ಪೊಲೀಸರಿಂದ ಹೆಚ್ಚಿನ ಮಾಹಿತಿ ಪಡೆಯಬೇಕಿದೆ’ ಎಂದು ಹೇಳಿದರು.
‘ರೈಸ್ ಪುಲ್ಲಿಂಗ್, ಹವಾಲಾ ಸೇರಿದಂತೆ ಹಲವು ದಂಧೆಗಳಲ್ಲಿ ಆರೋಪಿಗಳು ಭಾಗಿಯಾಗಿದ್ದ ಮಾಹಿತಿ ಇದೆ. ಆರೋಪಿಗಳಿಂದ ಯಾರಿಗಾದರೂ ವಂಚನೆ ಆಗಿದ್ದರೆ, ಪೊಲೀಸ್ ಠಾಣೆಗೆ ದೂರು ನೀಡಬಹುದು’ ಎಂದು ತಿಳಿಸಿದರು.
₹ 40 ಲಕ್ಷಕ್ಕೆ ₹ 1 ಕೋಟಿ ನೀಡುವ ಭರವಸೆ: ‘ದೂರುದಾರರಿಗೆ ಕರೆ ಮಾಡಿದ್ದ ಆರೋಪಿಗಳು, ‘ಪ್ರತಿಷ್ಠಿತ ಕಂಪನಿಗಳಿಗೆ ಸೇರಿದ್ದ ₹ 100 ಕೋಟಿ ಕಪ್ಪು ಹಣ ನಗದು ರೂಪದಲ್ಲಿ ನಮ್ಮ ಬಳಿ ಇದೆ. ಇದನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ನೇರವಾಗಿ ನಿಮಗೆ ಕೊಡುತ್ತೇವೆ’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ವ್ಯವಹಾರದ ಬಗ್ಗೆ ಮಾತುಕತೆ ಮುಂದುವರಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಕಂಪನಿಯ ಸಿಎಸ್‌ಆರ್ ದೇಣಿಗೆ ಹೆಸರಿನಲ್ಲಿ ನಿಮಗೆ ₹ 1 ಕೋಟಿ ನಗದು ಕೊಡುತ್ತೇವೆ. ಅದಕ್ಕೆ ಪ್ರತಿಯಾಗಿ ನೀವು ₹ 40 ಲಕ್ಷ ನೀಡಬೇಕು. ಈ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಲು ನಮಗೆ ಶೇ 10ರಷ್ಟು ಕಮಿಷನ್ ಕೊಡಬೇಕು’ ಎಂದು ಆರೋಪಿಗಳು ಹೇಳಿದ್ದರು. ಅದಕ್ಕೂ ದೂರುದಾರ ಒಪ್ಪಿದ್ದರು’ ಎಂದು ತಿಳಿಸಿದರು.
ನೋಟುಗಳ ಕಂತೆ ಪ್ರದರ್ಶನ: ‘ದೂರುದಾರರಿಗೆ ವಿಡಿಯೊ ಕರೆ ಮಾಡಿದ್ದ ಆರೋಪಿಗಳು, ನಕಲಿ ನೋಟುಗಳ ಕಂತೆ ತೋರಿಸಿದ್ದರು. ಅವು ನಿಜವಾದ ನೋಟುಗಳೆಂದು ಹೇಳಿ ನಂಬಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಆರೋಪಿಗಳ ವರ್ತನೆಯಿಂದ ಅನುಮಾನಗೊಂಡಿದ್ದ ದೂರುದಾರ, ಸಿಸಿಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಸಿಸಿಬಿಯ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ₹30.91 ಕೋಟಿ ಮೊತ್ತದ ನಕಲಿ ನೋಟುಗಳನ್ನು ಜಪ್ತಿ ಮಾಡಿದೆ. ಇದರಲ್ಲಿ ₹ 500 ಹಾಗೂ ₹2,000 ಮುಖಬೆಲೆಯ ನೋಟುಗಳಿವೆ. ಇವುಗಳನ್ನು ಎಲ್ಲಿ ಮುದ್ರಿಸಲಾಗಿತ್ತು ಎಂಬುದರ ಬಗ್ಗೆ ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
‘ಆರೋಪಿ ಮನೆಯಲ್ಲಿ ₹ 23.49 ಲಕ್ಷ’
‘ಆರೋಪಿಯೊಬ್ಬನ ಮನೆ ಮೇಲೆ ಇತ್ತೀಚೆಗೆ ದಾಳಿ ಮಾಡಿ ಶೋಧ ನಡೆಸಲಾಯಿತು. ಈತನ ಮನೆಯಲ್ಲಿ ₹ 23.49 ಲಕ್ಷ ನಗದು ಪತ್ತೆಯಾಗಿದ್ದು ಜಪ್ತಿ ಮಾಡಲಾಗಿದೆ’ ಎಂದು ಕಮಿಷನರ್ ಬಿ.ದಯಾನಂದ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.