ADVERTISEMENT

ಸ್ಫೋಟಕ್ಕೆ ಸಂಚು: 7 ರಾಜ್ಯಗಳಲ್ಲಿ ಎನ್‌ಐಎ ಶೋಧ

ಭಯೋತ್ಪಾದನಾ ಕೃತ್ಯಕ್ಕೆ ಸಹ ಕೈದಿಗಳಿಗೆ ಪ್ರಚೋದನೆ * ಲಷ್ಕರ್–ಎ–ತಯಬಾ ಶಂಕಿತ ಉಗ್ರರು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
ಎನ್‌ಐಎ
ಎನ್‌ಐಎ   

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ‘ಲಷ್ಕರ್–ಎ–ತಯಬಾ’ ನಿಷೇಧಿತ ಸಂಘಟನೆಯ ಶಂಕಿತ ಉಗ್ರರು ಬಾಯ್ಬಿಟ್ಟ ಮಾಹಿತಿ ಆಧರಿಸಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ದೇಶದ 7 ರಾಜ್ಯಗಳ 17 ಸ್ಥಳಗಳ ಮೇಲೆ ಮಂಗಳವಾರ ದಾಳಿ ಮಾಡಿದರು.

ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಂಜಾಬ್, ಕೇರಳ, ಗುಜರಾತ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ದಾಳಿ ನಡೆದಿದೆ. 25 ಮೊಬೈಲ್‌, 6 ಲ್ಯಾಪ್‌ಟಾಪ್‌, 4 ಹಾರ್ಡ್‌ಡಿಸ್ಕ್‌, ನಗದು, ವಿವಿಧ ದೇಶಗಳ ಕರೆನ್ಸಿ ನೋಟುಗಳು ಹಾಗೂ ಇತರೆ ದಾಖಲೆಗಳನ್ನು ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

‘ಬೆಂಗಳೂರಿನ ಸೈಯದ್ ಕೈಲ್, ಮಂಗಳೂರಿನ ನವೀದ್, ದಕ್ಷಿಣ ಕನ್ನಡದ ಬಿಜ್ಜು, ಪಶ್ಚಿಮ ಬಂಗಾಳದ ಮಯೂರ್ ಚಕ್ರಬೋರ್ತಿ, ಪಂಜಾಬ್‌ನ ನವಜೋತ್ ಸಿಂಗ್, ಗುಜರಾತ್‌ನ ಹಾರ್ದಿಕ್ ಕುಮಾರ್, ಕರಣ್‌ಕುಮಾರ್, ಕೇರಳದ ಜಾನ್ಸನ್, ತಮಿಳುನಾಡಿನ ಮುಸ್ತಾಕ್ ಅಹ್ಮದ್ ಸತೀಕ್‌ ಅಲಿ, ಮೊಬಿತ್, ಹಸನ್ ಅಲ್ ಬಸ್ಸಮ್‌ಗೆ ಸೇರಿದ್ದ ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಇದರಲ್ಲಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಹಲವರಿಗೆ ನೋಟಿಸ್‌ ನೀಡಿ ವಿಚಾರಣೆಗೆ ಕರೆಯಲಾಗಿದೆ. ಕೆಲವರು ತಲೆಮರೆಸಿಕೊಂಡಿದ್ದಾರೆ’ ಎಂದು ಎನ್‌ಐಎ ತಿಳಿಸಿದೆ.

ADVERTISEMENT

ಸಂಚು ಭೇದಿಸಿದ್ದ ಸಿಸಿಬಿ ಪೊಲೀಸರು: ಬೆಂಗಳೂರು ಹೆಬ್ಬಾಳದ ಸುಲ್ತಾನ್‌ಪಾಳ್ಯದ ಮನೆಯೊಂದರ ಮೇಲೆ 2023ರ ಜುಲೈ 18ರಂದು ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಶಂಕಿತರಾದ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ (30) ಹಾಗೂ ಮೊಹಮ್ಮದ್ ಉಮರ್‌ನನ್ನು ಬಂಧಿಸಿದ್ದರು. ಭಯೋತ್ಪಾದನಾ ಕೃತ್ಯಕ್ಕೆ ಪ್ರಚೋದಿಸುತ್ತಿದ್ದ ಆರೋಪದಡಿ ಶಂಕಿತ ಉಗ್ರ ಟಿ. ನಾಸೀರ್‌ನನ್ನೂ ಸೆರೆ ಹಿಡಿದಿದ್ದರು.

ಕಾನೂನುಬಾಹಿರ ಚಟುವಟಿಕೆಗಳ ‌ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಎನ್‌ಐಎ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಹೊಣೆಯನ್ನೂ ಎನ್‌ಐಎ ವಹಿಸಿಕೊಂಡಿದೆ.

ಜೈಲಿನಲ್ಲಿ ವಿಚಾರಣೆ: ಕೆಫೆ ಬಾಂಬ್ ಸ್ಫೋಟ ಹಾಗೂ ಬಾಂಬ್‌ ಸ್ಫೋಟಕ್ಕೆ ಸಂಚು ಎರಡೂ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳ ತಂಡಗಳು, ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸೋಮವಾರ (ಮಾ. 4) ಭೇಟಿ ನೀಡಿದವು.

‘ಶಂಕಿತ ಉಗ್ರ ಟಿ. ನಾಸೀರ್ ಹಾಗೂ ಇತರೆ ಶಂಕಿತರನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು. ಪ್ರಕರಣ ಸಂಬಂಧ ಕೆಲ ಪುರಾವೆಗಳನ್ನು ಸಂಗ್ರಹಿಸಿದರು. ಇದೇ ಮಾಹಿತಿ ಆಧರಿಸಿ ಮಂಗಳವಾರ ದಾಳಿ ಮಾಡಿದ್ದಾರೆ. ದೇಶದಲ್ಲಿ ಬಾಂಬ್ ಸ್ಫೋಟ ಮಾಡಲು ಶಂಕಿತ ಉಗ್ರರು ಸಂಚು ರೂಪಿಸಿದ್ದ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಸ್ಫೋಟಕ್ಕೆ ಸಂಚು ಪ್ರಕರಣದಲ್ಲಿ ಶಂಕಿತರ ಬಳಿ 7 ನಾಡ ಪಿಸ್ತೂಲ್, 45 ಗುಂಡುಗಳು, 4 ವಾಕಿಟಾಕಿ ಮಾದರಿಯ ಟ್ರಿಗರ್, 12 ಮೊಬೈಲ್, ಡ್ಯಾಗರ್ ಹಾಗೂ 4 ಗ್ರೆನೇಡ್‌ಗಳು ಪತ್ತೆಯಾಗಿದ್ದವು. ಇವುಗಳ ಬಗ್ಗೆಯೂ ಅಧಿಕಾರಿಗಳು ವಿಚಾರಣೆ ನಡೆಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಸಹ ಕೈದಿಗಳ ಪ್ರಚೋದನೆ: ‘ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಅಡಿಯಲ್ಲಿ ಲಷ್ಕರ್‌–ಎ–ತಯಬಾದ ಶಂಕಿತ ಉಗ್ರರು ಬಾಂಬ್‌ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು. ಜೈಲಿನಲ್ಲಿದ್ದ ಶಂಕಿತ ಉಗ್ರ ನಾಸೀರ್, ಸಹಕೈದಿಗಳನ್ನು ಪ್ರಚೋದಿಸಿ ಭಯೋತ್ಪಾದನಾ ಕೃತ್ಯ ಎಸಗಲು ಹೇಳುತ್ತಿದ್ದನೆಂಬುದು ತನಿಖೆಯಿಂದ ಗೊತ್ತಾಗಿತ್ತು’ ಎಂದು ಮೂಲಗಳು ಹೇಳಿವೆ.

‘ನಾಸೀರ್ ಸೇರಿದಂತೆ ಎಂಟು ಜನರ ವಿರುದ್ಧ ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ಜ.12 ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಇನ್ನೊಬ್ಬ ಆರೋಪಿ ಜುನೈದ್ ಅಹ್ಮದ್ ತಲೆಮರೆಸಿಕೊಂಡಿದ್ದಾನೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.