ADVERTISEMENT

ತೇಲಿ ಬರಲಿದೆ ಸಂವಾದಗಳ ಹಾಯಿದೋಣಿ!

27ರಿಂದ ಬೆಂಗಳೂರು ಸಾಹಿತ್ಯ ಉತ್ಸವ , ಚಳಿಯ ಸ್ವಾಗತಕ್ಕೆ ಮಾತಿನ ತೋರಣ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 19:26 IST
Last Updated 26 ಅಕ್ಟೋಬರ್ 2018, 19:26 IST

ಬೆಂಗಳೂರು: ಏಳು ವರ್ಷಗಳಿಂದ ನಗರದ ಸಂಸ್ಕೃತಿಯೊಳಗೆ ಹಾಸುಹೊಕ್ಕಾಗಿರುವ ಬೆಂಗಳೂರು ಸಾಹಿತ್ಯೋತ್ಸವ (ಬಿಎಲ್‌ಎಫ್‌), ನಗರಕ್ಕೆ ಚಳಿ ಕಾಲಿಡುತ್ತಿರುವ ಈ ಹೊತ್ತಿನಲ್ಲಿ ಸಾಹಿತ್ಯಾಸಕ್ತ ಮನಸ್ಸುಗಳನ್ನು ಬೆಚ್ಚಗಾಗಿಸಲು ಮತ್ತೆ ಬಂದಿದೆ.

ಎರಡು ದಿನಗಳ ಈ ಸಾಹಿತ್ಯದ ಹೊನಲಿನಲ್ಲಿ ಸಂವಾದಗಳ ಹಲವು ಹಾಯಿದೋಣಿಗಳು ತೇಲಿ ಬರಲಿವೆ. ಯಾವುದೇ ವಾದಕ್ಕೆ ಅಂಟಿಕೊಳ್ಳದೆ ಎಲ್ಲ ವಿಚಾರಧಾರೆ, ಸಿದ್ಧಾಂತಗಳಿಗೂ ವೇದಿಕೆ ಕಲ್ಪಿಸುವುದು ಸಂಘಟಕರ ಆಶಯವಾಗಿದೆ.

ಕಾರ್ಪೊರೇಟ್‌ ಸಂಸ್ಥೆಯ ಬೆಂಬಲವಿಲ್ಲದೆ ಜನಸಮುದಾಯವೇ ಹಣ ಕಲೆಹಾಕಿ ನಡೆಸುತ್ತಿರುವ ಉತ್ಸವ ಇದಾಗಿದೆ. ಹೋಟೆಲ್‌ ಲಲಿತ್‌ ಅಶೋಕ್‌ನಲ್ಲಿ ಅಕ್ಟೋಬರ್‌ 27 ಹಾಗೂ 28ರಂದು ಈ ಉತ್ಸವ ನಡೆಯಲಿದೆ. ಸಂವಾದಗಳಿಗೆ ಆತಿಥ್ಯ ಒದಗಿಸಲು ‘ಅಡ್ಜಸ್ಟ್‌ ಮಾಡಿ’, ‘ನಾಳೆ ಬಾ’, ‘ದಿ ರೆಡ್‌ ಕೌಚ್‌’, ‘ಮಾಲ್ಗುಡಿ’ ಮತ್ತು ‘ನಾರ್ನಿಯಾ’ ವೇದಿಕೆಗಳು ಸಜ್ಜಾಗಿವೆ.

ADVERTISEMENT

ರಾಮಚಂದ್ರ ಗುಹಾ, ಗಿರೀಶ ಕಾರ್ನಾಡ, ಸಿ.ಎನ್‌. ರಾಮಚಂದ್ರನ್‌, ಶಶಿ ದೇಶಪಾಂಡೆ, ಅರುಂಧತಿ ನಾಗ್‌, ಶೋಭಾ ಡೇ ಅವರಂತಹ ಹಿರಿಯರಿಂದ ಹಿಡಿದು ದಿವ್ಯ ಪ್ರಕಾಶ ದುಬೆ, ಕೃತಿ ಕಾರಂತ, ಕೃಷ್ಣಾ ಉದಯಶಂಕರ್‌, ಶುಭಾಂಗಿ ಸ್ವರೂಪ್‌ ಅವರಂತಹ ಯುವಕ–ಯುವತಿಯರವರೆಗೆ ಎಲ್ಲ ವಯೋಮಾನದ ಸಾಧಕರನ್ನು ಪ್ರೀತಿಯಿಂದ ಕರೆದು, ಕೈಗೆ ಮೈಕ್‌ ಕೊಡುತ್ತಿರುವ ಉತ್ಸವ ಇದು.

‘ಸಾಹಿತ್ಯ, ಸಿನಿಮಾ, ಉದ್ಯಮ, ಭಾಷೆ... ಹೀಗೆ ನಾನಾ ಆಯಾಮಗಳಿಂದ ನಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳುವ ಪ್ರಯತ್ನ ಈ ಉತ್ಸವದಲ್ಲಿ ನಡೆಯಲಿದೆ’ ಎನ್ನುತ್ತಾರೆ ಸಂಘಟನಾ ಸಲಹೆಗಾರರು.

ಮಕ್ಕಳಿಗೂ ಉತ್ಸವದಲ್ಲಿ ಅವಕಾಶ ಒದಗಿಸಲು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮಕ್ಕಳ ಗೋಷ್ಠಿಗಾಗಿ ಪ್ರತ್ಯೇಕವಾದ ಎರಡು ವೇದಿಕೆಗಳ (ಮಾಲ್ಗುಡಿ ಮತ್ತು ನಾರ್ನಿಯಾ) ವ್ಯವಸ್ಥೆ ಮಾಡಲಾಗಿದೆ. ಕೌಟುಂಬಿಕ ಸಾಹಿತ್ಯ ಉತ್ಸವ ಇದಾಗಬೇಕು ಎನ್ನುವುದು ಸಂಘಟಕರ ಆಶಯವಾಗಿದೆ.

ಹೊಸ ಲೇಖಕರನ್ನು ಪ್ರಕಾಶಕರು, ಸಾಹಿತ್ಯ ಕೃತಿಗಳ ಸಂಪಾದಕರು ಹಾಗೂ ಏಜೆಂಟರಿಗೆ ನೇರವಾಗಿ ಪರಿಚಯಿಸುವ ಲಿಟ್‌ಮಾರ್ಟ್‌ನಲ್ಲಿ ಅವಕಾಶ ಗಿಟ್ಟಿಸಲು ಈ ಸಲವೂ ಭಾರಿ ಪೈಪೋಟಿ ಕಂಡುಬಂದಿದೆ. ಯುವ ಲೇಖಕರು ತಮ್ಮ ಪರಿಕಲ್ಪನೆ ಕುರಿತು ಪ್ರಕಾಶಕರ ಜತೆ ಚರ್ಚಿಸಲು ಸಿಗುವಂತಹ ವಿಶಿಷ್ಟ ಅವಕಾಶ ಇದು. ಸಣ್ಣ–ಸಣ್ಣ ಗುಂಪುಗಳು ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ಆಗುವಂತೆ ಗೋಷ್ಠಿಗಳನ್ನು ರೂಪಿಸಲಾಗಿದೆ.

ಸಾಹಿತ್ಯಾಸಕ್ತರು ಉತ್ಸವದ ಎರಡನೇ ದಿನವಾದ ಭಾನುವಾರ ‘ಬೊಳುವಾರು ಜೊತೆ ಮುಸ್ಸಂಜೆ ಮಾತು’ ಕೇಳಿಸಿಕೊಳ್ಳಬಹುದು. ‘ಮೋಹನಸ್ವಾಮಿ’ಯ ಕಥನ ವಾಚನಾಭಿನಯವೂ ಅದೇ ದಿನ ಮಧ್ಯಾಹ್ನ ನಡೆಯಲಿದೆ. ಅಮೆರಿಕದಲ್ಲಿ ಸದ್ಯ ನಡೆದಿರುವ ಟ್ರಂಪ್‌ ಆಧಿಪತ್ಯದ ದಿನಗಳ ಮೇಲೆ ‘ಟ್ರಂಪೇನ್‌ ಟೈಮ್ಸ್‌’ ಗೋಷ್ಠಿಯಲ್ಲಿ ಪತ್ರಕರ್ತ ಚಿದಾನಂದ ರಾಜಘಟ್ಟ ಬೆಳಕು ಚೆಲ್ಲಲಿದ್ದಾರೆ.

ಮಲೆಯಾಳಿಗರು, ತಮಿಳರು ಮತ್ತು ಕನ್ನಡಿಗರು ಜತೆಯಾಗಿ ನಡೆಸುತ್ತಿರುವ ಉತ್ಸವವಿದು. ಭಾಷಾ ವೈವಿಧ್ಯ ತುಂಬಿದೆ. ಎರಡೂ ದಿನಗಳಲ್ಲಿ ಇಂಗ್ಲಿಷ್‌ ಜತೆಗೆ ಕನ್ನಡದ ಗೋಷ್ಠಿಗಳು ನಡೆಯಲಿವೆ.

ಮೊದಲ ದಿನದ ವಿಶಿಷ್ಟ ಗೋಷ್ಠಿಗಳು

ಮಧ್ಯಾಹ್ನ 3.30: ದಿ ಡೈರಿ ಆಫ್‌ ಎ ಪೊಲಿಟಿಕಲ್‌ ಈಡಿಯಟ್‌

ಜಸ್ಮಿನಾ ತೆಸಾನೋವಿಕ್‌, ಶೋಮಾ ಚೌಧರಿ

‌ಸಂಜೆ 6.00: ಈಸ್‌ ದೇರ್‌ ಆ್ಯನ್‌ ಇಂಡಿಯನ್‌ ರೋಡ್‌ ಟು ಈಕ್ವ್ಯಾಲಿಟಿ

ರಾಮಚಂದ್ರ ಗುಹಾ

ರಾತ್ರಿ 7.00: ಎಡಿಟರ್ಸ್‌ ಕಟ್‌: ರೋಡ್‌ ಟು 2019 ಮುಕುಂದ್‌ ಪದ್ಮನಾಭನ್‌, ನೀಲಂಜನ್‌ ಮುಖ್ಯೋಪಾಧ್ಯಾಯ, ಆರ್‌.ಸುಕುಮಾರ್‌, ಸಬಾ ನಕ್ವಿ, ಆಶುತೋಷ್‌ ವಾರ್ಸ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.