ADVERTISEMENT

ರಕ್ತದ ಕ್ಯಾನ್ಸರ್: 3 ವರ್ಷದ ಮಗುವಿಗೆ ಮರಳಿದ ದೃಷ್ಟಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 16:44 IST
Last Updated 6 ಜುಲೈ 2021, 16:44 IST

ಬೆಂಗಳೂರು: ರಕ್ತದ ಕ್ಯಾನ್ಸರ್‌ ಕಾಯಿಲೆಯಿಂದ ದೃಷ್ಟಿ ಕಳೆದುಕೊಂಡಿದ್ದ 3 ವರ್ಷದ ಮಗುವಿಗೆ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಮಗುವಿಗೆ ದೃಷ್ಟಿ ಮರಳಿದೆ.

ದುಬೈನಲ್ಲಿ ವಾಸವಿದ್ದ ಹೆಣ್ಣು ಮಗು ‘ಅಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ’ ಎಂಬ ರಕ್ತ ಸಂಬಂಧಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಳು. ಈ ಕ್ಯಾನ್ಸರ್‌ನಿಂದ ಮಗು ತನ್ನ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡಿತ್ತು. ಮಗುವನ್ನು ತಪಾಸಣೆ ಮಾಡಿದ ಡಾ. ನೀಮಾ ಭಟ್ ಮತ್ತು ಡಾ.ಮಂಗೇಶ್ ಪಿ. ಕಾಮತ್ ನೇತೃತ್ವದ ವೈದ್ಯರ ತಂಡ, ಮಗುವಿನ ಸಹೋದರಿಯ ಅಸ್ಥಿಮಜ್ಜೆ ಪಡೆದು, ಕಸಿ ಮಾಡಿದ್ದಾರೆ. ರಕ್ತ ಕ್ಯಾನ್ಸರ್‌ಗೆ ನೀಡಲಾಗಿರುವ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

‘ರಕ್ತದ ಕ್ಯಾನ್ಸರ್ ಎದುರಿಸುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡಲು ವಯಸ್ಸು ಸವಾಲಾಗಿತ್ತು. ಐವಿ ಕೀಮೋಥೆರಪಿಯೊಂದಿಗೆ ಚಿಕಿತ್ಸೆ ಪ್ರಾರಂಭಿಸಲಾಯಿತು. ಆದರೆ, ಈ ಚಿಕಿತ್ಸೆಗೆ ಮಗು ಸ್ಪಂದಿಸಲಿಲ್ಲ. ಸಣ್ಣ ಮಗುವಾದ್ದರಿಂದ ಅತಿ ಸೂಕ್ಷ್ಮತೆಯಿಂದ ಚಿಕಿತ್ಸೆ ನೀಡಬೇಕಾಯಿತು. 3 ಡೋಸ್ ಕೀಮೋಥೆರಪಿ ಬಳಿಕ ಮಗುವಿಗೆ ಮೊದಲು ಬಲಗಣ್ಣಿನ ದೃಷ್ಟಿ ಮರಳಿತು. ಬಳಿಕ ಇಮ್ಯುನೊಥೆರಪಿ ಮಾಡಿ, ಅಸ್ಥಿಮಜ್ಜೆ ಕಸಿ ಮಾಡಲಾಯಿತು. ಈಗ ಮಗುವು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದೆ’ ಎಂದು ಪ್ರಕಟಣೆಯಲ್ಲಿ ಡಾ. ನೀಮಾ ಭಟ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.