ಬೆಂಗಳೂರು: ಕೋವಿಡ್ ಜಯಿಸಿದ 22 ವರ್ಷದ ಕೇರಳದ ಟೆಕ್ಕಿಯೊಬ್ಬರು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಗರದ ರೋಗಿಯೊಬ್ಬರಿಗೆ ರಕ್ತದ ಆಕರಕೋಶ (ಬ್ಲಡ್ ಸ್ಟೆಮ್ ಸೆಲ್) ದಾನ ಮಾಡಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಮಿಥುಲ್ ರಕ್ತದ ಆಕರ ಕೋಶಗಳ ನೋಂದಣಿ ಸೇವಾ ಸಂಸ್ಥೆಯಾದ ‘ಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇಷನ್’ ಅಡಿ ಹೆಸರು ನೋಂದಾಯಿಸಿಕೊಂಡಿದ್ದರು. ಮಾರ್ಚ್ ತಿಂಗಳಲ್ಲಿ ಅವರು ರಕ್ತದ ಆಕರ ಕೋಶ ದಾನ ಮಾಡಲು ನಗರಕ್ಕೆ ಬಂದಿದ್ದರು. ಆ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿದ ಕಾರಣ ದಾನ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ, ಈಗ ಪುನಃ ಬೆಂಗಳೂರಿಗೆ ಬಂದು ರಕ್ತದ ಆಕರ ಕೋಶವನ್ನು ದಾನ ಮಾಡಿದ್ದಾರೆ.
‘ರೋಗಿಯೊಬ್ಬರಿಗೆ ನನ್ನರಕ್ತದ ಆಕರ ಕೋಶ ಹೊಂದಾಣಿಕೆಯಾಗುತ್ತದೆ ಎಂದು ತಿಳಿದಾಗ ಅತೀವ ಸಂತೋಷವಾಯಿತು. ಆದರೆ, ಕೋವಿಡ್ ಪೀಡಿತನಾದ ಕಾರಣ ದಾನ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ರೋಗಿಯ ಜೀವಕ್ಕೆ ಇನ್ನಷ್ಟು ಅಪಾಯವಾಗಬಹುದು ಎಂದು ಚಿಂತೆಗೆ ಒಳಗಾಗಿದ್ದೆ. ಕೋವಿಡ್‌ನಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡ ಬಳಿಕ ರಕ್ತದ ಆಕರ ಕೋಶವನ್ನು ದಾನ ಮಾಡಿದೆ. ಹೆತ್ತವರು ನನಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿದರು’ ಎಂದು ಮಿಥುನ್ ತಿಳಿಸಿದರು.
ಡಿಕೆಎಂಎಸ್-ಬಿಎಂಎಸ್‌ಟಿ ಫೌಂಡೇಷನ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ಯಾಟ್ರಿಕ್ ಪಾಲ್, ‘ಶೇ 30ರಷ್ಟು ರೋಗಿಗಳಿಗೆ ಮಾತ್ರ ಕುಟುಂಬದ ಸದಸ್ಯರು ಅಥವಾ ಸಂಬಂಧಿಗಳ ರಕ್ತದ ಆಕರ ಕೋಶ ಹೊಂದಾಣಿಕೆಯಾಗುತ್ತದೆ. ಶೇ 70ರಷ್ಟು ರೋಗಿಗಳಿಗೆ ರಕ್ತದ ಆಕರ ಕೋಶ ಹೊಂದಾಣಿಕೆಯಾಗುವ ದಾನಿಗಳನ್ನು ಹುಡುಕಬೇಕಾಗುತ್ತದೆ. ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಕಾಪಾಡಲು ರಕ್ತದ ಆಕರ ಕೋಶ ಸಹಾಯಕ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.