ADVERTISEMENT

ವಿದ್ವತ್ತಿನ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ: ಸಾಹಿತಿ ಹಂ.ಪ. ನಾಗರಾಜಯ್ಯ

ಜಯಚಂದ್ರಗೆ ‘ಬಿ.ಎಂ.ಶ್ರೀ. ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 15:21 IST
Last Updated 21 ಜುಲೈ 2024, 15:21 IST
ಸಾಹಿತಿ ಹಂ.ಪ. ನಾಗರಾಜಯ್ಯ
ಸಾಹಿತಿ ಹಂ.ಪ. ನಾಗರಾಜಯ್ಯ   

ಬೆಂಗಳೂರು: ‘ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದ್ದರೂ, ವಿದ್ವತ್ತಿನ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ಕುಂಠಿತವಾಗುತ್ತಿದೆ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು. 

ಬಿ.ಎಂ.ಶ್ರೀ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಾಹಿತಿ ಎಂ.ಎ. ಜಯಚಂದ್ರ ಅವರಿಗೆ ‘ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ಪ್ರಶಸ್ತಿಯು ₹25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

‘ಜಲಕ್ಷಾಮ ಉಂಟಾದರೆ ಮಳೆಗಾಳದಲ್ಲಿ ನೀರು ಉಕ್ಕುತ್ತದೆ. ವಾಯುಮಾಲಿನ್ಯ ಸೇರಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ, ವಿದ್ವತ್ತಿನ ಬರಗಾಲ ಉಂಟಾದಲ್ಲಿ ನೂರು ವರ್ಷಗಳಾದರೂ ಅದನ್ನು ತುಂಬುವುದು ಕಷ್ಟ. ಈಗ ವಿದ್ವತ್ತಿನ ಕ್ಷೇತ್ರ ಅವಸರ್ಪಿಣಿ ಯುಗದಲ್ಲಿದೆ. 50–100 ವರ್ಷಗಳು ಹಿಂದಕ್ಕೆ ಹೋದಲ್ಲಿ ವಿದ್ವತ್ತಿನ ಪ್ರಕಾಶ ಕಾಣಬಹುದು. ವಿದ್ವತ್‌ ಕೂಡ ಒಂದು ರೀತಿಯ ಬೆಳಕಾಗಿದೆ. ವಿದ್ಯುತ್ ಹೋದರೆ ಬೆಳಕು ಕೂಡ ಹೋಗುತ್ತದೆ. ವಿದ್ವತ್ ಒಮ್ಮೆ ಸೃಷ್ಟಿಯಾದರೆ ಅದು ನಾಶವಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಮಾತನಾಡಿ, ‘ವಿದ್ವತ್ ಹಾಗೂ ಸಂಶೋಧನೆಯಲ್ಲಿ ಪ್ರಾಮಾಣಿಕತೆ, ಶಿಸ್ತು ಮತ್ತು ಶ್ರದ್ಧೆ ಅಗತ್ಯ. ಈ ಮೂರೂ ವಿಚಾರಗಳನ್ನು ಕ್ರೋಡೀಕರಿಸಿಕೊಂಡು ಸಂಶೋಧನೆ ಮಾಡುವವರ ಸಂಖ್ಯೆ ಇತ್ತೀಚೆಗೆ ವಿರಳ. ಇಂತಹ ಸಂದರ್ಭದಲ್ಲಿಯೂ ಹೊಸ ವಿದ್ವಾಂಸರು ಹುಟ್ಟಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಆದರ್ಶಪ್ರಾಯವಾಗಿರುವ ಕೆಲಸವನ್ನು ಜಯಚಂದ್ರ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಮಾತನಾಡಿ, ‘ಕಂಬತ್ತಳ್ಳಿಯನ್ನು ಬೆಂಗಳೂರಿಗೆ ತರಬೇಕು ಎಂಬ ಹಂಬಲ ಮೂಡಿತ್ತು. ಆದ್ದರಿಂದ ತಂದೆ–ತಾಯಿ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸಲಾಯಿತು. ಜೈನ ಸಾಹಿತ್ಯ ಮತ್ತು ಸಂಸ್ಕೃತಿಗೆ ಸೇವೆ ಸಲ್ಲಿಸಿದ ಒಬ್ಬರಿಗೆ ಬಹುಮಾನ ಅಥವಾ ಪುರಸ್ಕಾರವನ್ನು ನೀಡಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.