ADVERTISEMENT

ಅಗಲಿದ ಚೇತನಗಳಿಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ನುಡಿನಮನ

ವೆಂಕಟಸುಬ್ಬಯ್ಯ, ದೊರೆಸ್ವಾಮಿ ಸೇರಿದಂತೆ ಇತ್ತೀಚೆಗೆ ನಿಧನರಾದವರ ಸಾಧನೆ ಮೆಲುಕು

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 21:43 IST
Last Updated 29 ಜೂನ್ 2021, 21:43 IST
ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ನಗರದಲ್ಲಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಪಿ.ವಿ. ನಾರಾಯಣ, ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ, ಆರ್. ಲಕ್ಷ್ಮೀನಾರಾಯಣ, ಬೈರಮಂಗಲ ರಾಮೇಗೌಡ, ಎಚ್‌.ಎಸ್.ಎಂ. ಪ್ರಕಾಶ್ ಮತ್ತಿತರರು ಪ್ರೊ.ಜಿ. ವೆಂಕಟಸುಬ್ಬಯ್ಯ, ಎಚ್‌.ಎಸ್. ದೊರೆಸ್ವಾಮಿ, ಸಿದ್ಧಲಿಂಗಯ್ಯ, ಜರಗನಹಳ್ಳಿ ಶಿವಶಂಕರ್, ಪ್ರೊ.ಬಿ.ಎಸ್. ಸಣ್ಣಯ್ಯ ಹಾಗೂ ಕೋ.ವೆಂ. ರಾಮಕೃಷ್ಣೇಗೌಡ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು– ಪ್ರಜಾವಾಣಿ ಚಿತ್ರ
ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ನಗರದಲ್ಲಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಪಿ.ವಿ. ನಾರಾಯಣ, ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ, ಆರ್. ಲಕ್ಷ್ಮೀನಾರಾಯಣ, ಬೈರಮಂಗಲ ರಾಮೇಗೌಡ, ಎಚ್‌.ಎಸ್.ಎಂ. ಪ್ರಕಾಶ್ ಮತ್ತಿತರರು ಪ್ರೊ.ಜಿ. ವೆಂಕಟಸುಬ್ಬಯ್ಯ, ಎಚ್‌.ಎಸ್. ದೊರೆಸ್ವಾಮಿ, ಸಿದ್ಧಲಿಂಗಯ್ಯ, ಜರಗನಹಳ್ಳಿ ಶಿವಶಂಕರ್, ಪ್ರೊ.ಬಿ.ಎಸ್. ಸಣ್ಣಯ್ಯ ಹಾಗೂ ಕೋ.ವೆಂ. ರಾಮಕೃಷ್ಣೇಗೌಡ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಇತ್ತೀಚೆಗೆ ನಿಧನರಾದ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ, ಕವಿ ಸಿದ್ಧಲಿಂಗಯ್ಯ, ಜರಗನಹಳ್ಳಿ ಶಿವಶಂಕರ್, ಸಂಶೋಧಕ ಪ್ರೊ.ಬಿ.ಎಸ್. ಸಣ್ಣಯ್ಯ ಹಾಗೂ ಲೇಖಕ ಕೋ.ವೆಂ. ರಾಮಕೃಷ್ಣೇಗೌಡ ಅವರ ಜೀವನದ ಹಾದಿ, ಸಾಮಾಜಿಕ ಹೋರಾಟ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಮೆಲುಕು ಹಾಕಲಾಯಿತು.

ಇದಕ್ಕೆ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ವೇದಿಕೆ ಕಲ್ಪಿಸಿತ್ತು. ನಗರದಲ್ಲಿ ಪ್ರತಿಷ್ಠಾನ ಮಂಗಳವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅಗಲಿದ ಗಣ್ಯರಿಗೆ ಒಡನಾಡಿಗಳು ಹಾಗೂ ಆಪ್ತರು ನುಡಿನಮನ ಸಲ್ಲಿಸಿದರು. ಎಲ್. ಹನುಮಂತಯ್ಯ, ಪಿ.ವಿ. ನಾರಾಯಣ, ವಿಜಯಾ ಸುಬ್ಬರಾಜ್, ನಳಿನಿ ವೆಂಕಟೇಶ್, ಪದ್ಮಿನಿ ನಾಗರಾಜು, ಎಚ್‌.ಎಸ್.ಎಂ. ಪ್ರಕಾಶ್, ಬೈರಮಂಗಲ ರಾಮೇಗೌಡ, ಪ್ರೊ. ಶಾಂತರಾಜು, ಬಿ.ಆರ್. ರವೀಂದ್ರನಾಥ್ ನೆನಪಿನ ಪುಟಗಳನ್ನು ತಿರುವಿ ಹಾಕಿದರು.

ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ‘ವೆಂಕಟಸುಬ್ಬಯ್ಯ ಅವರು ಅತ್ಯಂತ ಸಂಯಮದಿಂದ ತಮ್ಮ ಕೆಲಸ ಮಾಡುತ್ತಿದ್ದರು. ಕನ್ನಡ ನಿಘಂಟಿಗೆ ದೊಡ್ಡ ಸೇವೆ ಅವರಿಂದ ಸಂದಿದೆ. ದೊರೆಸ್ವಾಮಿ ಅವರು ಎಲ್ಲ ಜನಪರ ಚಳವಳಿಯಲ್ಲಿ ದೊಡ್ಡ ಧ್ವನಿಯಾಗಿ ನಮ್ಮ ಮುಂದೆ ಇದ್ದರು. ಸಿದ್ಧಲಿಂಗಯ್ಯ ಅವರು ಜನರ ನಡುವೆ ಇದ್ದು, ಸಾಹಿತ್ಯ ಸೃಷ್ಟಿಸಿದರು. ಹೀಗಾಗಿ, ಜನಪರ ಕವಿಯಾಗಿ ಗುರುತಿಸಲ್ಪಟ್ಟರು’ ಎಂದರು.

ADVERTISEMENT

‘ಹನಿ ಕವಿತೆಯನ್ನು ಜರಗನಹಳ್ಳಿ ಶಿವಶಂಕರ್ ಅವರಷ್ಟು ಪರಿಣಾಮಕಾರಿಯಾಗಿ ಬರೆಯುವವರು ಕಡಿಮೆ. ಆಳವಾದ ವಿಷಯ ಮತ್ತು ಜೀವನ ಪ್ರೀತಿ ಹನಿ ಕವಿತೆಯಲ್ಲಿ ಇರುತ್ತಿತ್ತು. ರಾಮಕೃಷ್ಣೇಗೌಡ ಅವರು ಜೀವ ಪರವಾದ ವ್ಯಕ್ತಿಯಾಗಿದ್ದರು’ ಎಂದರು.

ಸಾಹಿತಿ ಪಿ.ವಿ. ನಾರಾಯಣ, ‘ವೆಂಕಟಸುಬ್ಬಯ್ಯ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರು ಅಚ್ಚಳಿಯದ ಕೊಡುಗೆ ನೀಡಿದ್ದಾರೆ. ದೊರೆಸ್ವಾಮಿ ಅವರು ಜೀವನದುದ್ದಕ್ಕೂ ಚಳವಳಿಯಲ್ಲಿ ತೊಡಗಿದ್ದರು. ಸಿದ್ಧಲಿಂಗಯ್ಯ ತಮ್ಮ ಸಾಹಿತ್ಯದ ಮೂಲಕ ಹೋರಾಟಕ್ಕೆ ಪ್ರೇರಣೆ ನೀಡಿದರು. ಜರಗನಹಳ್ಳಿ ಶಿವಶಂಕರ್ ಹನಿಗವನಗಳು ತುಂಬಾ ಪರಿಣಾಮಕಾರಿಯಾಗಿದ್ದವು’ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಆರ್. ಲಕ್ಷ್ಮೀನಾರಾಯಣ, ‘ವೆಂಕಟಸುಬ್ಬಯ್ಯ ಅವರು ಪ್ರಾಚೀನ ಸಾಹಿತ್ಯದ ಜತೆಗೆ ಹೊಸಗನ್ನಡ ಸಾಹಿತ್ಯವನ್ನೂ ವಿಶ್ಲೇಷಣೆಗೆ ಒಳಪಡಿಸುತ್ತಿದ್ದರು. ದೊರೆಸ್ವಾಮಿ ಈ ಸಮಾಜದ ಸಾಕ್ಷಿ ಪ್ರಜ್ಞೆಯಂತಿದ್ದರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.