ADVERTISEMENT

ನೇರಳೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ನಮ್ಮ ಮೆಟ್ರೊ

ಬಿಎಂಆರ್‌ಸಿಎಲ್‌ನ ಈ ಸೌಲಭ್ಯದಿಂದ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 13:13 IST
Last Updated 5 ಜುಲೈ 2024, 13:13 IST
<div class="paragraphs"><p>ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೊ</p></div>

ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೊ

   

ಬೆಂಗಳೂರು: ‘ನಮ್ಮ ಮೆಟ್ರೊ’ ನೇರಳೆ ಮಾರ್ಗದಲ್ಲಿ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಹೊರಡುವ ರೈಲುಗಳ ಸಂಖ್ಯೆಯನ್ನು 9 ಇದ್ದಿದ್ದನ್ನು 15ಕ್ಕೆ ಹೆಚ್ಚಳ ಮಾಡಲಾಗಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಜುಲೈ 6ರಿಂದ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಹತ್ತು ರೈಲುಗಳು ಪಟ್ಟಂದೂರು ಅಗ್ರಹಾರದವರೆಗೆ (ಐಟಿಪಿಎಲ್), ನಾಲ್ಕು ರೈಲು ವೈಟ್‌ಫೀಲ್ಡ್ ಮತ್ತು ಒಂದು ರೈಲು ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಚಲಿಸಲಿವೆ.

ADVERTISEMENT

ಬೆಳಿಗ್ಗೆ 10.25ರವರೆಗೆ ನಿಯಮಿತವಾಗಿ ಮೆಜೆಸ್ಟಿಕ್‌ ನಿಲ್ದಾಣದ ಮೂಲಕ ಹಾದುಹೋಗುವ ಮೆಟ್ರೊ ರೈಲುಗಳು ಎಂದಿನಂತೆ ಇರಲಿವೆ. ಅದರ ಜೊತೆಗೆ ಬೆಳಿಗ್ಗೆ 8.48, 8.58, 9.08, 9.18, 9.29, 9.39, 9.50, 10, 10.11, 10.21, 10.39, 10.50, 11.00, 11.22ಕ್ಕೆ ಹೆಚ್ಚುವರಿ ರೈಲುಗಳು ಸಂಚರಿಸಲಿವೆ.

ವೈಟ್‌ಫೀಲ್ಡ್‌ ಕಡೆಗೆ ರೈಲುಗಳನ್ನು ಹೆಚ್ಚಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಲಾಗಿದ್ದು, ಪ್ರಸ್ತುತ ಗರುಡಾಚಾರ್ ಪಾಳ್ಯ ಮೆಟ್ರೊ ನಿಲ್ದಾಣದಲ್ಲಿ ಕೊನೆಗೊಳ್ಳುವ 14 ರೈಲುಗಳಲ್ಲಿ, 6 ರೈಲುಗಳನ್ನು ಪಟ್ಟಂದೂರು ಅಗ್ರಹಾರ (ಐಟಿಪಿಎಲ್)/ ವೈಟ್‌ಫೀಲ್ಡ್‌ವರೆಗೆ ವಿಸ್ತರಿಸಲಾಗಿದೆ. ಗರುಡಾಚಾರ್ ಪಾಳ್ಯ ಮೆಟ್ರೊ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಪಟ್ಟಂದೂರು ಅಗ್ರಹಾರ ಕಡೆಗೆ ಪ್ರಯಾಣಿಸಲು ಮುಂದಿನ ರೈಲು 3.5 ನಿಮಿಷಗಳ ಆವರ್ತನದಲ್ಲಿ ಲಭ್ಯವಿರುತ್ತದೆ.

ಬೈಯಪ್ಪನಹಳ್ಳಿ ನಿಲ್ದಾಣದಿಂದ ಮೈಸೂರು ರಸ್ತೆ ನಿಲ್ದಾಣದ ಕಡೆಗೆ ಸಂಜೆ 4.40ರ ಬದಲು ಸಂಜೆ 4.20ರಿಂದ ಪ್ರತಿ 5 ನಿಮಿಷಕ್ಕೆ ಒಂದು ರೈಲು ಇರಲಿದೆ. ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.