ADVERTISEMENT

ಮೆಟ್ರೊ ಪಿಲ್ಲರ್ ದುರಂತ: ದಾಖಲೆಗಳ ಪರಿಶೀಲನೆ, ಪುರಾವೆಗಾಗಿ ಹುಡುಕಾಟ

ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿ ಬಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 20:34 IST
Last Updated 12 ಜನವರಿ 2023, 20:34 IST
ನಮ್ಮ ಮೆಟ್ರೊ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ ಉರುಳಿರುವ ಚಿತ್ರ
ನಮ್ಮ ಮೆಟ್ರೊ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ ಉರುಳಿರುವ ಚಿತ್ರ   

ಬೆಂಗಳೂರು: ಹೆಣ್ಣೂರು ಕ್ರಾಸ್ ಬಳಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ–ಮಗು ಮೃತಪಟ್ಟ ಪ್ರಕರಣದ ತನಿಖೆ ಮುಂದುವರಿಸಿರುವ ಗೋವಿಂದಪುರ ಪೊಲೀಸರು, ತಪ್ಪಿತಸ್ಥರ ವಿರುದ್ಧದ ಪುರಾವೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ತೇಜಸ್ವಿನಿ ಹಾಗೂ ಅವರ ಎರಡೂವರೆ ವರ್ಷದ ಮಗ ವಿಹಾನ್ ಸಾವಿನ ಸಂಬಂಧ ಪತಿ ಲೋಹಿತ್‌ಕುಮಾರ್ ಈಗಾಗಲೇ ದೂರು ದಾಖಲಿಸಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ನಾಗಾರ್ಜುನ್ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ನಿರ್ದೇಶಕರು ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಗುರುವಾರ ವಿಚಾರಣೆಗೆ ಒಳಪಡಿಸಿದರು.

ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಎನ್‌ಸಿಸಿ ಕಂಪನಿಯ ನಿರ್ದೇಶಕ ಚೈತನ್ಯ, ವಿಶೇಷ ಯೋಜನಾ ವ್ಯವಸ್ಥಾಪಕ ಮಾಥೈ, ಯೋಜನಾ ನಿರ್ದೇಶಕ ವಿಕಾಸ್‌ ಸಿಂಗ್‌, ಬಿಎಂಆರ್‌ಸಿಎಲ್‌ನ ಉಪ ಮುಖ್ಯ ಎಂಜಿನಿಯರ್ ವೆಂಕಟೇಶ ಶೆಟ್ಟಿ, ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ಬೆಂಡೆಕರಿ ಹಾಗೂ ಎಂಜಿನಿಯರ್‌ ಜಾಫರ್‌ ಸಾದಿಕ್‌ ವಿಚಾರಣೆಗೆ ಹಾಜರಾದರು. ತನಿಖಾಧಿಕಾರಿಗಳು ಸಿದ್ಧಪಡಿಸಿದ್ದ ಪ್ರಶ್ನೆಗಳಿಗೆ ಉತ್ತರಿಸಿ ಹೇಳಿಕೆ ನೀಡಿದರು.

ADVERTISEMENT

‘ಇದೊಂದು ಕಾಮಗಾರಿಗೆ ಸಂಬಂಧಪಟ್ಟ ಪ್ರಕರಣವಾಗಿದ್ದು, ಮೇಲ್ನೋಟಕ್ಕೆ ಕಂಡುಬರುವ ಪುರಾವೆಗಳನ್ನು ಆಧರಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗದು. ಇದೇ ಕಾರಣಕ್ಕೆ, ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ. ಸೂಕ್ತ ಪುರಾವೆಗಳು ಸಿಕ್ಕ ಬಳಿಕವೇ ಮುಂದಿನ ಕ್ರಮ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವಿಚಾರಣೆಗೆ ಬಂದಿದ್ದ ಆರೋಪಿಗಳು, ಯೋಜನೆ ವರದಿ ಸಲ್ಲಿಸಿದ್ದಾರೆ. ಯಾವ ರೀತಿಯಲ್ಲಿ ಪಿಲ್ಲರ್ ನಿರ್ಮಿಸಲಾಗುತ್ತಿತ್ತು. ಅದಕ್ಕೆ ಯಾವೆಲ್ಲ ವಸ್ತುಗಳನ್ನು ಬಳಸಲಾಗುತ್ತಿತ್ತು... ಹೀಗೆ ಹಲವು ಮಾಹಿತಿಗಳ ದಾಖಲೆಗಳನ್ನು ಒದಗಿಸಿದ್ದಾರೆ. ಎಲ್ಲವನ್ನೂ ಸುಪರ್ದಿಗೆ ಪಡೆಯಲಾಗಿದೆ. ಕೆಲವೇ ದಿನಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಲಿದ್ದು, ಅವಘಡಕ್ಕೆ ಕಾರಣವೇನು ಎಂಬುದು ತಿಳಿಯಲಿದೆ’ ಎಂದು ಅವರು ವಿವರಿಸಿದರು.

ಸ್ಥಳ ಪರಿಶೀಲನೆ ನಡೆಸಿದ ಡಿಸಿಪಿ: ಮೆಟ್ರೊ ಕಾಮಗಾರಿ ಸ್ಥಳದಲ್ಲಿ ಎನ್‌ಸಿಸಿ ಪರವಾಗಿ ಕೆಲಸ ಮಾಡುತ್ತಿದ್ದ ಯೋಜನಾ ನಿರ್ದೇಶಕ ವಿಕಾಸ್‌ ಸಿಂಗ್‌ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಡಿಸಿಪಿ ಭೀಮಾಶಂಕರ್ ಗುಳೇದ ಪರಿಶೀಲನೆ ನಡೆಸಿದರು. ಆರೋಪಿಯೂ ಆಗಿರುವ ವಿಕಾಸ್ ಸಿಂಗ್, ಪಿಲ್ಲರ್ ನಿರ್ಮಾಣ ಕೆಲಸವನ್ನು ವಿವರಿಸಿದರು. ಅದನ್ನು ಪೊಲೀಸರು ದಾಖಲಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.