ಬೆಂಗಳೂರು: ಹೆಣ್ಣೂರು ಕ್ರಾಸ್ ಬಳಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿ
ಬಿದ್ದಿದ್ದ ಸ್ಥಳಕ್ಕೆ ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ತಜ್ಞರು ಶುಕ್ರವಾರ ಭೇಟಿ ನೀಡಿ, ಪರಿಶೀಲಿಸಿದರು.
ತಾಯಿ–ಮಗು ಸಾವು ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಪುರಾವೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೈದರಾಬಾದ್ ಐಐಟಿ ತಜ್ಞರನ್ನು ಸಂಪರ್ಕಿಸಿದ್ದ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ ವೈಜ್ಞಾನಿಕ ವರದಿ ನೀಡುವಂತೆ ಕೋರಿದ್ದರು.
ಅದಕ್ಕೆ ಒಪ್ಪಿದ ಐಐಟಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಸ್. ಸುರಿಯಾ ಪ್ರಕಾಶ್ ಹಾಗೂ ಪ್ರಾಧ್ಯಾಪಕ ಡಾ. ಸುಬ್ರಮಣಿಯಂ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾದರಿ ಸಂಗ್ರಹಿಸಿತು.
ಬಿಎಂಆರ್‌ಸಿಎಲ್ ಹಾಗೂ ನಾಗಾರ್ಜುನ್ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ಅಧಿಕಾರಿಗಳು ಸ್ಥಳದಲ್ಲಿದ್ದರು. ಉರುಳಿಬಿದ್ದ ಕಬ್ಬಿಣದ ಚೌಕಟ್ಟು ಬಳಿ ಸಿಕ್ಕ ಕೆಲ ಮಾದರಿಗಳನ್ನು ಪರಿಶೀಲಿಸಿದ ತಜ್ಞರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸ್ಥಳದ ಅಳತೆ ಹಾಗೂ ಇತರೆ ತಾಂತ್ರಿಕ ಮಾಹಿತಿಗಳನ್ನು ತಜ್ಞರು ದಾಖಲಿಸಿಕೊಂಡರು. ಘಟನೆ ಹೇಗಾಯಿತು ? ಎಂಬ ಬಗ್ಗೆ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು ತಜ್ಞರಿಗೆ ವಿವರಣೆ ನೀಡಿದರು.
‘ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ. ಘಟನೆಗೆ ಕಾರಣವೇನು ಎಂಬುದನ್ನು ತಿಳಿಯಲು ಹೈದರಾಬಾದ್ ಐಐಟಿ ತಜ್ಞರಿಂದ ಪರಿಶೀಲನೆ ಮಾಡಿಸಲಾಗಿದೆ. ತ್ವರಿತವಾಗಿ ವರದಿ ನೀಡುವಂತೆ ಕೋರಲಾಗಿದೆ. ವರದಿ ಕೈ ಸೇರಿದ ಕೂಡಲೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಸಿಪಿ ಭೀಮಾಶಂಕರ್ ತಿಳಿಸಿದರು.
₹ 1 ಕೋಟಿ ಪರಿಹಾರಕ್ಕೆ ಒತ್ತಾಯ: ‘ಅವಘಡದಲ್ಲಿ ಮೃತಪಟ್ಟ ತಾಯಿ ತೇಜಸ್ವಿನಿ ಹಾಗೂ ಮಗು ವಿಹಾನ್ ಅವರ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು’ ಎಂದು ಅಖಿಲ ಭಾರತೀಯ ಭಾವಸಾರ ಕ್ಷತ್ರೀಯ ಸಮಾಜ ಒತ್ತಾಯಿಸಿದೆ.
ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಸಮಾಜದ ಮುಖಂಡರು, ‘ಅವಘಡಕ್ಕೆ ಕಾರಣವಾದ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಇದುವರೆಗೂ ಬಂಧಿಸಿಲ್ಲ. ಈ ಕ್ರಮ ಖಂಡನೀಯ. ಕೂಡಲೇ ಎಲ್ಲರನ್ನೂ ಬಂಧಿಸಿ, ಕಠಿಣ ಶಿಕ್ಷೆ ಕೊಡಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.