ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಕೆಲ ಬಸ್‌ಗಳಲ್ಲಿ ಈಗ ಎಲೆಕ್ಟ್ರಾನಿಕ್ ಟಿಕೆಟ್ ಮಷಿನ್ (ಇಟಿಎಂ) ಮೂಲಕ ಟಿಕೆಟ್ ನೀಡುತ್ತಿಲ್ಲ. ಹಳೇ ಪದ್ಧತಿಯಂತೆ ಪೂರ್ವ ಮುದ್ರಿತ ಟಿಕೆಟ್‌ಗಳನ್ನೇ ಪ್ರಯಾಣಿಕರಿಗೆ ವಿತರಿಸಲಾಗುತ್ತಿದೆ. ರಿಪೇರಿಗೆ ಕಳುಹಿಸಿದ್ದ 3 ಸಾವಿರಕ್ಕೂ ಹೆಚ್ಚು ಇಟಿಎಂಗಳು ಮೂಲೆಗೆ ಸೇರಿರುವುದು ಈ ಬದಲಾವಣೆಗೆ ಕಾರಣವಾಗಿದೆ.
ಸಂಸ್ಥೆಯ ಚತುರ ಸಾರಿಗೆ ವ್ಯವಸ್ಥೆಯಡಿ ಇಟಿಎಂಗಳ ಮೂಲಕ ಟಿಕೆಟ್ ವಿತರಿಸುವ ಮೂಲಕ ನಿರ್ವಾಹಕರ ಹೊರೆಯನ್ನು ಬಿಎಂಟಿಸಿ ಕಡಿಮೆ ಮಾಡಿತ್ತು. ಇದಕ್ಕಾಗಿ ಸುಮಾರು 10 ಸಾವಿರ ಇಟಿಎಂಗಳನ್ನು ಖರೀದಿ ಮಾಡಿತ್ತು.
ಇವುಗಳ ನಿರ್ವಹಣೆಯನ್ನುಟ್ರೈಮ್ಯಾಕ್ಸ್ ಐಟಿ ಇನ್ಫಾಸ್ಟ್ರಕ್ಚರ್ ಅಂಡ್ ಸರ್ವಿಸ್ ಕಂಪನಿ ಗುತ್ತಿಗೆ ಪಡೆದಿತ್ತು. ಈ ಕಂಪನಿ ಆರ್ಥಿಕವಾಗಿ ದಿವಾಳಿಯಾಗಿದ್ದು, ಕಾರ್ಯ ಸ್ಥಗಿತಗೊಳಿಸಿದೆ. ಇದರ ಪರಿಣಾಮ ಈಗ ಬಿಎಂಟಿಸಿ ಮೇಲೆ ಬೀರಿದೆ.
ರಿಪೇರಿಗೆ ಹೋಗಿದ್ದ3 ಸಾವಿರಕ್ಕೂ ಹೆಚ್ಚು ಇಟಿಎಂಗಳು ವಾಪಸ್ ಬಾರದ ಕಾರಣ ನಿರ್ವಾಹಕರು ಹಳೇ ಪದ್ಧತಿಯಂತೆ ಟಿಕೆಟ್ ಬಂಡಲ್‌ಗಳನ್ನು ಹಿಡಿದು ಸ್ಟೇಜ್‌ಗಳನ್ನು ಗುರುತು ಮಾಡಿ ಟಿಕೆಟ್ ವಿತರಿಸುತ್ತಿದ್ದಾರೆ.
ಬೇರೆ, ಬೇರೆ ನಿಲ್ದಾಣಗಳಲ್ಲಿ ರಾತ್ರಿ ತಂಗುವ ಬಸ್‌ಗಳ ನಿರ್ವಾಹಕರಿಗೆ ಮಾತ್ರ ಇಟಿಎಂಗಳನ್ನು ನೀಡಲಾಗುತ್ತಿದೆ. ಉಳಿದ ಮೂರು ಶಿಫ್ಟ್‌ಗಳ ನಿರ್ವಾಹಕರಿಗೆ ಪೂರ್ವ ಮುದ್ರಿತ ಟಿಕೆಟ್‌ಗಳನ್ನು ನೀಡಲಾಗುತ್ತಿದೆ ಎಂದು ನಿರ್ವಾಹಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಟಿಕೆಟ್ ಬಂಡಲ್, ದಿನದ ಪಾಸ್‌ಗಳನ್ನು ಹೊತ್ತು ತಿರುಗುವುದು ಒಂದೆಡೆ ಹೊರೆಯಾದರೆ, ಪ್ರತಿ ಸ್ಟೇಜ್‌ನಲ್ಲೂ ಟ್ರಿಪ್ ಶೀಟ್ ನಮೂದು ಮಾಡಿಕೊಳ್ಳಬೇಕು. ಪ್ರಯಾಣಿಕರು ಹೆಚ್ಚಿದ್ದ ಸಂದರ್ಭದಲ್ಲಿ ಟಿಕೆಟ್ ವಿತರಿಸಲು ಹೆಚ್ಚು ಸಮಯಾವಕಾಶ ಬೇಕು. ಈ ವೇಳೆ ಸ್ಟೇಜ್ ಗಮನಿಸದೆ ಮುಂದೆ ಹೋದರೆ ತನಿಖಾಧಿಕಾರಿಗಳಿಂದ ದಂಡ ಹಾಕಿಸಿಕೊಳ್ಳಬೇಕಾಗುತ್ತದೆ. ಇಟಿಎಂಗಳಿಗೆ ಹೊಂದಿಕೊಂಡಿದ್ದ ನಮಗೆ ಈಗ ತೊಂದರೆಯಾಗಿದೆ’ ಎಂದು ಅವರು ಹೇಳಿದರು.
ಇದು ನಿರ್ವಾಹಕರಿಗೆ ಮಾತ್ರವಲ್ಲ, ತನಿಖಾಧಿಕಾರಿಗಳಿಗೂ ತಲೆನೋವಾಗಿದೆ. ಇಟಿಎಂಗಳಲ್ಲಿ ಟ್ರಿಪ್‌ಶೀಟ್ ಪರಿಶೀಲನೆ ಸುಲಭವಾಗಿತ್ತು. ಒಂದು ಬಟನ್ ಒತ್ತಿದರೆ ಟ್ರಿಪ್ ವಿವರ ಪಡೆಯಬಹುದಾಗಿತ್ತು. ಈಗ ಟಿಕೆಟ್‌ಗಳ ಬಂಡಲ್‌ಗಳನ್ನು ಲೆಕ್ಕ ಹಾಕಿ, ಟ್ರಿಪ್ ಶೀಟ್ ಪರಿಶೀಲನೆ ನಡೆಸಬೇಕಾಗಿದೆ. ಅಲ್ಲದೇ, ಪಾಸ್ ಮತ್ತು ಮುದ್ರಣಕ್ಕೆ ಸಂಸ್ಥೆ ಹಣ ಖರ್ಚು ಮಾಡಬೇಕಿದೆ ಎಂದು ಹೇಳಿದರು.
ಪರ್ಯಾಯಕ್ಕೆ ಪ್ರಯತ್ನ
ಟ್ರೈಮ್ಯಾಕ್ಸ್ ಐಟಿ ಇನ್ಫಾಸ್ಟ್ರಕ್ಚರ್ ಎಂಬ ಕಂಪನಿಗೆ ಇಟಿಎಂಗಳ ನಿರ್ವಹಣೆ ಗುತ್ತಿಗೆ ನೀಡಲಾಗಿತ್ತು. ಈ ಕಂಪನಿ ದಿವಾಳಿಯಾಗಿರುವುದು ಸಮಸ್ಯೆಗೆ ಕಾರಣವಾಗಿದ್ದು, ಸರಿಪಡಿಸಲು ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಪ್ರಸಾದ್ ಹೇಳಿದರು.
‘ಟ್ರೈಮಾಕ್ಸ್ ಕಂಪನಿಯಿಂದ ಉಪಗುತ್ತಿಗೆ ಪಡೆದಿದ್ದ ‘ವೆರಿಪೋನ್’ ಎಂಬ ಕಂಪನಿಯನ್ನು ಸಂಪರ್ಕಿಸಲಾಗಿದೆ. ರಿಪೇರಿ ಮಾಡಿಕೊಡಲು ಮನವಿ ಮಾಡಿದ್ದೇವೆ. ಆ ಕಂಪನಿ ಕೂಡ ಒಪ್ಪಿಕೊಂಡಿದ್ದು, ಇನ್ನೊಂದು ತಿಂಗಳಲ್ಲಿ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.