ADVERTISEMENT

ಬ್ರೇಕ್ ಬದಲು ಆ್ಯಕ್ಸಲರೇಟರ್ ಒತ್ತಿದ್ದ ಆರೋಪ: BMTC ಬಸ್ ಡಿಕ್ಕಿ:ವಾಹನಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 15:08 IST
Last Updated 13 ಆಗಸ್ಟ್ 2024, 15:08 IST
ಕಾರಿಗೆ ಡಿಕ್ಕಿ ಹೊಡೆದಿರುವ ಬಿಎಂಟಿಸಿ ವೊಲ್ವೊ ಬಸ್‌. 
ಕಾರಿಗೆ ಡಿಕ್ಕಿ ಹೊಡೆದಿರುವ ಬಿಎಂಟಿಸಿ ವೊಲ್ವೊ ಬಸ್‌.    

ಬೆಂಗಳೂರು: ಹೆಬ್ಬಾಳದ ಎಸ್ಟೀಮ್ ಮಾಲ್ ಬಳಿ ಸೋಮವಾರ ಬಿಎಂಟಿಸಿ ವೋಲ್ವೊ ಬಸ್‌ವೊಂದು ಎಂಟು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ದ್ವಿಚಕ್ರ ವಾಹನ ಸವಾರರೊಬ್ಬರು ಗಾಯಗೊಂಡಿದ್ದಾರೆ.

ಬೆಳಿಗ್ಗೆ 9.30ರ ಸುಮಾರಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್ಎಸ್ಆರ್ ಲೇಔಟ್‌ಗೆ ಬಸ್‌ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಎದುರು ಚಲಿಸುತ್ತಿದ್ದ ನಾಲ್ಕು ಬೈಕ್‌ ಹಾಗೂ ಕಾರುಗಳಿಗೆ ಬಸ್‌ ಡಿಕ್ಕಿ ಹೊಡೆದಿದ್ದು, ಒಟ್ಟು ಎಂಟು ವಾಹನಗಳಿಗೆ ಹಾನಿಯಾಗಿದೆ.

ಗಾಯಗೊಂಡ ದ್ವಿಚಕ್ರ ವಾಹನ ಸವಾರ ಆಕಾಶ್‌ ಪಾಟೀಲ್‌ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.

ADVERTISEMENT

ಕಾರು ಹಾಗೂ ಬೈಕ್‌ಗೆ ಬಸ್‌ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಬಸ್‌ನಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆ್ಯಕ್ಸಲರೇಟರ್ ಒತ್ತಿದ ಚಾಲಕ?: ಬೈಕ್‌ಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಒಂದು ಕ್ಷಣ ಗಾಬರಿಗೊಂಡ ಚಾಲಕ ರಾಜಕುಮಾರ್, ಬ್ರೇಕ್ ಬದಲು ಆ್ಯಕ್ಸಲರೇಟರ್ ಒತ್ತಿದ್ದರು ಎನ್ನಲಾಗಿದೆ.

ಘಟನೆಯ ಸಂಪೂರ್ಣ ದೃಶ್ಯಗಳು ಬಸ್‌ನಲ್ಲಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತ ಸಂಭವಿಸುತ್ತಿದ್ದಂತೆ ನಿರ್ವಾಹಕ ‘ಬ್ರೇಕ್ ಒತ್ತಿ ಒತ್ತಿ...’ ಎಂದು ಚಾಲಕ ರಾಜಕುಮಾರ್‌ ಅವರಿಗೆ ಹೇಳುತ್ತಿರುವ ಧ್ವನಿ ಕೂಡ ಕೇಳಿಸುತ್ತದೆ. ಆದರೆ, ಗಾಬರಿಗೊಂಡಿದ್ದ ಚಾಲಕ ಎಷ್ಟೇ ಪ್ರಯತ್ನಿಸಿದರೂ ಬಸ್ ನಿಯಂತ್ರಿಸಲು ಸಾಧ್ಯವಾಗದೇ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಚಾಲಕನ ವಿರುದ್ಧ ಪ್ರಕರಣ: ಘಟನೆ ಸಂಬಂಧ ಚಾಲಕ ರಾಜಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೇಳಿಕೆ ಪಡೆಯಲಾಗಿದೆ. ಬಸ್ ಅನ್ನೂ ಜಪ್ತಿ ಮಾಡಲಾಗಿದೆ. ಮದ್ಯ ಸೇವಿಸಿದ್ದಾರೆಯೇ ಎಂದು ಖಚಿತ ಪಡಿಸಿಕೊಳ್ಳಲು ಘಟನೆ ನಡೆದ ತಕ್ಷಣವೇ ಪರೀಕ್ಷೆ ನಡೆಸಲಾಗಿತ್ತು. ಅದು ದೃಢವಾಗಿಲ್ಲ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ರಾಜಕುಮಾರ್ ಅವರ ಚಾಲನಾ ಪರವಾನಗಿ ಅಮಾನತುಗೊಳಿಸುವಂತೆ ಜಮಖಂಡಿ ಆರ್‌ಟಿಒ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಜತೆಗೆ, ಬಿಎಂಟಿಸಿ ಕೇಂದ್ರ ಕಚೇರಿಗೂ ಮಾಹಿತಿ ನೀಡಿ ಚಾಲಕನ ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿತ್ತು. ಈ ಸಂಬಂಧ ಆಂತರಿಕ ತನಿಖೆ ನಡೆಸಿದ ಬಿಎಂಟಿಸಿ ಅಧಿಕಾರಿಗಳು ರಾಜಕುಮಾರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ಬಿಎಂಟಿಸಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್

ಮತ್ತೊಂದು ಅಪಘಾತದಲ್ಲಿ ಪೊಲೀಸ್‌ ಜೀಪ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಮಂಗಳವಾರ ಬೆಳಿಗ್ಗೆ 9.30ರ ಸುಮಾರಿಗೆ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆ ಎದುರಿನ ಸರ್ವಿಸ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ವೊಂದು ನಿಂತಿದ್ದ ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆದಿದೆ.

ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಕಾರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಬಸ್‌ ಚಾಲಕನಿಗೆ ಪಕ್ಕಕ್ಕೆ ನಿಲುಗಡೆ ಮಾಡುವಂತೆ ಸೂಚಿಸಿದ್ದರು. ಆಗ ಬಸ್ ಮತ್ತೆ ಪಕ್ಕದಲ್ಲೇ ನಿಂತಿದ್ದ ಎಸಿಪಿ ಅವರ ಜೀಪ್‌ಗೆ ಡಿಕ್ಕಿ ಹೊಡೆದಿದ್ದು, ಜೀಪ್ ಜಖಂಗೊಂಡಿದೆ. ಈ ಸಂಬಂಧ ಹೆಬ್ಬಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.