ಬೆಂಗಳೂರು: ವಿಜಯನಗರ ಹಾಗೂ ಹುಳಿಮಾವು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಬಿಎಂಟಿಸಿ ಬಸ್ ಗುದ್ದಿ ಇಬ್ಬರು ಮೃತಪಟ್ಟಿದ್ದಾರೆ.
‘ಅನ್ನಪೂರ್ಣೇಶ್ವರಿನಗರ ನಿವಾಸಿ ಕುಮಾರ್ (45) ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬದ ವೀಣಾ ಮೃತರು. ಎರಡೂ ಕಡೆಯೂ ಬಿಎಂಟಿಸಿ ಬಸ್ ಚಾಲಕರ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪತ್ನಿಯ ಸೀಮಂತಕ್ಕೆ ಸಿದ್ಧತೆ: ‘ಕುಮಾರ್ ಅವರ ಪತ್ನಿ ಗರ್ಭಿಣಿ. ಸೀಮಂತ ಕಾರ್ಯ ಇಟ್ಟುಕೊಳ್ಳಲಾಗಿತ್ತು. ಇದಕ್ಕೆ ಅಗತ್ಯವಿದ್ದ ಹೂವು, ಹಣ್ಣು, ತರಕಾರಿ ಖರೀದಿಸಲೆಂದು ಕುಮಾರ್ ಭಾನುವಾರ ಬೆಳಿಗ್ಗೆ ವಿಜಯನಗರಕ್ಕೆ ಬಂದಿದ್ದರು. ಖರೀದಿ ಮುಗಿಸಿ, ದ್ವಿಚಕ್ರ ವಾಹನದಲ್ಲಿ ಮನೆಯತ್ತ ಹೊರಟಿದ್ದರು. ಗೋವಿಂದರಾಜನಗರದ ಬೈಟು ಕಾಫಿ ಹೋಟೆಲ್ ಬಳಿ ಹೋಗುತ್ತಿದ್ದಾಗ, ಇದೇ ಮಾರ್ಗವಾಗಿ ತೆರಳುತ್ತಿದ್ದ ಬಿಎಂಟಿಸಿ ಬಸ್ ಅವರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ವಾಹನ ಸಮೇತ ರಸ್ತೆಯಲ್ಲಿ ಉರುಳಿ ಬಿದ್ದಿದ್ದ ಕುಮಾರ್ ತಲೆಗೆ ಪೆಟ್ಟಾಗಿತ್ತು. ತೀವ್ರ ಗಾಯಗೊಂಡು ಅವರು ಮೃತಪಟ್ಟರು’ ಎಂದು ವಿಜಯನಗರ ಸಂಚಾರ ಠಾಣೆ ಪೊಲೀಸರು ಹೇಳಿದರು.
ಗಾರ್ಮೆಂಟ್ಸ್ ಕಾರ್ಖಾನೆ ಉದ್ಯೋಗಿ: ‘ನಗರದ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ವೀಣಾ ಕೆಲಸ ಮಾಡುತ್ತಿದ್ದರು. ಅರಕೆರೆ ಸಮೀಪದ ಗಾರ್ಮೆಂಟ್ಸ್ ಬಳಿ ಶನಿವಾರ ಬೆಳಿಗ್ಗೆ ರಸ್ತೆ ದಾಟುತ್ತಿದ್ದ ವೇಳೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿತ್ತು’ ಎಂದು ಹುಳಿಮಾವು ಸಂಚಾರ ಠಾಣೆ ಪೊಲೀಸರು ಹೇಳಿದರು.
* ಅಕ್ಟೋಬರ್ 14: ಯಶವಂತಪುರದ ಮಾರಪ್ಪನಪಾಳ್ಯ ಸಮೀಪದ ಬಿಎಂಟಿಸಿ ಬಸ್ಸಿನ ಚಕ್ರ ತಲೆ ಮೇಲೆ ಹರಿದು ಎಂಜಿನಿಯರಿಂಗ್ ವಿದ್ಯಾರ್ಥಿ ಗಂಗಾಧರ (21) ಮೃತಪಟ್ಟಿದ್ದರು
* ಅ 8: ಗಾರ್ವೇಬಾವಿಪಾಳ್ಯದ ಜಂಕ್ಷನ್‌ನಲ್ಲಿ ಬಿಎಂಟಿಸಿ ಬಸ್ಸಿನ ಚಕ್ರ ಮೈ ಮೇಲೆ ಹರಿದು ಮೂರು ವರ್ಷದ ಅಯಾನ್ ಪಾಷಾ ಮೃತಪಟ್ಟಿದ್ದ.
* ಅ. 4: ಅಟ್ಟೂರು ಮದರ್ ಡೇರಿ ಬಳಿ ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ. ಸವಾರ ಭರತ್ ರೆಡ್ಡಿ (24) ಮೃತಪಟ್ಟಿದ್ದರು.
* ಜೂನ್ 9: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿನ ಚಕ್ರ ಕಾಲಿನ ಮೇಲೆ ಹರಿದು ತೀವ್ರ ಗಾಯಗೊಂಡಿದ್ದ ಶಿವಮ್ಮ (57) ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
* ಆಗಸ್ಟ್ 17: ದಾಸರಹಳ್ಳಿ ಮೆಟ್ರೊ ನಿಲ್ದಾಣ ಬಳಿಯ ಸರ್ವೀಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್ಸಿನ ಚಕ್ರ ತಲೆ ಮೇಲೆ ಹರಿದು ಬೈಕ್ ಸವಾರ ದಾಸಪ್ಪ (42) ಮೃತಪಟ್ಟಿದ್ದರು.
* ಆಗಸ್ಟ್ 11: ಸಿದ್ದಯ್ಯ ಜಂಕ್ಷನ್ ಬಳಿ ಬಿಎಂಟಿಸಿ ಬಸ್ಸಿನ ಚಕ್ರ ತಲೆ ಮೇಲೆ ಹರಿದು ಹೊಸಕೋಟೆಯ ಮಂಜುನಾಥ್ (42) ಮೃತಪಟ್ಟಿದ್ದರು.
* ಜುಲೈ 24: ಮೆಜೆಸ್ಟಿಕ್ ಕೇಂದ್ರ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಗುದ್ದಿ ಪ್ರಯಾಣಿಕ ಚನ್ನಯ್ಯ (43) ಮೃತಪಟ್ಟಿದ್ದರು.
* ಮೇ 14: ಲಗ್ಗೆರೆ ಬಳಿ ಬಿಎಂಟಿಸಿ ಬಸ್ ಗುದ್ದಿ ತುರುವೇಕೆರೆಯ ತಿಮ್ಮೇಗೌಡ (28) ಹಾಗೂ ಕೊಪ್ಪಳದ ಕಂಠೆಪ್ಪ (35) ಮೃತಪಟ್ಟಿದ್ದರು * ಮೇ 9: ಬಿಎಂಟಿಸಿ ಯಲಹಂಕ ಡಿಪೊ– 30ರಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದು ನಿರ್ವಾಹಕ ಸೋಮಶೇಖರಯ್ಯ (59) ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.