ಬೆಂಗಳೂರು: ‘ನಗರದಲ್ಲಿ ಸಮೂಹ ಸಾರಿಗೆ ಪ್ರಯಾಣವನ್ನು ಉತ್ತೇಜಿಸಲು ಮುಂದಿನ ಐದು ವರ್ಷಗಳಲ್ಲಿ ಬಿಎಂಟಿಸಿ ಫೀಡರ್ ಸೇವೆಯನ್ನು 6,500ರಿಂದ 10 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ’ ಎಂದು ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್ ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಮಂಗಳವಾರ ಆಯೋಜಿಸಿದ್ದ ‘ಅತಿವೇಗದ ನಿಯಂತ್ರಣಕ್ಕಾಗಿ ಸಮೂಹ ಮಾಧ್ಯಮ ಅಭಿಯಾನ’ಕ್ಕೆ ಚಾಲನೆ ನೀಡಿ, ರಸ್ತೆ ಸುರಕ್ಷತೆ ಜಾಗೃತಿ ಮೂಡಿಸುವ ಕಿರುಚಿತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಸಮೂಹ ಸಾರಿಗೆ ಬಳಸುವ ಮೂಲಕ ಅಪಘಾತಗಳ ಸಂಖ್ಯೆಯನ್ನು ಕಡಿತಗೊಳಿಸಬಹುದು. ಸಂಚಾರ ದಟ್ಟಣೆ ನಿಯಂತ್ರಣವಾಗುತ್ತದೆ ಹಾಗೂ ಪರಿಸರ ಮಾಲಿನ್ಯವನ್ನೂ ತಪ್ಪಿಸಬಹುದಾಗಿದೆ’ ಎಂದು ವಿವರಿಸಿದರು.
ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಕೆ.ವಿ.ಶರತ್‌ಚಂದ್ರ ಮಾತನಾಡಿ, ‘ಬೆಂಗಳೂರಿನಲ್ಲಿ ನಾಲ್ಕು ವರ್ಷಗಳಲ್ಲಿ ರಸ್ತೆ ಅಪಘಾತದ ಜತೆಗೆ ಸತ್ತವರ ಸಂಖ್ಯೆ ಕೂಡ ದುಪ್ಪಟ್ಟಾಗಿದೆ. ವಾಹನ ಸವಾರರು ಮಾಡಿದ ತಪ್ಪಿಗೆ ಪಾದಚಾರಿಗಳು ಕೂಡ ಸಾವನ್ನಪ್ಪಿರುವ ಘಟನೆಗಳಿವೆ. ಈ ವರ್ಷದ ಅಕ್ಟೋಬರ್ ಅಂತ್ಯದವರೆಗೆ 723 ಮಂದಿ ಸಾವನ್ನಪ್ಪಿದ್ದು, ಸತ್ತವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರವಾಹನ ಸವಾರರಿದ್ದಾರೆ’ ಎಂದರು.
‘ಅಪಘಾತಗಳನ್ನು ನಿಯಂತ್ರಿಸಲು ಇಲಾಖೆಯಿಂದ ಸಮಗ್ರ ಸಂಚಾರ ನಿರ್ವಹಣಾ ವ್ಯವಸ್ಥೆ(ಐಟಿಎಂಎಸ್)ಯಂತಹ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೂ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಕಾರಣ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸಿದರೂ, ಬೆಲ್ಟ್ ಹಾಕದಿರುವುದು. ನಾವು ಎಷ್ಟೇ ಆಂದೋಲನ ಮಾಡಿ, ಅರಿವು ಮೂಡಿಸಿದರೂ, ಜನರಲ್ಲಿ ಜಾಗೃತಿ ಮೂಡದ ಹೊರತು, ಅಪಘಾತಗಳನ್ನು ತಪ್ಪಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಸರ್ಕಾರ ₹90 ಕೋಟಿ ನೀಡಿದೆ:
‘ರಸ್ತೆ ಅಪಘಾತಗಳನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯ ವ್ಯಾಪಿ ರಸ್ತೆ ಸುರಕ್ಷತೆಗಾಗಿ ಸರ್ಕಾರ ₹90 ಕೋಟಿ ಅನುದಾನ ನೀಡಿದೆ. ರಸ್ತೆಯ ಗುಣಮಟ್ಟ ಕೂಡ ಸುಧಾರಣೆ ಆಗಬೇಕು. ವಾಹನ ಸವಾರರು ಕೂಡ ಎಚ್ಚರಿಕೆಯಿಂದ ಚಾಲನೆ ಮಾಡಬೇಕು’ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ‘ಅಪಘಾತ ಮರು ಸೃಷ್ಟಿ’ಯ ಎರಡು ಸಂದರ್ಭಗಳ ಕಿರುಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಒಂದರಲ್ಲಿ, ದ್ವಿಚಕ್ರ ವಾಹನವನ್ನು ವೇಗವಾಗಿ ಚಲಾಯಿಸಿದಾಗ ಅಪಘಾತ ಹೇಗೆ ಸಂಭವಿಸುತ್ತದೆ ಹಾಗೂ ಎರಡನೆಯದರಲ್ಲಿ ದ್ವಿಚಕ್ರ ವಾಹನವನ್ನು ನಿಧಾನವಾಗಿ ಚಾಲನೆ ಮಾಡಿದರೆ ಅಪಘಾತ ಹೇಗೆ ತಪ್ಪಿಸಬಹುದು ಎಂಬ ದೃಶ್ಯಗಳಿವೆ. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ (ಕೆಎಸ್‌ಆರ್‌ಎಸ್‌ಎ) ರಾಜ್ಯದಾದ್ಯಂತ ಒಂದು ತಿಂಗಳು ಎಲ್ಲಾ ಪ್ರಚಾರ ಮಾಧ್ಯಮಗಳಲ್ಲಿ ಇವುಗಳನ್ನು ಪ್ರದರ್ಶಿಸುತ್ತದೆ.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಆಯುಕ್ತ ಯೋಗೀಶ್, ನಿಮ್ಹಾನ್ಸ್ ನಿವೃತ್ತ ನಿರ್ದೇಶಕ ಗುರುರಾಜ್ ಉಪಸ್ಥಿತರಿದ್ದರು.
2024ರಲ್ಲಿ 723 ಮಂದಿ ಸಾವು
* ರಾಜ್ಯದಲ್ಲಿ 2023ರಲ್ಲಿ 12,321 ರಸ್ತೆ ಅಪಘಾತಗಳು ಸಂಭವಿಸಿವೆ.ಅಪಘಾತಕ್ಕೊಳಗಾದವರಲ್ಲಿ ಶೇ 43.7(5389) ದ್ವಿಚಕ್ರ ವಾಹನ ಸವಾರರು ಮತ್ತು ಶೇ 19.63(2418) ಪಾದಚಾರಿಗಳು.
* 2023ರಲ್ಲಿ ರಾಜ್ಯದಲ್ಲಿ ಬೆಂಗಳೂರು ನಗರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ.
* ಬೆಂಗಳೂರು ನಗರದಲ್ಲಿ 2024ರ ಅಕ್ಟೋಬರ್ 31ರವರೆಗೆ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 723 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ದ್ವಿಚಕ್ರ ಸವಾರರ ಸಂಖ್ಯೆಯೇ ಅಧಿಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.