ಬೆಂಗಳೂರು: ಸಂಚಾರ ದಟ್ಟಣೆ ತಗ್ಗಿಸಲುಕೆ.ಆರ್.ಪುರ ಬಳಿಯ ಟಿನ್ ಫ್ಯಾಕ್ಟರಿ ಬಳಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ಪಥ ನಿರ್ಮಿಸಿದರೂ ಸವಾರರು ಮಾತ್ರ ಪಥ ಬದಲಾವಣೆಗೆ ಒಗ್ಗಿಕೊಳ್ಳುತ್ತಿಲ್ಲ. ಇದರಿಂದಾಗಿ 17 ಕಿ.ಮೀ. ಮಾರ್ಗದಲ್ಲಿ ರಕ್ಕಸನಂತೆ ಕಾಡುತ್ತಿರುವ ಸಂಚಾರ ದಟ್ಟಣೆಗೆ ಮುಕ್ತಿ ಸಿಗುವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ.
ಬೆಂಗಳೂರು ಸಂಚಾರ ಪೊಲೀಸರ ಸಹಯೋಗದಲ್ಲಿಬಿಬಿಎಂಪಿ, ನಗರ ಭೂ ಸಾರಿಗೆ ನಿರ್ದೇಶನಾಲಯ ಹಾಗೂ ಬಿಎಂಟಿಸಿ ಪ್ರತ್ಯೇಕಪಥವ್ಯವಸ್ಥೆ ಮಾಡಿ, ಪ್ರಾಯೋಗಿಕವಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿವೆ. ಪ್ರತ್ಯೇಕ ಪಥ ನಿರ್ಮಾಣದಿಂದ
ಬಸ್‌ಗಳು ತ್ವರಿತವಾಗಿ ಸಂಚರಿಸಲು ಹಾಗೂ ಪ್ರಯಾಣಿಕರು ಬೇಗನೆ ನಿಗದಿತ ಸ್ಥಳಗಳಿಗೆ ತಲುಪಲು ಅನುಕೂಲವಾಗಲಿದೆ ಎಂಬುದು ಯೋಜನೆಯ ಹಿಂದಿನ ಉದ್ದೇಶವಾಗಿತ್ತು. ಆದರೆ, 3.5 ಮೀ. ಅಗಲದ ಪಥಕ್ಕೆ ಕಬ್ಬಿಣದ ತಡೆ ಕಂಬಿಗಳನ್ನು (ಬೊಲ್ಲಾರ್ಡ್) ಅಳವಡಿಕೆ ಮಾಡದ ಪರಿಣಾಮ ಖಾಸಗಿ ವಾಹನಗಳು ಕೂಡಾ ಬಿಎಂಟಿಸಿ ಬಸ್‌ಗಳಿಗೆ ಮೀಸಲಿರುವ ಪಥದಲ್ಲಿ ಸಾಗುತ್ತಿವೆ. ಇನ್ನೊಂದೆಡೆ, ಬಸ್‌ಗಳು ಪಥ ಬದಲಿಸಿ, ಖಾಸಗಿ ವಾಹನಗಳ ನಡುವೆ ಸಾಗುತ್ತಿರುವುದು ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಳಕ್ಕೆ ಕಾರಣವಾಗಿದೆ.
ಪ್ರತ್ಯೇಕ ಪಥಕ್ಕೆ ಬಣ್ಣ ಬಳಿಯಲಾಗಿದ್ದು, ಪಥದ ನಡುವೆ ಬಸ್‌ಗಳಿಗೆ ಮಾತ್ರ ಅವಕಾಶ ಎಂದು ರಸ್ತೆಯ ಮೇಲೆ ಬರೆಯಲಾಗಿದೆ. ಆದರೆ, ವೇಗವಾಗಿ ಬರುವ ವಾಹನಗಳ ಚಾಲಕರು ಇದನ್ನು ಗಮನಿಸದೆಯೇ ಅದೇ ಮಾರ್ಗದಲ್ಲಿ ಸಾಗುತ್ತಿದ್ದಾರೆ. ನಿಯಮವನ್ನು ಪಾಲಿಸಬೇಕಾದ ಬಸ್‌ಗಳೇ ಪಥ ಬದಲಿಸುತ್ತಿರುವದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಪೂರ್ವತಯಾರಿ ಇಲ್ಲದ ಅವೈಜ್ಞಾನಿಕ ಯೋಜನೆ ಇದಾಗಿದೆ ಎಂಬ ಟೀಕೆಯೂ ವ್ಯಕ್ತವಾಗಿದೆ. ಬಸ್ ಪಥಗಳ ಮೇಲೆ ಸಾಗುವ ವಾಹನಗಳ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ, ಈವರೆಗೂ ಅಳವಡಿಸಿಲ್ಲ. ಇದರಿಂದಾಗಿನಿಯಮ ಉಲ್ಲಂಘನೆಗೆ ಮುಕ್ತ ಅವಕಾಶ ನೀಡಿದಂತಾಗಿದೆ. ಪೊಲೀಸ್ ಸಿಬ್ಬಂದಿಯನ್ನೂ ನೇಮಿಸಲಿಲ್ಲ.
‘ಪ್ರತ್ಯೇಕ ಪಥ ನಿರ್ಮಿಸಿದ ಮಾತ್ರಕ್ಕೆ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ ಆಗುವುದಿಲ್ಲ. ಚಾಲಕರು ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಿ, ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಚಾಲಕರು ಬಸ್‌ಗಳನ್ನು ನಿಗದಿತ ತಾಣಗಳಲ್ಲಿ ನಿಲುಗಡೆ ಮಾಡುತ್ತಿಲ್ಲ’ ಎಂದು ದೊಡ್ಡನೆಕ್ಕುಂದಿ ನಿವಾಸಿ ಮುನಿರಾಜು ತಿಳಿಸಿದರು.
ಅಪಘಾತದ ಭೀತಿ: ಪಥದಲ್ಲಿ ಸಾಗುವ ಬಸ್‌ಗಳು ನಿಲ್ದಾಣದಲ್ಲಿ ನಿಂತ ಸಂದರ್ಭದಲ್ಲಿ ಹಿಂದಿರುವ ಬಸ್‌ಗಳುಪಥ ಬದಲಿಸಿ, ಸಾಗುತ್ತಿವೆ. ಇದರಿಂದಾಗಿ ಅಪಘಾತದ ಭೀತಿ ಎದುರಾಗಿದೆ. ಜಂಕ್ಷನ್‌ಗಳಲ್ಲಿ ಪಥ ಅಂತ್ಯವಾಗುವುದರಿಂದ ಖಾಸಗಿ ವಾಹನ ಸವಾರರು ಗೊಂದಲಕ್ಕೆ ಒಳಗುತ್ತಿದ್ದಾರೆ. ಹೊರವರ್ತುಲ ರಸ್ತೆಯ ಪಥದಲ್ಲಿ ಬಸ್‌ಗಳ ಸಂಚಾರ ಇಲ್ಲದಿರುವಾಗ ಆಟೊ ರಿಕ್ಷಾ ಹಾಗೂ ಬೈಕ್‌ಗಳ ಸವಾರರು ವೇಗವಾಗಿ ಸಾಗುತ್ತಿದ್ದಾರೆ.
‘ಪ್ರತ್ಯೇಕ ಪಥ ನಿರ್ಮಾಣ ಮಾಡಿರುವುದರಿಂದ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಳವಾಗಲು ಅವಕಾಶ ಮಾಡಿಕೊಟ್ಟಂತಾಗಿದೆ. ಪ್ರತ್ಯೇಕ ಪಥವನ್ನು ನಿರ್ಮಿಸಿದರೂ ಬಸ್‌ಗಳ ಚಾಲಕರು ನಿಯಮ ಪಾಲಿಸುತ್ತಿಲ್ಲ. ಮೊದಲು ಅವರಿಗೆ ಅರಿವು ಮೂಡಿಸಬೇಕು. ಪರಸ್ಪರ ಸ್ಪರ್ಧೆಗೆ ಬಿದ್ದಿದ್ದು, ತಮ್ಮ ಮುಂದಿರುವ ಬಸ್‌ಗಳನ್ನು ಹಿಂದಿಕ್ಕಲು ಪಥ ಬದಲಿಸುತ್ತಿದ್ದಾರೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ’ ಎಂದು ಖಾಸಗಿ ವಾಹನ ಚಾಲಕ ಜಮೀರ್ ತಿಳಿಸಿದರು.
ಪಾರ್ಕಿಂಗ್ ತಾಣವಾದ ಪಥ
ಸರ್ಜಾಪುರ ಹೊರವರ್ತುಲ ರಸ್ತೆಯಲ್ಲಿಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ನಿರ್ಮಿಸಲಾಗಿರುವ ಬಸ್ ಪಥ ಖಾಸಗಿ ವಾಹನಗಳ ಪಾರ್ಕಿಂಗ್ ತಾಣವಾಗಿದೆ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟಕ್ಕೆ ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ಹೋಟೆಲ್‌ಗಳಿಗೆ ತೆರಳುವವರು ವಾಹನವನ್ನು ಬಸ್ ಪಥದಲ್ಲಿಯೇ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಬಸ್‌ಗಳಿಗೆ ಕೂಡಾ ಪಥ ಬದಲಿಸುವುದು ಅನಿವಾರ್ಯವಾಗಿದೆ. ತಳ್ಳುಗಾಡಿಗಳು ಸಹ ಪಥದಲ್ಲಿಯೇ ವ್ಯಾಪಾರ ಮಾಡಲು ಆರಂಭಿಸಿವೆ. ರಸ್ತೆ ಇನ್ನಷ್ಟು ಕಿರಿದಾಗಿ, ಸಂಜೆ ವೇಳೆ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ.
*
ಬಸ್‌ಗಳು ನಿಲ್ದಾಣದಲ್ಲಿ ನಿಲ್ಲುವ ಬದಲು ಎಲ್ಲೆಂದರೆಲ್ಲಿ ನಿಲ್ಲುತ್ತಿವೆ. ನಿಯಮ ರೂಪಿಸುವ ಮುನ್ನ ಅದರ ಅನುಕೂಲ ಹಾಗೂ ಅನಾನುಕೂಲವನ್ನು ಪರಿಶೀಲಿಸಬೇಕಿತ್ತು
–ಮಂಜುನಾಥ್, ಸಿಲ್ಕ್‌ಬೋರ್ಡ್
*
ಹೆಚ್ಚು ದಟ್ಟಣೆ ಇರುವ ರಸ್ತೆಗಳಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಿಸುವುದು ಸೂಕ್ತ. ದಟ್ಟಣೆ ನಡುವೆ ಬಸ್ ಹಿಡಿಯಬೇಕಾದ ಗೋಳು ಸಾರ್ವಜನಿಕರಿಗೆ ತಪ್ಪುತ್ತದೆ. ಸರಿಯಾಗಿ ಅನುಷ್ಠಾನ ಮಾಡಬೇಕು.
–ಕೃಷ್ಣಮೂರ್ತಿ, ಬೆಳ್ಳಂದೂರು ನಿವಾಸಿ
*
ಬಸ್‌ಗಳಿಗೆ ಪ್ರತ್ಯೇಕ ಪಥ ನಿರ್ಮಿಸಿಕೊಟ್ಟರೂ ಅದರಲ್ಲಿ ಸಾಗುತ್ತಿಲ್ಲ. ಇದರಿಂದಾಗಿ ಖಾಸಗಿ ವಾಹನಗಳು ಆ ಪಥದಲ್ಲಿ ಹೋಗುತ್ತಿವೆ. ಸಂಚಾರ ದಟ್ಟಣೆ ನಿವಾರಣೆಗೆ ಪ್ರತ್ಯೇಕ ಪಥ ಪರಿಹಾರವಲ್ಲ
–ವಿಶ್ವನಾಥನ್, ಆಟೊ ರಿಕ್ಷಾ ಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.