ADVERTISEMENT

ಹಂತ–ಹಂತವಾಗಿ ಬಸ್‌ ಕಾರ್ಯಾಚರಣೆಗೆ ಬಿಎಂಟಿಸಿ ಸಿದ್ಧತೆ

ಚಾಲಕ–ನಿರ್ವಾಹಕರಿಗೆ ಆದ್ಯತೆ ಮೇರೆಗೆ ಲಸಿಕೆ * ಮಧ್ಯಾಹ್ನ ವೇಳೆ ಸಂಚಾರ ಸ್ಥಗಿತಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 21:36 IST
Last Updated 6 ಜೂನ್ 2021, 21:36 IST
ಸಿ. ಶಿಖಾ
ಸಿ. ಶಿಖಾ   

ಬೆಂಗಳೂರು: ರಾಜಧಾನಿಯಲ್ಲಿ ಅನ್‌ಲಾಕ್‌ ಪ್ರಕ್ರಿಯೆಗೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದು, ನಗರದಲ್ಲಿ ಹಂತ–ಹಂತವಾಗಿ ಬಿಎಂಟಿಸಿ ಬಸ್‌ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

‘ಲಾಕ್‌ಡೌನ್ ಸಡಿಲಿಕೆ ನಂತರ ಬಸ್‌ಗಳ ಕಾರ್ಯಾಚರಣೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಕಳೆದ ವರ್ಷದ ಅನುಭವ ಕಣ್ಮುಂದಿದೆ. ಅದರ ಆಧಾರದ ಮೇಲೆ ಹಂತ–ಹಂತವಾಗಿ ಬಸ್‌ ಸಂಚಾರ ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

‘135 ಬಸ್‌ಗಳಿಂದ 3 ಸಾವಿರ ಬಸ್‌ಗಳವರೆಗೆ ಕಾರ್ಯಾಚರಣೆ ನಡೆಸಲು ಸಿದ್ಧವಾಗಿದ್ದೇವೆ. ಲಾಕ್‌ಡೌನ್‌ ಇದ್ದರೂ ನಮ್ಮ ಯಾವುದೇ ಡಿಪೊ ಬಂದ್ ಮಾಡಿರಲಿಲ್ಲ. ಸಿಬ್ಬಂದಿಯು ನಿಯಮಿತವಾಗಿ ಎಲ್ಲ ಬಸ್‌ಗಳ ಸರ್ವಿಸ್‌ ಮಾಡಿದ್ದು, ಎಲ್ಲವೂ ಸುಸ್ಥಿತಿಯಲ್ಲಿವೆ. ಯಾವುದೇ ದಿನದಲ್ಲಿ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿವೆ’ ಎಂದರು.

ADVERTISEMENT

ಮಧ್ಯಾಹ್ನದಲ್ಲಿ ಸ್ಥಗಿತ:

‘ಬೆಳಿಗ್ಗೆ ಮತ್ತು ಸಂಜೆಯ ವೇಳೆಗೆ ಹೆಚ್ಚು ಬಸ್‌ಗಳು ರಸ್ತೆಗಿಳಿಯಲಿವೆ. ಆದರೆ, ಮಧ್ಯಾಹ್ನದ ವೇಳೆ ಬಸ್‌ಗಳ ಸಂಚಾರ ನಿರ್ಬಂಧಿಸುವ ಉದ್ದೇಶವಿದೆ. ಅಂದರೆ, ಪ್ರಯಾಣಿಕರೇ ಇಲ್ಲದ ಪ್ರದೇಶಗಳಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಲಾಗುವುದು. ಇದರಿಂದ ಇಂಧನದ ಉಳಿತಾಯವೂ ಆಗಲಿದೆ. ಮಧ್ಯಾಹ್ನದ ವೇಳೆ 3ರಿಂದ 4 ತಾಸಿನವರೆಗೆ ಬಸ್‌ ಸಂಚಾರ ಸ್ಥಗಿತಗೊಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ’ ಎಂದೂ ಶಿಖಾ ಹೇಳಿದರು.

ಸಿಬ್ಬಂದಿಗೆ ಲಸಿಕೆ:

‘ಬಿಎಂಟಿಸಿಯಲ್ಲಿ ಶೇ 65ರಷ್ಟು ಸಿಬ್ಬಂದಿ ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದ ಚಾಲಕರು ಮತ್ತು ನಿರ್ವಾಹಕರನ್ನು ಮಾತ್ರ ಬಸ್‌ಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಬಸ್‌ ಸಂಚಾರ ಪುನರಾರಂಭವಾಗುವುದರೊಳಗೆ ಎಲ್ಲ ಸಿಬ್ಬಂದಿಗೂ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.