ಬೆಂಗಳೂರು: ಬಿಎಂಟಿಸಿ ವಾಯು ವಜ್ರ ಬಸ್ ಒಬ್ಬನೇ ಪ್ರಯಾಣಿಕನಿಗಾಗಿ ಸಂಚರಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಹರಿಹರನ್ ಎಸ್.ಎಸ್. ಎಂಬ ಪ್ರಯಾಣಿಕರೊಬ್ಬರು ತನ್ನ ಅನುಭವವನ್ನು ‘ಎಕ್ಸ್’ನಲ್ಲಿ ಹಂಚಿಕೊಂಡು, ಚಾಲಕ ಮತ್ತು ನಿರ್ವಾಹಕರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
‘ವಿಮಾನ ನಿಲ್ದಾಣದಿಂದ ಹಿಂತಿರುಗುತ್ತಿದ್ದಾಗ, ಈ ಇಬ್ಬರು ಮಹನೀಯರು ನನಗಾಗಿ ಸಮಯಕ್ಕೆ ಸರಿಯಾಗಿ ಬಸ್ ಓಡಿಸಿದರು. ಅವರಿಂದ ನನಗೆ ಉತ್ತಮ ಸಾಂಗತ್ಯ ಸಿಕ್ಕಿತು ಮತ್ತು ಸುರಕ್ಷಿತವಾಗಿ ಕರೆ ತಂದರು’ ಎಂದು ಚಾಲಕ, ನಿರ್ವಾಹಕರೊಂದಿಗೆ ತೆಗೆದುಕೊಂಡಿರುವ ಸೆಲ್ಫಿ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಸಂಚಾರ ದಟ್ಟಣೆಯಲ್ಲಿ ತುಂಬಿರುವ ಬೆಂಗಳೂರು ನಗರದಲ್ಲಿ ಈ ಬಸ್‌ನಲ್ಲಿ ನಾನೊಬ್ಬನೇ ಪ್ರಯಾಣಿಕನಾಗಿದ್ದುದು ಅಚ್ಚರಿ ಎನಿಸಿತು ಎಂದು ಕೂಡ ಬರೆದುಕೊಂಡಿದ್ದಾರೆ.
ಹಲವು ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ‘ಈ ಬಸ್‌ನ ನಿರ್ವಹಣಾ ವೆಚ್ಚ ಪ್ರತಿ ಕಿಲೋ ಮೀಟರ್‌ಗೆ ₹ 95’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದು, ‘ಈ ವಿಚಾರ ನನಗೆ ಇದುವರೆಗೂ ಗೊತ್ತಿರಲಿಲ್ಲ. ಹಾಗಿದ್ದರೆ ನಾನು ಅದೃಷ್ಟಶಾಲಿಯಾಗಿದ್ದೆ’ ಎಂದು ಹರಿಹರನ್ ಉತ್ತರಿಸಿದ್ದಾರೆ.
‘ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಬಿಎಂಟಿಸಿ ಸಿಬ್ಬಂದಿ ನಡವಳಿಕೆ ಉತ್ತಮವಾಗಿದೆ. ಅವರು ಪ್ರಯಾಣಿಕರಿಗೆ ತುಂಬಾ ಸಹಾಯಕವಾಗಿದ್ದಾರೆ’ ಎಂದು ಮತ್ತೊಬ್ಬ ನೆಟ್ಟಿಗ ಶ್ಲಾಘಿಸಿದ್ದಾರೆ. ‘ಬಿಎಂಟಿಸಿ ಬಳಸಿರುವುದು ಖುಷಿ ಸಂಗತಿ’ ಎಂದು ಕೆಲವರು ಹೆಮ್ಮೆ ಪಟ್ಟುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.