ADVERTISEMENT

ಬಸ್‌ನಲ್ಲಿ ಯುವತಿ ಮೇಲೆ ಹಲ್ಲೆ: ಬಿಎಂಟಿಸಿ ನಿರ್ವಾಹಕ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 11:40 IST
Last Updated 26 ಮಾರ್ಚ್ 2024, 11:40 IST
<div class="paragraphs"><p>ಬಿಎಂಟಿಸಿ</p></div>

ಬಿಎಂಟಿಸಿ

   

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತಂಜುಮ್ (24) ಎಂಬುವವರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ನಿರ್ವಾಹಕ ಹೊನ್ನಪ್ಪ ಎಂಬುವವರನ್ನು ಸಿದ್ದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಬಿಳೇಕಹಳ್ಳಿಯಿಂದ ಶಿವಾಜಿನಗರಕ್ಕೆ (ಮಾರ್ಗ್ ಸಂಖ್ಯೆ 368) ಹೊರಟಿದ್ದ ಬಸ್‌ನಲ್ಲಿ ಮಂಗಳವಾರ ಬೆಳಿಗ್ಗೆ ಘಟನೆ ನಡೆದಿತ್ತು. ಯುವತಿ ಮೇಲೆ ನಿರ್ವಾಹಕ ಹಲ್ಲೆ ನಡೆದಿದ್ದ ವಿಡಿಯೊವನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಹಲ್ಲೆ ಸಂಬಂಧ ಯುವತಿ ದೂರು ನೀಡಿದ್ದಾರೆ. ವಿಡಿಯೊ ಪುರಾವೆ ಆಧರಿಸಿ ಕೊತ್ತನೂರು ದಿಣ್ಣೆ ಡಿಪೊದ ನಿರ್ವಾಹಕ ಹೊನ್ನಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಕಮರ್ಷಿಯಲ್ ಸ್ಟ್ರೀಟ್‌ನ ಮಳಿಗೆಯೊಂದರಲ್ಲಿ ಕೆಲಸ ಮಾಡುವ ತಂಜುಮ್, ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ಹೊರಟಿದ್ದರು. ಶಿವಾಜಿನಗರದ ಬಸ್‌ ಹತ್ತಿದ್ದರು. ಟಿಕೆಟ್ ನೀಡುವಂತೆ ತಂಜುಮ್ ಕೋರಿದ್ದರು. ನಿರ್ವಾಹಕ ಹೊನ್ನಪ್ಪ ಟಿಕೆಟ್ ನೀಡಲು ನಿರಾಕರಿಸಿದ್ದರು. ಅದೇ ವಿಚಾರಕ್ಕೆ ನಿರ್ವಾಹಕ, ಯುವತಿ ಮೇಲೆ ಹಲ್ಲೆ ಮಾಡಿದ್ದ’ ಎಂದು ಹೇಳಿದರು.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ವಿಭಾಗದ ಡಿಸಿಪಿ (ಪ್ರಭಾರ) ಶಿವಪ್ರಕಾಶ್ ದೇವರಾಜ್, ‘ಘಟನೆ ಸಂಬಂಧ ಯುವತಿ ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಹೊನ್ನಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.