ADVERTISEMENT

BMTC: ರಜತ ಮಹೋತ್ಸವದ ಸಂಭ್ರಮದಲ್ಲಿ ಬಿಎಂಟಿಸಿ

ಕೆಎಸ್‌ಆರ್‌ಟಿಸಿಯಿಂದ ಪ್ರತ್ಯೇಕಗೊಂಡು ಸ್ವತಂತ್ರ ನಿಗಮವಾಗಿ 25 ವರ್ಷ

ಬಾಲಕೃಷ್ಣ ಪಿ.ಎಚ್‌
Published 3 ಸೆಪ್ಟೆಂಬರ್ 2023, 0:02 IST
Last Updated 3 ಸೆಪ್ಟೆಂಬರ್ 2023, 0:02 IST
ಕೆ.ಆರ್‌. ಮಾರುಕಟ್ಟೆ–ಮೆಜೆಸ್ಟಿಕ್‌ ನಡುವೆ 1940ರಲ್ಲಿ ಬಿಟಿಸಿ ಬಸ್‌ ಸಂಚಾರ ಆರಂಭವಾಗಿತ್ತು
ಕೆ.ಆರ್‌. ಮಾರುಕಟ್ಟೆ–ಮೆಜೆಸ್ಟಿಕ್‌ ನಡುವೆ 1940ರಲ್ಲಿ ಬಿಟಿಸಿ ಬಸ್‌ ಸಂಚಾರ ಆರಂಭವಾಗಿತ್ತು   

ಬೆಂಗಳೂರು: ಕೆಎಸ್‌ಆರ್‌ಟಿಸಿಯಿಂದ ಪ್ರತ್ಯೇಕಗೊಂಡು ಬಿಎಂಟಿಸಿ ಉದಯವಾಗಿ 25 ವರ್ಷಗಳು ಕಳೆದಿವೆ. ಅದರ ನೆನಪಲ್ಲಿ ರಜತ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಬಿಎಂಟಿಸಿ ನಿರ್ಧರಿಸಿದೆ.

1997ರ ಆ.15ರಂದು ಕೆಎಸ್‌ಆರ್‌ಟಿಸಿಯನ್ನು ನಾಲ್ಕು ನಿಗಮಗಳನ್ನಾಗಿ ಮಾಡಲಾಯಿತು. ಕೆಎಸ್ಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ ಜೊತೆಗೆ ಬಿಎಂಟಿಸಿ ಉದಯವಾಯಿತು. 

ಮೂರು ಪಟ್ಟು ಹೆಚ್ಚಿದ ಬಸ್‌ಗಳ ಸಂಖ್ಯೆ: ಬಿಎಂಟಿಸಿ ಸ್ವತಂತ್ರ ಸಂಸ್ಥೆಯಾಗಿ ಆರಂಭಗೊಂಡಾಗ 2,088 ಬಸ್‌ಗಳು ಇದ್ದವು. ಈಗ 6,570 ಬಸ್‌ಗಳಿವೆ. ಅದರಲ್ಲಿ 6,180 ಡೀಸೆಲ್‌ ಬಸ್‌ಗಳಾದರೆ, 390 ವಿದ್ಯುತ್‌ ಚಾಲಿತ ಬಸ್‌ಗಳಾಗಿವೆ.

ADVERTISEMENT

49 ಘಟಕಗಳು, 4 ಕಾರ್ಯಾಗಾರಗಳನ್ನು ಹೊಂದಿರುವ ಬಿಎಂಟಿಸಿಯಲ್ಲಿ ಒಟ್ಟು 29,019 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಿತ್ಯ 57,002 ಸುತ್ತುವಳಿಗಳಲ್ಲಿ ಬಸ್‌ಗಳು ಪ್ರಯಾಣಿಸುತ್ತಿವೆ. ಆಗ ಇದ್ದ ಬಸ್‌ಗಳಿಗೂ ಈಗಿನ ಬಸ್‌ಗಳಿಗೂ ಗುಣಮಟ್ಟದಲ್ಲಿಯೂ ಭಾರಿ ವ್ಯತ್ಯಾಸ ಇದೆ. ಪ್ರಯಾಣಿಕರ ಸ್ನೇಹಿ, ಪರಿಸರ ಸ್ನೇಹಿ ಬಸ್‌ಗಳ ಸಂಖ್ಯೆ ಈಗ ಹೆಚ್ಚಾಗಿದೆ.

ಬೆಂಗಳೂರು ಮಹಾನಗರದ ಜನರ ಸಂಪರ್ಕನಾಡಿಯಂತೆ ಕಾರ್ಯನಿರ್ವಹಿಸುತ್ತಿರುವ ಬಿಎಂಟಿಸಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರ ಸಂಖ್ಯೆ ಏರಿರಲಿಲ್ಲ. ಮೆಟ್ರೊ ರೈಲು ಸಂಚಾರ ಆರಂಭವಾಗಿದ್ದು, ಖಾಸಗಿ ವಾಹನಗಳನ್ನು ಹೆಚ್ಚು ಅವಲಂಬಿಸಿದ್ದು ಇದಕ್ಕೆ ಕಾರಣವಾಗಿತ್ತು.  25 ವರ್ಷಗಳನ್ನು ಪೂರೈಸುವ ಹೊತ್ತಿಗೆ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಯಾಗಿ ಮತ್ತೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಜೂನ್‌ವರೆಗೆ ನಿತ್ಯ ಪ್ರಯಾಣಿಸುವವರ ಸಂಖ್ಯೆ 27.34 ಲಕ್ಷ ಇದ್ದಿದ್ದು, ಈಗ 35.20 ಲಕ್ಷಕ್ಕೆ ಏರಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಉತ್ತಮ ಅನುಭವ: ‘ನಾನು ಜೂನಿಯರ್‌ ಅಸಿಸ್ಟೆಂಟ್‌ ಆಗಿ ಉದ್ಯೋಗಕ್ಕೆ ಸೇರಿದ 10 ವರ್ಷಗಳ ಬಳಿಕ ಬಿಎಂಟಿಸಿ ಎಂದು ಪ್ರತ್ಯೇಕ ನಿಗಮವನ್ನಾಗಿ ಮಾಡಲಾಯಿತು. ಅಲ್ಲಿವರೆಗೆ ನಗರ ಸಾರಿಗೆಗೆ ಬಿಟಿಎಸ್‌ ಎಂಬ ಹೆಸರಿತ್ತು. ಅದು ಕೆಎಸ್‌ಆರ್‌ಟಿಸಿ ಅಡಿಯಲ್ಲಿತ್ತು. ಅಲ್ಲಿಂದ ಇಲ್ಲಿವರೆಗೆ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಉತ್ತಮ ಅನುಭವವನ್ನು ನೀಡಿದೆ. ಆಗ ಕೆಂಪು ಬಸ್‌ಗಳು ಮಾತ್ರ ಇದ್ದವು. ಈಗ ವಿವಿಧ ರೀತಿಯ ಹೈಟೆಕ್‌ ಬಸ್‌ಗಳು ಬಂದಿವೆ. ಆಗ ಸಾಮಾನ್ಯ ಸೀಟುಗಳು ಮಾತ್ರ ಇದ್ದವು. ಈಗ ಪುಶ್‌ಅಪ್‌ ಸೀಟುಗಳು ಬಂದಿವೆ’ ಎಂದು ಬಿಎಂಟಿಸಿ ಹಿರಿಯ ಸಹಾಯಕರಾಗಿರುವ ಪುಟ್ಟರಾಜು ಬಿ. ಅವರು ‘ಅನುಭವ ಹಂಚಿಕೊಂಡರು.

‘ಉತ್ತಮ ಅಧಿಕಾರಿಗಳನ್ನು, ಉತ್ತಮರಲ್ಲದವರನ್ನು ಹೀಗೆ ಎಲ್ಲ ರೀತಿಯ ಅಧಿಕಾರಿಗಳನ್ನು ನೋಡಿದ್ದೇನೆ. ಇನ್ನು ನಾಲ್ಕು ವರ್ಷಗಳಲ್ಲಿ ನಿವೃತ್ತನಾಗುತ್ತೇನೆ. ಹಿಂದೆಲ್ಲ ಯಾವುದೇ ಗಲಾಟೆಗಳಾದರೂ ಮೊದಲು ಬಸ್‌ಗಳಿಗೆ ಕಲ್ಲು ಬೀಳುತ್ತಿದ್ದವು. ಬಹಳ ನಷ್ಟಗಳಾಗುತ್ತಿದ್ದವು. ಈಗ ಅದೆಲ್ಲ ನಿಯಂತ್ರಣವಾಗಿದೆ. ಸಂಸ್ಥೆ ಮುನ್ನಡೆಯುತ್ತಿದೆ. ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಸರ್ಕಾರದ ಪ್ರೋತ್ಸಾಹ ಹೆಚ್ಚಬೇಕಿದೆ’ ಎಂದರು.

ಹಳೇ ಬಿಎಂಟಿಸಿ ಬಸ್‌
ಹೊಸ ಬಿಎಂಟಿಸಿ ಬಸ್‌
ಬಿಎಂಟಿಸಿ ಇತಿಹಾಸ
1939ರಲ್ಲಿ 103 ಬೆಂಗಳೂರು ನಗರ ಬಸ್‌ಗಳು 15 ಬೆಂಗಳೂರು ಕಂಟೋನ್ಮೆಂಟ್‌ ಬಸ್‌ಗಳು ಖಾಸಗಿಯವರ ಮಾಲೀಕತ್ವದಲ್ಲಿದ್ದವು. ಎಲ್ಲ ಬಸ್‌ ಮಾಲೀಕರನ್ನು ಒಂದು ಯೂನಿಯನ್‌ ಅಡಿಯಲ್ಲಿ ತರುವ ಪ್ರಯತ್ನದ ಫಲವಾಗಿ 1940ರ ಜ.30ರಂದು ಬೆಂಗಳೂರು ಟ್ರಾನ್ಸ್‌ಪೋರ್ಟ್‌ ಕಂಪನಿ (ಬಿಟಿಸಿ) ಎಂಬ ಯೂನಿಯನ್‌ ಆರಂಭವಾಯಿತು. 1956ರಲ್ಲಿ ಬಿಟಿಸಿಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ಇದಾಗಿ 6 ವರ್ಷಗಳ ಬಳಿಕ 1962ರಲ್ಲಿ ಬೆಂಗಳೂರು ಟ್ರಾನ್ಸ್‌ಪೋರ್ಟ್‌ ಸರ್ವೀಸ್‌ (ಬಿಟಿಎಸ್‌) ಎಂದು ಹೆಸರು ಬದಲಾಯಿಸಲಾಯಿತು. ಮೈಸೂರು ಗವರ್ನ್‌ಮೆಂಟ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ಡಿಪಾರ್ಟ್‌ಮೆಂಟ್‌ (ಎಂಜಿಆರ್‌ಟಿಡಿ) ಅಡಿಯಲ್ಲಿ ಬಿಟಿಎಸ್‌ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಎಂಎಸ್‌ಆರ್‌ಟಿಸಿ (ಈಗಿನ ಕೆಎಸ್‌ಆರ್‌ಟಿಸಿ) ಅಡಿಯಲ್ಲಿ ರಾಜ್ಯದ ಎಲ್ಲ ಸಾರಿಗೆ ಸಂಸ್ಥೆಗಳು ಬಂದವು. 1997ರಲ್ಲಿ ಪಿಜಿಆರ್‌ ಸಿಂಧ್ಯ ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ  ಕೆಎಸ್‌ಆರ್‌ಟಿಸಿಯನ್ನು ವಿಂಗಡಿಸಿ ನಾಲ್ಕು ನಿಗಮಗಳನ್ನಾಗಿ ಮಾಡಲಾಯಿತು. ಬಿಟಿಎಸ್ ಇದ್ದಿದ್ದು ಬಿಎಂಟಿಸಿಯಾಗಿ ಬದಲಾಯಿತು.

ಅನೇಕ ಕಾರ್ಯಕ್ರಮ: ರಾಮಲಿಂಗಾರೆಡ್ಡಿ ಬಿಎಂಟಿಸಿ ಆರಂಭವಾಗಿ 25 ವರ್ಷಗಳು ಆಗಿರುವ ಹಿನ್ನೆಲೆಯಲ್ಲಿ ಸೆ.26ರಂದು ರಜತ ಮಹೋತ್ಸವ ಕಾರ್ಯಕ್ರಮ ನಡೆಸಲಾಗುವುದು. ಅಪಘಾತವಾಗದಂತೆ ಬಸ್‌ಗಳನ್ನು ಚಲಾಯಿಸಿರುವ ಹಿರಿಯ ಚಾಲಕರಿಗೆ ಸನ್ಮಾನ ಮೃತಪಟ್ಟ ಸಿಬ್ಬಂದಿಯ ಕುಟುಂಬದ ಒಬ್ಬರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

‘ಅಧಿಕಾರಶಾಹಿ ಪದ್ಧತಿ ಕಿತ್ತುಹಾಕಿ’
‘ಕೆಎಸ್‌ಆರ್‌ಟಿಸಿಯಿಂದ ಬೇರ್ಪಡಿಸಿ ನಾಲ್ಕು ನಿಗಮಗಳನ್ನು ಮಾಡುವುದನ್ನು ನಾವು ವಿರೋಧಿಸಿದ್ದೆವು. ಅದಕ್ಕೆ ನನ್ನನ್ನು ಸೇರಿ 19 ಮಂದಿಯನ್ನು ಜೈಲಿಗೆ ಹಾಕಿದ್ದರು. 25 ವರ್ಷಗಳಲ್ಲಿ ಬಿಎಂಟಿಸಿ ಪ್ರಯಾಣಿಕರಿಗಾಗಲಿ ಸಿಬ್ಬಂದಿಗಾಗಲಿ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಶನ್‌ ಅಧ್ಯಕ್ಷ ಎಚ್‌.ವಿ. ಅನಂತ ಸುಬ್ಬರಾವ್‌ ಬೇಸರ ವ್ಯಕ್ತಪಡಿಸಿದರು. ‘ಬಿಎಂಟಿಸಿಯಲ್ಲಿ ನಿರಂಕುಶ ಆಡಳಿತ ಇದೆ. ಕೆಎಸ್‌ಆರ್‌ಟಿಸಿಯಲ್ಲಿ ಹಾಗಿಲ್ಲ. ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೈಗಾರಿಕಾ ಬಾಂಧವ್ಯ ಇಲ್ಲ. ಬಸ್‌ ಸಂಚಾರ ವೇಗ ಪಡೆದಿಲ್ಲ. ಉದಾಹರಣೆಗೆ ಯಶವಂತಪುರದಿಂದ ಕೆಂಗೇರಿಗೆ ಹೋಗಲೂ ಈಗಲೂ ಕನಿಷ್ಠ 3 ಗಂಟೆ ಬೇಕಾಗಿದ್ದು ಅದನ್ನು ಕಡಿಮೆಗೊಳಿಸಲು ಕ್ರಮ ಕೈಗೊಂಡಿಲ್ಲ. ಶಕ್ತಿ ಯೋಜನೆಯ ಬಳಿಕ ಪ್ರಯಾಣಿಕರು ಸ್ವಲ್ಪ ಹೆಚ್ಚಾಗಿರಬಹುದು. ಆದರೆ ಬಸ್‌ ಸಿಬ್ಬಂದಿ ಹೆಚ್ಚಾಗಿಲ್ಲ ಎಂದು ತಿಳಿಸಿದರು. 'ಸಾರಿಗೆ ಸಚಿವರು ನಿರಂಕುಶ ಪದ್ಧತಿಯನ್ನು ಕೊನೆಗೊಳಿಸಲು ಕ್ರಮ ಕೈಗೊಳ್ಳಬೇಕು. ಅಧಿಕಾರಶಾಹಿ ಪದ್ಧತಿಯನ್ನು ಕಿತ್ತು ಹಾಕಬೇಕು. ಕೈಗಾರಿಕಾ ಬಾಂಧವ್ಯವನ್ನು ಹೆಚ್ಚಿಸಬೇಕು. ಬಸ್‌ ಸಿಬ್ಬಂದಿಯನ್ನು ಹೆಚ್ಚಿಸಬೇಕು. ಸಂಘಟನೆಗಳೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು. ಆಗ ರಜತಮಹೋತ್ಸವಕ್ಕೆ ನಿಜವಾದ ಅರ್ಥ ಬರುತ್ತದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.