ADVERTISEMENT

ಬಿಎಂಟಿಸಿ: ನಿವೃತ್ತರ ಪ್ರಯಾಸ ತಪ್ಪಿಸುವ ‘ಪ್ರಯಾಸ್‌’

ನಿವೃತ್ತಿಯಾದ ತಿಂಗಳಲ್ಲಿಯೇ ಪಿಂಚಣಿ ಆದೇಶ ಪಡೆಯಲು ಯೋಜನೆ ಸಹಕಾರಿ..

ಬಾಲಕೃಷ್ಣ ಪಿ.ಎಚ್‌
Published 1 ಜುಲೈ 2024, 2:22 IST
Last Updated 1 ಜುಲೈ 2024, 2:22 IST
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ   

ಬೆಂಗಳೂರು: ಬಿಎಂಟಿಸಿ ನೌಕರರು ನಿವೃತ್ತರಾದಾಗ ಇಪಿಎಫ್, ಪಿಂಚಣಿಗಾಗಿ ಅಲೆದಾಟ ನಡೆಸುವುದನ್ನು ‍‘ಪ್ರಯಾಸ್‌’ ಯೋಜನೆ ತಪ್ಪಿಸಿದೆ. ನಿವೃತ್ತರಾದ ಒಂದೇ ತಿಂಗಳಲ್ಲಿ ಈ ಸೌಲಭ್ಯಗಳು ನೌಕರರ ಕೈಸೇರುತ್ತಿವೆ.

ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯಿಂದ ಈ ಯೋಜನೆ ರೂಪಿಸಲಾಗಿದ್ದು, ಬಿಎಂಟಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದೆ.

58 ವರ್ಷ ಪೂರ್ಣಗೊಂಡ ಬಳಿಕ ನೌಕರರು ಪಿಂಚಣಿಗೆ ಸಂಬಂಧಿಸಿದಂತೆ, ಹಲವಾರು ದಾಖಲೆ ಪತ್ರಗಳೊಂದಿಗೆ ಪ್ರಾದೇಶಿಕ ಭವಿಷ್ಯನಿಧಿ ಕಚೇರಿಗೆ 3–4 ತಿಂಗಳು ಅಲೆಯಬೇಕಿತ್ತು. ಸಕಾಲದಲ್ಲಿ ಅನೆಕ್ಸರ್‌-ಕೆ ದೊರೆಯದೇ ಸಂಸ್ಥೆಯ ನೌಕರರು 6 ತಿಂಗಳಿನಿಂದ ಒಂದು ವರ್ಷದವರೆಗೆ ಪಿಂಚಣಿ ಇರ್ತರ್ಥವಾಗದೇ ತೊಂದರೆ ಅನುಭವಿಸಿದ್ದರು.

ADVERTISEMENT

ಏನಿದು ‘ಪ್ರಯಾಸ್‌’?

ನಿವೃತ್ತಿ ಯಾವಾಗ ಎಂಬುದು ಎಲ್ಲ ನೌಕರರಿಗೆ ಗೊತ್ತಿರುತ್ತದೆ. ನಿವೃತ್ತಿಯಾಗಲು ಕೆಲವು ತಿಂಗಳು ಬಾಕಿ ಇರುವಾಗಲೇ ನೌಕರರು ಕೆಲಸ ಮಾಡುವ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಸಹಯೋಗದೊಂದಿಗೆ ದಾಖಲೆಗಳನ್ನು ಒಟ್ಟುಗೂಡಿಸಿ ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ನೌಕರರು ನಿವೃತ್ತಿಯಾಗುವ ತಿಂಗಳಲ್ಲಿಯೇ  ಪಿಂಚಣಿ ಪಾವತಿ ಆದೇಶವನ್ನು ಪಡೆಯುವ ಸೌಲಭ್ಯವೇ ‘ಪ್ರಯಾಸ್‌’ ಯೋಜನೆಯಾಗಿದೆ.

2020ರಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಬಿಎಂಟಿಸಿ ಕಳೆದ ಮೂರು ವರ್ಷಗಳಿಂದ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಮೂರು ವರ್ಷಗಳಲ್ಲಿ 160 ನೌಕರರಿಗೆ ನಿವೃತ್ತಿಯಾದ ದಿನ ಇಲ್ಲವೇ ಅದೇ ತಿಂಗಳು ಪಿಂಚಣಿ ಪಾವತಿ ಆದೇಶ ವಿತರಿಸಲಾಗಿದೆ. ಈ ವರ್ಷ 100ಕ್ಕೂ ಅಧಿಕ ನೌಕರರಿಗೆ ಪಿಂಚಣಿ ಪಾವತಿ ಆದೇಶ ನೀಡಲಾಗುತ್ತಿದೆ ಎಂದು ಬಿಎಂಟಿಸಿ ಅಧಿಕಾರಿ ತಿಳಿಸಿದ್ದಾರೆ.

2 ವರ್ಷ ಮೊದಲೇ ನಿವೃತ್ತಿ?

ನಿವೃತ್ತಿಯ ವಯಸ್ಸನ್ನು 58 ಇದ್ದಿದ್ದನ್ನು 60ಕ್ಕೆ ಏರಿಸಿ ರಾಜ್ಯ ಸರ್ಕಾರವು 2017ರ ಮಾರ್ಚ್ 27ರಂದು ಅಧಿಸೂಚನೆ ಹೊರಡಿಸಿತ್ತು. ಇದರಿಂದಾಗಿ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಎಲ್ಲ ಇಲಾಖೆ, ನಿಗಮ, ಮಂಡಳಿಗಳ ನೌಕರರ ನಿವೃತ್ತಿ ವಯಸ್ಸು ಏರಿಕೆಯಾಗಿತ್ತು.

‘ಬಿಎಂಟಿಸಿಯಲ್ಲಿ ನೌಕರರು 60 ವರ್ಷದ ವರೆಗೆ ಕೆಲಸ ಮಾಡುತ್ತಾರೆ. ಆದರೆ, 58 ವರ್ಷ ತುಂಬಿದಾಗ ಎಲ್ಲ ಸವಲತ್ತುಗಳನ್ನು ನೀಡಲಾಗುತ್ತದೆ. ನಂತರದ ಎರಡು ವರ್ಷಗಳಿಗೆ ಇಪಿಎಫ್‌ ಇರುವುದಿಲ್ಲ. ಆದರೆ, ವೇತನದ ಜೊತೆಗೆ ಪಿಂಚಣಿಯೂ ಸಿಗುತ್ತದೆ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಉತ್ತಮ ಯೋಜನೆ: ರಾಮಲಿಂಗಾರೆಡ್ಡಿ

ಬಿಎಂಟಿಸಿ ನೌಕರರಿಗೆ ‘ಪ್ರಯಾಸ್’ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಲೆಕ್ಕಪತ್ರ ಇಲಾಖೆಯಿಂದ ಸಭೆ ನಡೆಸಲಾಗಿತ್ತು. ಪಿಂಚಣಿ ಇತ್ಯರ್ಥಪಡಿಸಲು ನೀಡಬೇಕಾದ ದಾಖಲೆಗಳ ಬಗ್ಗೆ ವಿವರಿಸಿ ಸಕಾಲದಲ್ಲಿ ದಾಖಲೆಗಳನ್ನು ನೀಡುವಂತೆ ತಿಳಿವಳಿಕೆ ನೀಡಲಾಗಿತ್ತು. ನೌಕರರು ಸಕಾಲದಲ್ಲಿ ಒದಗಿಸಿದ ದಾಖಲೆಗಳನ್ವಯ ಲೆಕ್ಕಪತ್ರ ಇಲಾಖೆಯಿಂದ ಪಿಂಚಣಿ //ಅಭ್ಯರ್ಥನವನ್ನು// ಸಿದ್ಧಪಡಿಸಿ ಪ್ರಾದೇಶಿಕ ಭವಿಷ್ಯನಿಧಿ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಲಾಗಿತ್ತು. ಅರ್ಹ ನೌಕರರಿಗೆ ಪಿಂಚಣಿ ಪಾವತಿ ಆದೇಶಗಳನ್ನು ಬಿಡುಗಡೆಗೊಳಿಸುವಲ್ಲಿ ಬಿಎಂಟಿಸಿ ಯಶಸ್ವಿಯಾಗಿದೆ. ಎಲ್ಲ ನೌಕರರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.