ಬೆಂಗಳೂರು: ಪ್ರಯಾಣಿಕರ ಕೊರತೆಯಿಂದ ನಷ್ಟದ ಸುಳಿಯಲ್ಲಿರುವ ಬಿಎಂಟಿಸಿ, ತನ್ನ ಘಟಕದ(ಡಿಪೋ) ಕಟ್ಟಡಗಳ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಮುಂದಾಗಿದೆ. 25 ಘಟಕಗಳ ಮೇಲೆ ಈಗಾಗಲೇ ಸೌರವಿದ್ಯುತ್ ಚಾವಣಿ ಹೊದಿಸಿದೆ. ಬೆಸ್ಕಾಂಗೆ ಪಾವತಿಸುತ್ತಿರುವ ವಿದ್ಯುತ್ ಶುಲ್ಕ ಉಳಿಸುವ ಜೊತೆಗೆ ವಿದ್ಯುತ್ ಮಾರಾಟ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
44 ಘಟಕಗಳು, 10 ಟಿಟಿಎಂಸಿ ಹಾಗೂ 2 ಪ್ರಮುಖ ನಿಲ್ದಾಣಗಳಲ್ಲೂ ಸೌರ ವಿದ್ಯುತ್ ಚಾವಣಿ ಅಳವಡಿಸಲು ಬಿಎಂಟಿಸಿ ಉದ್ದೇಶಿಸಿದೆ. ಪ್ರತಿ ಘಟಕದಲ್ಲಿ 50 ಕಿಲೋ ವಾಟ್‌ಗೂ ಹೆಚ್ಚು ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಒಟ್ಟಾರೆ ದಿನಕ್ಕೆ 6.5 ಮೆಗಾವಾಟ್ ಉತ್ಪಾದನೆಯ ಮಾಡುವ ಮೂಲಕ ಸ್ವಾವಲಂಬನೆ ಸಾಧಿಸಲಾಗಿದೆ ಎಂದು ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ ತಿಳಿಸಿದರು.
ಸಂಸ್ಥೆಯಿಂದ ತಿಂಗಳಿಗೆ ₹12.50 ಲಕ್ಷ ವಿದ್ಯುತ್ ಶುಲ್ಕ ಪಾವತಿಸಲಾಗುತ್ತಿದೆ. ಸ್ವಾವಲಂಬನೆ ಸಾಧಿಸಿದರೆ ಅಷ್ಟೂ ಮೊತ್ತ ಉಳಿತಾಯವಾಗಲಿದೆ. ಅಲ್ಲದೇ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಬೆಸ್ಕಾಂ ಪವರ್ ಗ್ರಿಡ್‌ಗೆ ಕಳುಹಿಸಿ ವರಮಾನ ಹೆಚ್ಚಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಸೌರ ವಿದ್ಯುತ್ ಚಾವಣಿ ನಿರ್ಮಾಣಕ್ಕೆ ಪ್ರತಿ ಘಟಕಕ್ಕೆ ₹30 ಲಕ್ಷ ವೆಚ್ಚ ತಗುಲುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಶೇ 100ರಷ್ಟು ಸಹಾಯಧನ ನೀಡಿರುವುದರಿಂದ ಸಂಸ್ಥೆಗೆ ಯಾವುದೇ ರೀತಿಯ ಖರ್ಚು ಬಂದಿಲ್ಲ ಎಂದು ಹೇಳಿದರು.
ಸಂಸ್ಥೆಯ ವರಮಾನ ಹೆಚ್ಚಳಕ್ಕೆ ಇರುವ ಈ ಮಾರ್ಗದ ಬಗ್ಗೆ ಈವರೆಗೆ ಯಾರೂ ಯೋಚಿಸಿರಲಿಲ್ಲ. ನಾನು ನೀಡಿದ ಸಲಹೆ ಪರಿಗಣಿಸಿ ಸಂಸ್ಥೆಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಅವರು ಕಾಳಜಿ ವಹಿಸಿದ್ದರಿಂದ 25 ಘಟಕಗಳಲ್ಲಿ ಸೌರ ವಿದ್ಯುತ್ ಚಾವಣಿ ಅಳವಡಿಕೆಯಾಗಿದೆ ಎಂದರು.
ಟಿಟಿಎಂಸಿಗಳಲ್ಲಿ ವಾಣಿಜ್ಯ ಮಳಿಗೆಗಳು ಇರುವ ಈ ಚಾವಣಿ ಅಳವಡಿಸಲು ಕೇಂದ್ರದಿಂದ ಪೂರ್ಣ ಪ್ರಮಾಣದ ಸಹಾಯಧನ ದೊರಕುತ್ತಿಲ್ಲ. ಸಹಾಯಧನ ದೊರಕಿಸುವ ಸಂಬಂಧ ಇಂಧನ ಸಚಿವರ ಜತೆ ಮಾತನಾಡಲಾಗಿದೆ ಎಂದು ಹೇಳಿದರು.
ಇದಲ್ಲದೇ ಬಿಎಂಟಿಸಿಯ 8 ಟಿಟಿಎಂಸಿಗಳಲ್ಲಿ 24 ಎಲೆಕ್ಟ್ರಿಕ್ ಚಾರ್ಜಿಂಗ್ ಘಟಕಗಳನ್ನು ತೆರೆಯಲಾಗಿದೆ ಎಂದೂ ಎಂ.ಆರ್. ವೆಂಕಟೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.