ADVERTISEMENT

ಬಿಎಂಟಿಸಿ: 1 ಸಾವಿರ ಇವಿ ಬಸ್‌ಗಳ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 23:47 IST
Last Updated 18 ಸೆಪ್ಟೆಂಬರ್ 2024, 23:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಾಯು ಮಾಲಿನ್ಯ ತಗ್ಗಿಸುವ ಮತ್ತು ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಬಿಎಂಟಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿಯಲ್ಲಿ ಜಿಸಿಸಿ (ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್‌) ಒಂದು ಸಾವಿರ ಎಲೆಕ್ಟ್ರಿಕ್‌ (ಇವಿ) ಬಸ್‌ಗಳ ಕಾರ್ಯಾಚರಣೆ ನಡೆಸುತ್ತಿದೆ.

ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಒಂಬತ್ತು ಮೀಟರ್‌ ಉದ್ದದ 90 ಹವಾನಿಯಂತ್ರಣ ರಹಿತ ಇವಿ ಬಸ್‌ಗಳು ಮೆಟ್ರೊ–ಫೀಡರ್‌ ಸೇವೆ ನೀಡುತ್ತಿವೆ. ಫೇಮ್‌–2 ಯೋಜನೆಯಡಿಯಲ್ಲಿ 12 ಮೀಟರ್‌ ಉದ್ದದ 300 ಹವಾನಿಯಂತ್ರಣ ರಹಿತ ಇವಿ ಬಸ್‌ಗಳು ಬೆಂಗಳೂರು ನಗರ ಪ್ರದೇಶದಲ್ಲಿ ಸಂಚರಿಸುತ್ತಿವೆ. ಫೇಮ್‌–3 ಯೋಜನೆಯಡಿಯಲ್ಲಿ 637 ಹವಾನಿಯಂತ್ರಿತ ರಹಿತ ಇವಿ ಬಸ್‌ಗಳನ್ನು ಪರಿಚಯಿಸಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ ಇನ್ನೂ 287 ಇವಿ ಬಸ್‌ಗಳು ಕಾರ್ಯಚರಣೆ ನಡೆಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ 1,027 ಎಲೆಕ್ಟ್ರಿಕ್‌ ಬಸ್‌ಗಳು ಸಂಚರಿಸುತ್ತಿವೆ. ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಲ್ಟ್‌) ನಿಧಿ ಬಂಡವಾಳ ಹೂಡಿಕೆ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 12 ಮೀಟರ್ ಉದ್ದದ 760 ಇವಿ ಬಸ್‌ಗಳು ಬಿಎಂಟಿಸಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿವೆ. ಇದರಲ್ಲಿ 320 ಹವಾನಿಯಂತ್ರಿತ ಮತ್ತು 148 ಹವಾನಿಯಂತ್ರಣರಹಿತ ಬಸ್‌ಗಳು ಇರಲಿವೆ ಎಂದು ಹೇಳಿದ್ದಾರೆ. 

ADVERTISEMENT

ಇವಿ ಬಸ್‌ಗಳ ಬಳಕೆಯಿಂದ ನಗರದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿದೆ. ಸದ್ಯ ನಗರದಲ್ಲಿ ಒಂದು ಸಾವಿರ ಇವಿ ಬಸ್‌ಗಳು ಸಂಚರಿಸುತ್ತಿದ್ದು, ಇದರಿಂದ ಬಿಎಂಟಿಸಿಗೆ ಪ್ರತಿದಿನ 51 ಸಾವಿರ ಲೀಟರ್‌ ಡಿಸೆಲ್‌ ಉಳಿತಾಯವಾಗುತ್ತಿದೆ. ಹಳೆ ಡೀಸೆಲ್‌ ಬಸ್‌ಗಳಿಗೆ ಹೋಲಿಸಿದರೆ ಇವಿ ಬಸ್‌ಗಳಿಂದ ಶಬ್ದ ಮಾಲಿನ್ಯ ಕಡಿಮೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.