ಬೆಂಗಳೂರು: ಮಹಾನಗರದ ಪ್ರಯಾಣಿಕರಿಗೆ ಬೇಡವಾಗಿರುವ ಹವಾನಿಯಂತ್ರಿತ ವೋಲ್ವೊ ಬಸ್‌ಗಳ ಸೇವೆಯನ್ನು ಆಸುಪಾಸಿನ ನಗರಗಳಿಗೆ ವಿಸ್ತರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಯೋಜನೆ ರೂಪಿಸಿದೆ.
ಮೊದಲ ಹಂತವಾಗಿ ಮೈಸೂರಿನಲ್ಲಿ ಸದ್ಯದಲ್ಲೇಪ್ರಯೋಗ ಆರಂಭವಾಗಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ನಷ್ಟಕ್ಕೆ ಕಾರಣವಾಗಿರುವ 800 ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಿ ಸುತ್ತಮುತ್ತಲ ನಗರಗಳಿಗೆ ಸಂಚಾರ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದ್ದರು. ಈ ಬಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಿ ಕೈತೊಳೆದುಕೊಳ್ಳಲು ಬಿಎಂಟಿಸಿ ಕಾತರವಾಗಿದ್ದರೆ, ಅವುಗಳನ್ನು ಪಡೆದು ಏನು ಮಾಡುವುದು ಎಂಬ ಚಿಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳದ್ದಾಗಿದೆ.
‘ಮೈಸೂರಿನಲ್ಲಿ ಸದ್ಯ 30 ವೋಲ್ವೊ ಬಸ್‌ಗಳನ್ನು ನಗರ ಸಂಚಾರಕ್ಕೆ ಬಳಸಲಾಗುತ್ತಿದೆ. ಇವುಗಳ ಪ್ರತಿ ಕಿ.ಮೀ ಸಂಚಾರಕ್ಕೆ ₹55 ವೆಚ್ಚವಾಗುತ್ತಿದ್ದು, ಬರುತ್ತಿರುವ ಆದಾಯ ₹35 ಮಾತ್ರ. ಪ್ರತಿ ಕಿ.ಮೀಗೆ ₹20 ನಷ್ಟವನ್ನು ಕೆಎಸ್‌ಆರ್‌ಟಿಸಿ ಅನುಭವಿಸುತ್ತಿದೆ. ಮೈಸೂರು ನಗರವೊಂದರಲ್ಲೇ ವರ್ಷಕ್ಕೆ ₹8 ಕೋಟಿಯಿಂದ ₹10 ಕೋಟಿ ನಷ್ಟವಾಗುತ್ತಿದೆ’ ಎಂದುಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಹೇಳಿದರು.
‘ನಗರದ ಒಳಗಿನ ಪ್ರಯಾಣಿಕರು ವೋಲ್ವೊ ಬಸ್‌ಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ನಗರದಿಂದ ನಗರಕ್ಕೆ ಸಂಚರಿಸುತ್ತಿರುವ ವೋಲ್ವೊ ಕ್ಲಬ್ ಕ್ಲಾಸ್ ಬಸ್‌ಗಳು ಆದಾಯ ತಂದುಕೊಡುತ್ತಿವೆ’ ಎಂದು ತಿಳಿಸಿದರು.
‘ಮೊದಲ ಹಂತವಾಗಿಈ ಬಸ್‌ಗಳನ್ನು ಮೈಸೂರಿನಿಂದ ಹುಣಸೂರು, ಕುಶಾಲನಗರ, ಪಿರಿಯಾಪಟ್ಟಣದ ತನಕ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿನ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದರೆ, ಬೇರೆ ಕಡೆಗೂ ವಿಸ್ತರಿಸಲು ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.
ಕೈಗಾರಿಕೆಗಳಿಗೆ ಬಸ್ ಸೇವೆ: ಚಿಂತನೆ
‘ವೋಲ್ವೊ ಬಸ್‌ಗಳ ಸೇವೆಯನ್ನು ಕೈಗಾರಿಕೆಗಳಿಗೆ ಒದಗಿಸುವ ಆಲೋಚನೆ ಇದೆ’ ಎಂದು ಕಳಸದ ತಿಳಿಸಿದರು.
‘ಮೈಸೂರಿನಲ್ಲಿ ಅಧಿಕಾರಿಗಳು ಈಗಾಗಲೇ ಕೈಗಾರಿಕೆಗಳನ್ನು ಸಂಪರ್ಕ ಮಾಡುತ್ತಿದ್ದಾರೆ. ಅಲ್ಲಿನ ಉದ್ಯೋಗಿಗಳನ್ನು ಕಚೇರಿಗೆ ಬಿಡುವ ಮತ್ತು ಮನೆಗೆ ಕರೆದೊಯ್ಯಲು ವೋಲ್ವೊ ಬಸ್‌ಗಳ ಸೇವೆ ಒದಗಿಸಲು ಮಾತುಕತೆ ನಡೆಸುತ್ತಿದ್ದಾರೆ’ ಎಂದರು.
‘ಹುಬ್ಬಳ್ಳಿ, ಬಳ್ಳಾರಿ, ಕಲಬುರ್ಗಿ ಸೇರಿದಂತೆ ವಿವಿಧ ನಗರಗಳಲ್ಲಿನ ಕೈಗಾರಿಕೆಗಳನ್ನೂ ಸಂಪರ್ಕ ಮಾಡುವ ಆಲೋಚನೆ ಇದೆ. ಒಟ್ಟಾರೆ ವೋಲ್ವೊ ಬಸ್‌ಗಳಿಂದ ಆಗುತ್ತಿರುವ ನಷ್ಟ ಸರಿದೂಗಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.