ADVERTISEMENT

ಬೊಲೆರೊಗೆ ಗುದ್ದಿ ಪರಾರಿಯಾಗಲು ಯತ್ನ: ಹಿಡಿಯಲು ಹೋದಾಗ ಎಳೆದೊಯ್ದ ವಾಹನ ಸವಾರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 13:03 IST
Last Updated 17 ಜನವರಿ 2023, 13:03 IST
ಸಾಹಿಲ್‌
ಸಾಹಿಲ್‌   

ಬೆಂಗಳೂರು: ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿ ಸ್ಕೂಟರ್‌ಗೆ ಜೋತುಬಿದ್ದ ಚಾಲಕರೊಬ್ಬರನ್ನು ರಸ್ತೆಯಲ್ಲಿ ಸವಾರ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಮುತ್ತಪ್ಪ (71) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಕೂಟರ್‌ನಲ್ಲಿ ಎಳೆದೊಯ್ದು ಅಮಾನವೀಯವಾಗಿ ವರ್ತಿಸಿದ್ದ ಆರೋಪಿ ಸಾಹಿಲ್‌ನನ್ನು (25) ಗೋವಿಂದರಾಜನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಬಗ್ಗೆ ಆಸ್ಪತ್ರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಮುತ್ತಪ್ಪ, ‘ನಮ್ಮದು ವಿಜಯಪುರ. ಬೆಂಗಳೂರಿಗೆ ಬಂದು 50 ವರ್ಷ ಆಯಿತು. ಹೆಗ್ಗನಹಳ್ಳಿಯಲ್ಲಿ ವಾಸವಿದ್ದು, ಮಗ ಇದ್ದಾನೆ’ ಎಂದರು.

‘ನನ್ನ ಬೊಲೆರೊ ಕಾರು ಚಲಾಯಿಸಿಕೊಂಡು ಚಂದ್ರಾಲೇಔಟ್‌ನಲ್ಲಿರುವ ಕುವೆಂಪು ಭಾಷಾ ಪ್ರಾಧಿಕಾರ ಕಚೇರಿಗೆ ಹೊರಟಿದ್ದೆ. ಪಶ್ಚಿಮ ಕಾರ್ಡ್‌ ರಸ್ತೆಯ ಎಸ್‌ಬಿಐ ವೃತ್ತದ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತ ಅತೀ ವೇಗವಾಗಿ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದ ಸಾಹಿಲ್, ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದ. ಕಾರಿನಿಂದ ಇಳಿದಿದ್ದ ನಾನು, ಆತನನ್ನು ತಡೆದು ಪ್ರಶ್ನಿಸಲು ಮುಂದಾಗಿದ್ದೆ.’

ADVERTISEMENT

‘ತನ್ನದೇನು ತಪ್ಪಿಲ್ಲವೆಂದು ಆತ ವಾದಿಸಿದ್ದ. ನಂತರ, ಸ್ಕೂಟರ್ ಸಮೇತ ಸ್ಥಳದಿಂದ ಪರಾರಿಯಾಗಲು ಮುಂದಾದ. ಆಗ ನಾನು ಆತನ ಸ್ಕೂಟರ್‌ ಹಿಂದಿನಿಂದ ಹಿಡಿದುಕೊಂಡಿದ್ದೆ. ಆಗ ಆತ ಸ್ಕೂಟರ್‌ ನಿಲ್ಲಿಸದೇ ಅರ್ಧ ಕಿ.ಮೀ. ಎಳೆದೊಯ್ದ. ರಸ್ತೆಯಲ್ಲಿ ಹೊರಟಿದ್ದ ಜನರೇ ಆತನನ್ನು ತಡೆದರು. ಘಟನೆಯಿಂದ ನನ್ನ ಸೊಂಟ ಹಾಗೂ ಕೈಗೆ ಗಾಯವಾಗಿದೆ’ ಎಂದು ಮುತ್ತಪ್ಪ ಹೇಳಿದರು.

‘ಘಟನೆ ಸಂಬಂಧ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಯಾವುದೇ ಹೇಳಿಕೆ ಸದ್ಯಕ್ಕೆ ಪಡೆದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.