ಬೆಂಗಳೂರು: ನಗರ ಕೇಂದ್ರ ವಿಭಾಗದ ಮೂರು ಪೊಲೀಸ್ ಠಾಣಾ ವ್ಯಾಪ್ತಿಯ ವಸ್ತು ಸಂಗ್ರಹಾಲಯಗಳಿಗೆ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
‘ಕಬ್ಬನ್ ಪಾರ್ಕ್, ವಿಧಾನಸೌಧ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್ ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕಸ್ತೂರ ಬಾ ರಸ್ತೆಯ ವಿಶ್ವೇಶ್ವರಯ್ಯ ಕೈಗಾರಿಕೆ ಹಾಗೂ ತಾಂತ್ರಿಕ ವಸ್ತು ಸಂಗ್ರಹಾಲಯ, ರಾಜಭವನ ರಸ್ತೆಯ ಜವಹರ್‌ಲಾಲ್ ನೆಹರೂ ತಾರಾಲಯ, ವಸಂತನಗರದ ನ್ಯಾಷನಲ್ ಗ್ಯಾಲರಿ ಫಾರ್ ಮಾಡರ್ನ್ ಆರ್ಟ್ಗೆ ಬೆದರಿಕೆಯ ಇ–ಮೇಲ್ ಬಂದಿತ್ತು. ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ತೆರಳಿದ್ದ ಆಯಾ ವಿಭಾಗದ ಪೊಲೀಸರು ಪರಿಶೀಲನೆ ನಡೆಸಿದ್ದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಹಾಯದಿಂದ ತಪಾಸಣೆ ನಡೆಸಲಾಗಿತ್ತು. ಇದು ಹುಸಿ ಇ–ಮೇಲ್ ಎಂದು ಕಂಡುಬಂದ ಮೇಲೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದರು.
ಹೊರರಾಜ್ಯದಿಂದ ಕರೆ: ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೂ ಬಾಂಬ್ ಬೆದರಿಕೆ ಕರೆ ಬಂದಿತ್ತು. ಜ.3ರಂದು ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕಚೇರಿಗೆ ಕರೆ ಮಾಡಿ, ಬೆಂಗಳೂರಿನ ಕಚೇರಿಯಲ್ಲಿ ಬಾಂಬ್ ಇಡಲಾಗಿದೆಯೆಂದು ಹೇಳಿದ್ದರು ಎಂದು ಗೊತ್ತಾಗಿದೆ.
ಮುಂಬೈ ಕಚೇರಿ ಸಿಬ್ಬಂದಿ ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಯಾವುದೇ ಸ್ಫೋಟಕವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದರು.
ಪ್ರಾಥಮಿಕ ಮಾಹಿತಿ ಪ್ರಕಾರ, ನೆರೆ ರಾಜ್ಯದಿಂದ ಕರೆ ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.
ಬೆದರಿಕೆ ಸಂದೇಶ ಬಂದ ಇ-ಮೇಲ್ ವಿಳಾಸಗಳ ಐಪಿ ವಿಳಾಸ ಪತ್ತೆಗೆ ತಾಂತ್ರಿಕ ತನಿಖೆ ನಡೆಸಲಾಗುತ್ತಿದ್ದು, ಜತೆಗೆ ಸಂಬಂಧಿತ ಸಂಸ್ಥೆಗೆ ಐಪಿ ವಿಳಾಸ ನೀಡುವಂತೆ ಕೋರಲಾಗಿದೆ. ಪ್ರಾಥಮಿಕ ತನಿಖೆ ನಡೆಸಲಾಗಿದ್ದು ವಿಪಿಎನ್ ಬಳಸಿ ಬೆದರಿಕೆ ಸಂದೇಶ ಕಳುಹಿಸಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.