ADVERTISEMENT

ಬಾಂಬ್ ಬೆದರಿಕೆ ಇ–ಮೇಲ್: ಮಾಹಿತಿ ನೀಡದ ಕಂಪನಿ

ಇಂಟರ್‌ಪೋಲ್ ನೋಟಿಸ್‌ಗೂ ಉತ್ತರಿಸದ ಪ್ರತಿನಿಧಿಗಳು- ಪೊಲೀಸರಿಗೆ ಸವಾಲಾದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2024, 0:00 IST
Last Updated 18 ಫೆಬ್ರುವರಿ 2024, 0:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದಲ್ಲಿರುವ ಶಾಲೆಗಳಿಗೆ ಬಾಂಬ್ ಬೆದರಿಕೆ ಇ– ಮೇಲ್ ಕಳುಹಿಸಿದ್ದ ವ್ಯಕ್ತಿಗಳ ಮಾಹಿತಿ ನೀಡಲು ವಿದೇಶಿ ಕಂಪನಿಗಳು ನಿರಾಕರಿಸಿದ್ದು, ಪ್ರಕರಣ ಭೇದಿಸಲು ಪೊಲೀಸರಿಗೆ ಹೊಸ ಸವಾಲು ಎದುರಾಗಿದೆ.

2023ರ ಡಿಸೆಂಬರ್‌ನಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 70 ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ–ಮೇಲ್ ಬಂದಿತ್ತು. ಯಶವಂತಪುರದ ಕೇಂದ್ರೀಯ ವಿದ್ಯಾಲಯಕ್ಕೂ ಇತ್ತೀಚೆಗೆ ಇ–ಮೇಲ್ ಕಳುಹಿಸಿ ಬೆದರಿಕೆ ಹಾಕಲಾಗಿತ್ತು.

ADVERTISEMENT

ಬಾಂಬ್ ಬೆದರಿಕೆ ಸಂಬಂಧ ಆಯಾ ಠಾಣೆಗಳಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತಾಂತ್ರಿಕ ಪುರಾವೆಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ. ಆದರೆ, ಆರೋಪಿಗಳ ಬಗ್ಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ.

ಇಂಟರ್‌ಪೋಲ್ ನೋಟಿಸ್‌ಗೂ ಉತ್ತರವಿಲ್ಲ: ಬೆದರಿಕೆ ಸಂದೇಶ ಬಂದಿದ್ದ ಇ–ಮೇಲ್‌ಗಳ ವರ್ಚ್ಯುಲ್ ಪ್ರೈವೇಟ್ ನೆಟ್‌ವರ್ಕ್ಸ್‌ (ವಿಪಿಎನ್‌) ಹಾಗೂ ಇಂಟರ್‌ನೆಟ್ ಪ್ರೋಟೊಕಾಲ್ (ಐ.ಪಿ) ವಿಳಾಸವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿಗಳು, ವಿದೇಶದ ಕಂಪನಿಗಳ ಸೇವೆ ಬಳಸಿಕೊಂಡು ಇ– ಮೇಲ್ ಕಳುಹಿಸಿದ್ದ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.

‘ತಾಂತ್ರಿಕ ಪುರಾವೆಗಳನ್ನು ಆಧರಿಸಿ ಇಂಟರ್‌ಪೋಲ್‌ಗೆ ಪತ್ರ ಬರೆಯಲಾಗಿತ್ತು. ವಿದೇಶಿ ಕಂಪನಿಗಳಿಂದ ಇ–ಮೇಲ್ ಬಳಕೆದಾರರ ಮಾಹಿತಿ ಕೊಡಿಸುವಂತೆ ಕೋರಲಾಗಿತ್ತು. ಇಂಟರ್‌ಪೋಲ್ ಅಧಿಕಾರಿಗಳು, ಸಂಬಂಧಪಟ್ಟ ಕಂಪನಿಗಳಿಗೂ ನೋಟಿಸ್‌ ನೀಡಿದ್ದಾರೆ. ಆದರೆ, ಕಂಪನಿಯವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ವೈಯಕ್ತಿಕ ಸುರಕ್ಷತೆಗೆ ಆದ್ಯತೆ:

‘ಬಳಕೆದಾರರ ವೈಯಕ್ತಿಕ ಮಾಹಿತಿ ಗೋಪ್ಯವಾಗಿಡುವುದು ಕಂಪನಿಯ ಧ್ಯೇಯ. ಯಾವುದೇ ಕಾರಣಕ್ಕೂ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಮಾಹಿತಿ ಹಂಚಿಕೆ ಸಂಬಂಧ ಯಾವುದೇ ಕಾನೂನುಗಳು ಕಂಪನಿಗೆ ಅನ್ವಯವಾಗುವುದಿಲ್ಲ’ ಎಂಬುದಾಗಿಯೂ ಕಂಪನಿಯವರು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.

2022ರ ಏಪ್ರಿಲ್ 8ರಂದು ನಗರದ 16 ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್ ಬಂದಿತ್ತು. ಈ ಪ್ರಕರಣಗಳ ತನಿಖೆ ನಡೆಸಿದ್ದ ಪೊಲೀಸರು, ವಿದೇಶದಿಂದ ಇ–ಮೇಲ್ ಬಂದಿದ್ದನ್ನು ಪತ್ತೆ ಮಾಡಿ ಕಂಪನಿಯಿಂದ ಮಾಹಿತಿ ಕೋರಿದ್ದರು. ಅವಾಗಲೂ ಕಂಪನಿಯಿಂದ ಯಾವುದೇ ಉತ್ತರ ಬಂದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.