ADVERTISEMENT

ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ:ಇ–ಮೇಲ್‌ ವಿಳಾಸ ಪತ್ತೆಗೆ ತನಿಖೆ ಚುರುಕು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 15:51 IST
Last Updated 4 ಫೆಬ್ರುವರಿ 2024, 15:51 IST
<div class="paragraphs"><p>( ಸಂಗ್ರಹ ಚಿತ್ರ) ಸಾಂದರ್ಭಿಕ&nbsp;</p></div>

( ಸಂಗ್ರಹ ಚಿತ್ರ) ಸಾಂದರ್ಭಿಕ 

   

ಬೆಂಗಳೂರು: ನಗರದ ಶಾಲೆಗಳಿಗೆ ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಹಾಕುತ್ತಿರುವ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ಇದೇ ರೀತಿಯ ಬೆದರಿಕೆ ಕರೆಯೊಂದು ನಾಲ್ಕು ದಿನಗಳ ಹಿಂದೆ ಯಶವಂತಪುರದ ಕೇಂದ್ರೀಯ ವಿದ್ಯಾಲಯಕ್ಕೂ ಬಂದಿದ್ದು, ಈ ಸಂಬಂಧ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆದರಿಕೆಯಿಂದ ಕೆಲವು ಗಂಟೆಗಳ ಕಾಲ ಶಾಲಾ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಹುಸಿ ಕರೆ ಎಂಬುದು ಗೊತ್ತಾದ ಮೇಲೆ ಆತಂಕ ದೂರವಾಗಿತ್ತು.

ADVERTISEMENT

‘ಅಂದು ಬೆಳಿಗ್ಗೆ 10.30ರ ಸುಮಾರಿಗೆ ಇ–ಮೇಲ್‌ ಪರಿಶೀಲಿಸಿದಾಗ ಬೆದರಿಕೆ ಪತ್ರ ಬಂದಿರುವುದು ಗೊತ್ತಾಗಿದೆ. ‘ಶಾಲೆಯಲ್ಲಿ ಬಾಂಬ್‌ ಇಡಲಾಗಿದ್ದು, ಅದು ತಕ್ಷಣವೇ ಸ್ಫೋಟಗೊಳ್ಳಲಿದೆ. ಕಟ್ಟಡದಲ್ಲಿದ್ದವರು ಹೊರಬಂದರೆ ಅಪಾಯದಿಂದ ಪಾರಾಗಬಹುದು’ ಎಂದು ಬರೆಯಲಾಗಿತ್ತು. ಪ್ರಾಂಶುಪಾಲರು ಹಾಗೂ ಸಂಸ್ಥೆಯ ಅಧಿಕಾರಿಯೊಬ್ಬರ ಇ–ಮೇಲ್‌ ವಿಳಾಸಕ್ಕೆ ಬೆದರಿಕೆ ಪತ್ರ ಬಂದಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ವಿದ್ಯಾಲಯದ ಪ್ರಾಂಶುಪಾಲರಾದ ಅಮೃತಬಾಲ ಅವರು ದೂರು ನೀಡಿದ್ದು, ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಅಂದೇ ಶಾಲಾ ಆವರಣಕ್ಕೆ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಬಾಂಬ್‌ ತಪಾಸಣೆ ದಳ ಭೇಟಿ ಪರಿಶೀಲನೆ ನಡೆಸಲಾಗಿತ್ತು. ಯಾವುದೇ ಸ್ಫೋಟಕ ಸಾಮಗ್ರಿಗಳು ಪತ್ತೆ ಆಗಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಡಿಸೆಂಬರ್‌ನಲ್ಲಿ ಬಂದಿದ್ದ ಬೆದರಿಕೆ ಕರೆಗಳ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ. ಕೇಂದ್ರೀಯ ವಿದ್ಯಾಲಯಕ್ಕೆ ಬಂದಿರುವ ಇ–ಮೇಲ್‌ನ ವಿಳಾಸ ಪತ್ತೆಗೆ ಸೈಬರ್‌ ತಜ್ಞರ ಸಹಕಾರ ಕೋರಲಾಗಿದೆ’ ಎಂದು ಪೊಲೀಸರು ಹೇಳಿದರು.

ಡಿಸೆಂಬರ್‌ ಮೊದಲ ವಾರ ನಗರದ 70 ಶಾಲೆಗಳಿಗೆ ಇದೇ ರೀತಿಯ ಬಾಂಬ್‌ ಬೆದರಿಕೆ ಇ–ಮೇಲ್‌ ಬಂದಿತ್ತು. ಶಾಲೆಗಳ ಆವರಣದಲ್ಲಿ ಆತಂಕ ಸೃಷ್ಟಿಯಾಗಿ, ಶಾಲೆಗಳಿಗೆ ರಜೆ ನೀಡಲಾಗಿತ್ತು. ಮಕ್ಕಳು ಆತಂಕಗೊಂಡಿದ್ದರು. ಕಾರ್ಯ ಪ್ರವೃತ್ತರಾದ ಪೊಲೀಸರು, ಶಾಲೆಗಳ ಆವರಣಗಳಲ್ಲಿ ಶೋಧ ನಡೆಸಿ ಹುಸಿ ಇ–ಮೇಲ್ ಎಂಬುದನ್ನು ಪತ್ತೆ ಹಚ್ಚಿದ್ದರು.

ಅಲ್ಲದೇ ರಾಜಭವನದಲ್ಲಿಯೂ ಬಾಂಬ್‌ ಇರಿಸಿರುವುದಾಗಿ ಕೋಲಾರದ ಯುವಕ ಭಾಸ್ಕರ್‌ ಎಂಬಾತ ಬೆದರಿಕೆ ಕರೆ ಮಾಡಿದ್ದ. ಆತನನ್ನು ಪೊಲೀಸರು ಬಂಧಿಸಿದ್ದರು. ಜ.4ರಂದು ನಗರದ ಕಸ್ತೂರಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೂ ಬಾಂಬ್‌ ಬೆದರಿಕೆ ಕರೆ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.