ADVERTISEMENT

ವಸತಿ ಪ್ರದೇಶದಲ್ಲಿ ವಾಣಿಜ್ಯ ಮಳಿಗೆ: ನಿತ್ಯವೂ ಕಿರಿಕಿರಿ, ನಿವಾಸಿಗಳ ಆಕ್ರೋಶ

ವಾಣಿಜ್ಯ ಚಟುವಟಿಕೆ ಬಿರುಸು

ಲಿಂಗರಾಜು
Published 22 ಮಾರ್ಚ್ 2022, 20:20 IST
Last Updated 22 ಮಾರ್ಚ್ 2022, 20:20 IST
ವಾಣಿಜ್ಯ ಮಳಿಗೆಗಳಿಂದಾಗಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ವಾಹನ ನಿಲುಗಡೆ ಸಮಸ್ಯೆ
ವಾಣಿಜ್ಯ ಮಳಿಗೆಗಳಿಂದಾಗಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ವಾಹನ ನಿಲುಗಡೆ ಸಮಸ್ಯೆ   

ಬೊಮ್ಮನಹಳ್ಳಿ: ನಗರದ ಎಚ್ಎಸ್ಆರ್ ಬಡಾವಣೆಯ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳು ಹೆಚ್ಚುತ್ತಿದ್ದು, ನೆಮ್ಮದಿಯಿಂದ ವಾಸ ಮಾಡಲಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಎಚ್ಎಸ್ಆರ್ ಬಡಾವಣೆಯಲ್ಲಿ ಭೂಮಿಯ ಬೆಲೆ ಗಗನ ಮುಟ್ಟಿದೆ. ಇದರಿಂದಾಗಿ ಇಡೀ ಬಡಾವಣೆ ವಾಣಿಜ್ಯ ಕೇಂದ್ರವಾಗಿ ಬದಲಾಗುತ್ತಿದ್ದು, ನೆಮ್ಮದಿಯ ವಾಸಕ್ಕೆ ಮನೆ ಕಟ್ಟಿಕೊಂಡಿರುವವರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬಡಾವಣೆಯ 5, 9, 14, 24 ಮತ್ತು 27ನೇ ಮುಖ್ಯ ರಸ್ತೆಗಳು ಹಾಗೂ 17 ಮತ್ತು 22ನೇ ಅಡ್ಡರಸ್ತೆಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಅಧಿಕೃತ ಅನುಮತಿ ನೀಡಲಾಗಿದೆ. ಆದರೆ, ಇದನ್ನು ಮೀರಿ ಬಹುತೇಕ ಎಲ್ಲ ರಸ್ತೆಗಳಲ್ಲೂ ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ ಎಂದು ನಿವಾಸಿಗಳು ದೂರಿದ್ದಾರೆ. ಉದಾಹರಣೆಗೆ 16ನೇ ಅಡ್ಡರಸ್ತೆಯಲ್ಲಿ ಮೂರು ನರ್ಸರಿ ಶಾಲೆಗಳಿವೆ. ಇದಕ್ಕೆ ಅನುಮತಿ ಸಿಕ್ಕಿದ್ದಾದರೂ ಹೇಗೆ? ಎಂದು ನಿವಾಸಿಗಳು ಪ್ರಶ್ನಿಸುತ್ತಾರೆ.

ADVERTISEMENT

‘ಕೆಲವೆಡೆ ಪೇಯಿಂಗ್‌ ಗೆಸ್ಟ್‌ ಕಟ್ಟಡಕ್ಕೆ (ಪಿ.ಜಿ) ಉದ್ದೇಶಕ್ಕೆಂದು ಅನುಮತಿ ಪಡೆದು, ಇತರೆ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಅನುಮತಿ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಇಂತಹ ಕಳ್ಳ ಮಾರ್ಗಗಳನ್ನು ಕಂಡುಕೊಂಡಿದ್ದಾರೆ’ ಎಂದು ಹೆಸರೇಳಲಿಚ್ಛಿಸದ ನಿವಾಸಿಯೊಬ್ಬರು ಹೇಳಿದರು.

‘ನಮ್ಮ ರಸ್ತೆಯಲ್ಲಿ ಐಟಿ ಕಂಪನಿ, ಬೇಕರಿ, ಬಟ್ಟೆ ಷೋರೂಂ ಅನೇಕ ದೊಡ್ಡ ಮಳಿಗೆಗಳಿವೆ. ಇಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಳ್ಳದಿರುವುದರಿಂದ, ಮನೆ ಮುಂದೆ ಪಾರ್ಕಿಂಗ್ ಮಾಡಿ ಹೋಗುತ್ತಾರೆ. ಮನೆ ಎದುರು ಗುಂಪುಗೂಡಿ ಸಿಗರೇಟ್ ಸೇದುತ್ತಾ ಕಿರುಚಾಡುತ್ತಾರೆ. ಇದರಿಂದ ನಮ್ಮ ನೆಮ್ಮದಿ ಹಾಳಾಗಿದೆ’ ಎಂದು ಸ್ಥಳೀಯ ನಿವಾಸಿ ಅಂಕಣ್ಣರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

‘ಬಡಾವಣೆಯಲ್ಲಿ ಪಿ.ಜಿ ಕಟ್ಟಡಗಳ ಹಾವಳಿ ಹೆಚ್ಚುತ್ತಿದೆ. ಅಕ್ಕಪಕ್ಕದ ಬಡಾವಣೆಗಳನ್ನು ಅಭಿವೃದ್ಧಿಪಡಿಸಿದ್ದಲ್ಲಿ ಇಲ್ಲಿನ ಒತ್ತಡ ಕಡಿಮೆ ಮಾಡಿ ವಾಣಿಜ್ಯ ವ್ಯವಹಾರವನ್ನು ವಿಸ್ತರಿಸಲು ಸಾಧ್ಯವಿದೆ. ಆದರೂ ಈ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎನ್ನುತ್ತಾರೆ ನಿವಾಸಿ ಅನಿಲ್ ರೆಡ್ಡಿ.

‘ವಸತಿಗೆ ಮೀಸಲಾದ ರಸ್ತೆಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಸಭೆಯಲ್ಲಿ ಅನೇಕ ಬಾರಿ ಚರ್ಚೆಯಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಇನ್ನಾದರೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವ ಅವಶ್ಯಕತೆ ಇದೆ’ ಎನ್ನುತ್ತಾರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಎಚ್.ಇ.ಚಂದ್ರಶೇಖರ್.

‘40 ಅಡಿ ರಸ್ತೆ ಇರುವ ಕಡೆ ವಾಣಿಜ್ಯ ಉದ್ದೇಶಕ್ಕೆ ವಾಣಿಜ್ಯ ಪರವಾನಗಿ ನೀಡಲು ಬಿಬಿಎಂಪಿ ಮಾರ್ಗದರ್ಶಿ ಸೂತ್ರಗಳಲ್ಲಿ ಅವಕಾಶವಿದೆ. ಆದಾಗ್ಯೂ ಎರಡು ವರ್ಷಗಳಿಂದ ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಅನುಮತಿ ನೀಡುತ್ತಿಲ್ಲ. ಜೊತೆಗೆ ಪರವಾನಗಿ ನೀಡುವಾಗ ಅಕ್ಕಪಕ್ಕದ ನಿವಾಸಿಗಳಿಂದ ಎನ್ಓಸಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ನಿವಾಸಿಗಳಿಂದ ಆಕ್ಷೇಪ ಬಂದ ಕಡೆ ಪರವಾನಗಿ ರದ್ದು ಮಾಡಿದ್ದೇವೆ’ ಎನ್ನುತ್ತಾರೆ ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಆರೋಗ್ಯ ವೈದ್ಯಾಧಿಕಾರಿ ನಾಗೇಂದ್ರ.

**
26ರಂದು‘ಜನಸ್ಪಂದನ’ ಕಾರ್ಯಕ್ರಮ
ಬೆಂಗಳೂರು: ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಜನರ ಅಹವಾಲು ಆಲಿಸುವ ಸಲುವಾಗಿ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಇದೇ 26ರಂದು ಜೆ.ಪಿ.ನಗರ ಆರನೇ ಹಂತದ ಗಣೇಶ ದೇವಸ್ಥಾನ ಮೈದಾನದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಶಾಸಕ ಎಂ.ಸತೀಶ ರೆಡ್ಡಿ, ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ
ದಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ. ಈ ಕ್ಷೇತ್ರದ ನಿವಾಸಿಗಳು ಸ್ಥಳೀಯ ಸಮಸ್ಯೆಗಳನ್ನು ನೇರವಾಗಿ ಶಾಸಕರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬಹುದು.

ಆಸಕ್ತರು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಮೊದಲು ನೋಂದಣಿ ಮಾಡಿಸಿದವರಿಗೆ ಆದ್ಯತೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಸ್ಥಳ: ಗಣೇಶ ಮೈದಾನ, 186, ಪುಟ್ಟೇನಹಳ್ಳಿ ರಸ್ತೆ, ಕೆ.ಆರ್‌.ಬಡಾವಣೆ, ಜೆ.ಪಿ.ನಗರ ಆರನೇ ಹಂತ, ಬೆಂಗಳೂರು–78

ಸಂಪರ್ಕ: 9448528998

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.