ಬೊಮ್ಮನಹಳ್ಳಿ: ದುರ್ವಾಸನೆಯಲ್ಲಿ ಮುಳುಗಿರುವ ಕೂಡ್ಲು, ಪರಂಗಿಪಾಳ್ಯ, ಹರಳೂರು ಸೋಮಸಂದ್ರಪಾಳ್ಯ ಹಾಗೂ ಹೊಸಪಾಳ್ಯ ನಿವಾಸಿಗಳು, ಸಾವಯವ ಗೊಬ್ಬರ ತಯಾರಿಕಾ ಘಟಕ ಮುಚ್ಚಬೇಕು ಎಂಬ ದಶಕಗಳ ಕೂಗು ಆಳುವವರ ಕಿವಿಗೇ ಮುಟ್ಟಿಲ್ಲ.
ಕೂಡ್ಲು ಗ್ರಾಮದ ಹರಳೂರು ರಸ್ತೆಯಲ್ಲಿನ ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಈ ಘಟಕದಿಂದ ಸೂಸುವ ದುರ್ವಾಸನೆ ಸುತ್ತಮುತ್ತಲ ಮೂರು ಕಿಲೋ ಮೀಟರ್ ಆವರಿಸಿಕೊಂಡಿದೆ.
ಮಕ್ಕಳು ಮತ್ತು ಹಿರಿಯ ನಾಗರಿಕರು ಉಸಿರಾಟದ ತೊಂದರೆ ಸೇರಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಚರ್ಮ ರೋಗಗಳು ಹೆಚ್ಚುತ್ತಿವೆ. ಸೊಳ್ಳೆ ಮತ್ತು ನೊಣಗಳ ಕಾಟದಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಕಣ್ಣು ಉರಿ, ವಾಂತಿ ಬರುವುದು ಇಲ್ಲಿನ ನಿವಾಸಿಗಳಿಗೆ ಸಾಮಾನ್ಯವಾಗಿದೆ. ಕ್ಯಾನ್ಸರ್‌ಗೆ ತುತ್ತಾಗುವ ಆತಂಕವೂ ಜನರನ್ನು ಕಾಡುತ್ತಿದೆ.
‘ಅಂತರ್ಜಲ ಮತ್ತು ಗಾಳಿಯ ಗುಣಮಟ್ಟ ಕುಸಿದಿದೆ. ಈ ಭಾಗದ ಕೊಳವೆ ಬಾವಿಗಳಲ್ಲಿ ಗಡಸು ನೀರು ಬರುತ್ತಿದೆ. ಕೆಲೆವೆಡೆ ಹಳದಿ ಬಣ್ಣದ ನೀರು ಬರುತ್ತಿದ್ದು, ಕುಡಿಯಲು ಮಾತ್ರವಲ್ಲ ಬಟ್ಟೆ ತೊಳೆಯಲು ಯೋಗ್ಯವಾಗಿಲ್ಲ. ಈ ಭಾಗದ ಜೀವಜಲ ಕಲುಷಿತಗೊಂಡಿದೆ’ ಎಂದು ಸ್ಥಳೀಯರು ಹೇಳುತ್ತಾರೆ.
‘75 ಟನ್ ಕ್ಷಮತೆಯ ಈ ಘಟಕದಲ್ಲಿ ನಿಯಮ ಮೀರಿ 200 ಟನ್‌ಗೂ ಹೆಚ್ಚಿನ ಗೊಬ್ಬರ ಸಂಸ್ಕರಣೆ ಮಾಡಲಾಗುತ್ತಿದೆ. ಇತ್ತೀಚೆಗೆ ಬಯೋ ಫಿಲ್ಟರ್ ಯಂತ್ರಗಳನ್ನು ಅಳವಡಿಸಲಾಗಿದೆ. ಆದರೆ, ಈ ಯಂತ್ರಗಳು ಚಾಲನೆಯಲ್ಲಿ ಇಲ್ಲ. ಇಲ್ಲಿನ ಉಪ ಉತ್ಪನ್ನಗಳನ್ನು ಖರೀದಿಸುತ್ತಿದ್ದ ಕಂಪನಿಗಳು ಕೋವಿಡ್ ಬಳಿಕ ಖರೀದಿ ನಿಲ್ಲಿಸಿವೆ. ಹೀಗಾಗಿ, ಕೊಳೆತ ವಾಸನೆ ಹೆಚ್ಚಾಗಿದೆ. ಈ ಎಲ್ಲ ದುಷ್ಪರಿಣಾಮಗಳ ವಿರುದ್ಧ ದಶಕಗಳಿಂದಲೂ ‘ಸ್ವಚ್ಛ ಗಾಳಿ ನಮ್ಮ ಹಕ್ಕು’ ಎಂಬ ಘೋಷಣೆಯಡಿ ಸ್ಥಳೀಯರು ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಆದರೂ, ಸಮಸ್ಯೆ ಬಗೆಹರಿದಿಲ್ಲ’ ಎಂದು ಅವರು ದೂರುತ್ತಾರೆ.
‘ಶಾಸಕ ಎಂ. ಸತೀಶ್ ರೆಡ್ಡಿ, ಸಂಸದರಾದ ತೇಜಸ್ವಿ ಸೂರ್ಯ, ರಾಜೀವ್ ಚಂದ್ರಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ಘಟಕ ಸ್ಥಳಾಂತರಿಸುವ ಭರವಸೆ ನೀಡಿದ್ದರು. ಆದರೆ, ಎಂಟು ವರ್ಷಗಳಿಂದಲೂ ನಮ್ಮ ಕೂಗಿಗೆ ಬೆಲೆ ಸಿಕ್ಕಿಲ್ಲ. ಮನೆಗೆ ನೆಂಟರಿಷ್ಟರನ್ನು ಕರೆಯುವುದನ್ನೇ ಬಿಟ್ಟಿದ್ದೇವೆ. ನಮ್ಮ ಸಿಟ್ಟು ರಟ್ಟೆಗೆ ಬರುವ ಮುನ್ನ ಕ್ರಮಕೈಗೊಳ್ಳಲಿ. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯ’ ಎಂದು ನಿವಾಸಿಗಳ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ರಮಾಕಾಂತ್ ನರಗುಂದ್ ಹೇಳುತ್ತಾರೆ.
‘ಸುತ್ತಮುತ್ತ ಸುಮಾರು 15ಕ್ಕೂ ಹೆಚ್ಚು ಶಾಲೆಗಳಿವೆ. ಮಕ್ಕಳು ಇದರಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ವಚ್ಛ ಗಾಳಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿರುವುದು ದುರದೃಷ್ಟಕರ’ ಎನ್ನುತ್ತಾರೆ ಸ್ಥಳೀಯರಾದ ವಿಜಯಕುಮಾರ್.
‘ನಾವು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಲೆಮನ್ ಗ್ರಾಸ್ ಸಿಂಪಡಿಸಿ ಸಮಸ್ಯೆಯನ್ನು ಮುಚ್ಚಿ ಹಾಕುತ್ತಾರೆ. ಶಾಶ್ವತ ಪರಿಹಾರದ ಕುರಿತು ಯಾರೋಬ್ಬರೂ ಯೋಚಿಸುತ್ತಿಲ್ಲ. ಇದರಿಂದ ರೋಸಿ ಹೋಗಿದ್ದೇವೆ’ ಎನ್ನುತ್ತಾರೆ ಸೋಮಸಂದ್ರಪಾಳ್ಯ ನಿವಾಸಿ ಕಾಮೇಶ್.
‘ನ್ಯಾಯಾಲಯದ ಸೂಚನೆಯಂತೆ ಕೆಸಿಡಿಸಿ ಘಟಕವನ್ನು ಪರಿಶೀಲಿಸಿ ಘಟಕವನ್ನು ಮುಚ್ಚುವಂತೆ ಆದೇಶ ನೀಡಲಾಗಿತ್ತು. ಆಡಳಿತ ಮಂಡಳಿಯು ಮಾಲಿನ್ಯ ತಡೆಗಟ್ಟುತ್ತೇವೆಂಬ ಭರವಸೆ ನೀಡಿದ್ದರಿಂದ ಮೂರು ವಾರಗಳಲ್ಲಿ ಮಾಲಿನ್ಯ ನಿಯಂತ್ರಣದ ಕಾರ್ಯಯೋಜನೆ ಸಲ್ಲಿಸುವಂತೆ ಗಡುವು ನೀಡಲಾಗಿತ್ತು. ಆದರೆ, ಕಾರ್ಯಯೋಜನೆ ಕೈಸೇರಿಲ್ಲ’ ಎಂದು ಪರಿಸರ ಅಧಿಕಾರಿ ಸುಧಾಕರ್ ಹೇಳಿದರು.
‘ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಕ್ಕೆ ಕಿಮ್ಮತ್ತಿಲ್ಲ’
ಕೆಸಿಡಿಸಿ ಘಟಕದಿಂದ ಜನಜೀವನದ ಮೇಲೆ ಉಂಟಾಗುತ್ತಿರುವ ಪರಿಣಾಮಗಳ ಕುರಿತು ಕೆಎಚ್‌ಎಚ್‌ಎಸ್‌ಪಿ(ಕೂಡ್ಲು, ಹರಳೂರು, ಹೊಸಪಾಳ್ಯ, ಸೋಮಸಂದ್ರಪಾಳ್ಯ, ಪರಂಗಿಪಾಳ್ಯ) ನಿವಾಸಿ ಕ್ಷೇಮಾಭಿವೃದ್ಧಿ ಸಂಘ ನ್ಯಾಯಾಲಯದ ಮೆಟ್ಟಿಲೇರಿತ್ತು. ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಆದರೂ ಸಮಸ್ಯೆ ಪರಿಹಾರವಾಗಿಲ್ಲ.
ಕೆಸಿಡಿಸಿ ಘಟಕವನ್ನು ಮುಚ್ಚುವಂತೆ ಜ. 27 ರಂದು ನೋಟೀಸ್ ಜಾರಿ ಮಾಡಿತ್ತು. ಆದರೆ, ಈವರೆಗೂ ಆದೇಶ ಜಾರಿಯಾಗಿಲ್ಲ. ಸುರಕ್ಷಾ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಕೆಸಿಡಿಸಿ ಘಟಕಕ್ಕೆ ಪರವಾನಗಿಯ ನವೀಕರಣ ನಿರಾಕರಿಸಲಾಗಿದೆ. ಈ ಸಂಬಂಧ ಬೆಸ್ಕಾಂಗೆ ಪತ್ರ ಬರೆದು ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚಿಸಲಾಗಿತ್ತು. ಪರವಾನಗಿ ಇಲ್ಲದೆಯೂ ಘಟಕ ಚಾಲನೆಯಲ್ಲಿದೆ ಎಂದು ಸ್ಥಳೀಯರು ದೂರುತ್ತಾರೆ.
ಬೊಮ್ಮನಹಳ್ಳಿ ಕ್ಷೇತ್ರ: ನಾಳೆ ಜನಸ್ಪಂದನ
ಬೆಂಗಳೂರು: ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಜನರ ಅಹವಾಲು ಆಲಿಸುವ ಸಲುವಾಗಿ ‘ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ವತಿಯಿಂದ ಇದೇ 26ರಂದು ಜೆ.ಪಿ.ನಗರ ಆರನೇ ಹಂತದ ಗಣೇಶ ದೇವಸ್ಥಾನ ಮೈದಾನದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶಾಸಕ ಎಂ.ಸತೀಶ ರೆಡ್ಡಿ, ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಹಿಸಿ ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ. ಈ ಕ್ಷೇತ್ರದ ನಿವಾಸಿಗಳು ಸ್ಥಳೀಯ ಸಮಸ್ಯೆಗಳನ್ನು ನೇರವಾಗಿ ಶಾಸಕರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬಹುದು.
ಆಸಕ್ತರು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಮೊದಲು ನೋಂದಣಿ ಮಾಡಿಸಿದವರಿಗೆ ಆದ್ಯತೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಸ್ಥಳ: ಗಣೇಶ ಮೈದಾನ, 186, ಪುಟ್ಟೇನಹಳ್ಳಿ ರಸ್ತೆ, ಕೆ.ಆರ್.ಬಡಾವಣೆ, ಜೆ.ಪಿ.ನಗರ ಆರನೇ ಹಂತ, ಬೆಂಗಳೂರು–78
ಸಂಪರ್ಕ: 9448528998
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.