ಬೆಂಗಳೂರು: ರಕ್ತದ ಕ್ಯಾನ್ಸರ್ (ಲ್ಯುಕೇಮಿಯಾ) ಎದುರಿಸುತ್ತಿದ್ದ ಇಲ್ಲಿನ ಯುವಕನಿಗೆ ಆತನ ಸಹೋದರಿಯೇ ರಕ್ತದ ಆಕರ ಕೋಶ ದಾನ ಮಾಡುವ ಮೂಲಕ ಚೇತರಿಕೆಗೆ ನೆರವಾಗಿದ್ದಾರೆ.
ಟ್ರಸ್ಟ್‌ವೆಲ್ ಆಸ್ಪತ್ರೆಯಲ್ಲಿ ಯುವಕನಿಗೆ ಅ.19ರಂದು ಅಸ್ಥಿ ಮಜ್ಜೆ ಕಸಿ ನಡೆಸಲಾಗಿದೆ. 2019ರಲ್ಲಿಯೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಅವರು ಕಿಮೋಥೆರಪಿ ಚಿಕಿತ್ಸೆ ಪಡೆದಿದ್ದರು. ಈ ವರ್ಷ ಅವರಲ್ಲಿ ಮತ್ತೆ ಕ್ಯಾನ್ಸರ್ ಕೋಶಗಳು ಕಾಣಿಸಿಕೊಂಡಿದ್ದವು. ಎರಡನೇ ಸುತ್ತಿನ ಕಿಮೋಥೆರಪಿ ಚಿಕಿತ್ಸೆ ನೀಡಲಾಯಿತು.
ರೋಗದಿಂದ ಗುಣಮುಖರಾಗಲು ಅಸ್ಥಿ ಮಜ್ಜೆಯ ಕಸಿ ಮಾಡಲು ನಿರ್ಧರಿಸಲಾಯಿತು. ಸಹೋದರಿಯೇ ಅಸ್ಥಿ ಮಜ್ಜೆ ದಾನ ಮಾಡಲು ಒಪ್ಪಿಕೊಂಡರು. ಅಸ್ಥಿ ಮಜ್ಜೆ ಕಸಿ ಬಳಿಕ 28 ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಲಾಗಿದೆ. ಈಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
‘ಅಸ್ಥಿ ಮಜ್ಜೆ ಕಸಿಗೆ ಸೂಕ್ತ ದಾನಿ ಸಿಗುವುದು ಕಷ್ಟವಾಗಿತ್ತು. ಸೋದರಿಯೇ ಮುಂದೆ ಬಂದ ಕಾರಣ ಕಸಿ ಸಾಕಾರವಾಯಿತು. ಕುಟುಂಬದಲ್ಲಿ ಹೊಂದಾಣಿಕೆ ಆಗುವ ದಾನಿಗಳು ಸಿಗುವುದು ಅಪರೂಪ’ ಎಂದು ವೈದ್ಯ ಡಾ.ಸಚಿನ್ ಜಾಧವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.