ADVERTISEMENT

ವರ್ಷಾಂತ್ಯಕ್ಕೆ ಅಸ್ಥಿಮಜ್ಜೆ ಚಿಕಿತ್ಸೆ ಪ್ರಾರಂಭ

ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ನಿರ್ಮಾಣವಾಗಿರುವ ಘಟಕ * ದುಬಾರಿ ಚಿಕಿತ್ಸೆ ಬಿಪಿಎಲ್ ಕುಟುಂಬಗಳಿಗೆ ಉಚಿತ

ವರುಣ ಹೆಗಡೆ
Published 28 ಸೆಪ್ಟೆಂಬರ್ 2020, 20:05 IST
Last Updated 28 ಸೆಪ್ಟೆಂಬರ್ 2020, 20:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕ್ಯಾನ್ಸರ್‌ ರೋಗಿಗಳು ಅಸ್ಥಿಮಜ್ಜೆ (ಬೋನ್‌ ಮ್ಯಾರೊ) ಕಸಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ₹ 30 ಲಕ್ಷದಿಂದ ₹ 50 ಲಕ್ಷ ಖರ್ಚು ಮಾಡುವ ಪರಿಸ್ಥಿತಿಯಿದೆ. ವರ್ಷಾಂತ್ಯಕ್ಕೆ ಈ ಚಿಕಿತ್ಸೆ ನಗರದ ಕಿದ್ವಾಯಿ ಸಂಸ್ಥೆಯಲ್ಲಿ ಪ್ರಾರಂಭವಾಗಲಿದ್ದು, ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ದೊರೆಯಲಿದೆ.

ಸಂಸ್ಥೆಯ ಆವರಣದಲ್ಲಿ ಈಗಾಗಲೇ ಅಸ್ಥಿಮಜ್ಜೆ ಘಟಕದ‌ ಕಟ್ಟಡ ನಿರ್ಮಾಣವಾಗಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ರಾಜ್ಯದ ಮೊದಲ ಸರ್ಕಾರಿ ಅಸ್ಥಿಮಜ್ಜೆ ಘಟಕ ಎಂಬ ಗೌರವಕ್ಕೆ ಕೂಡ ಇದು ಭಾಜನವಾಗಲಿದೆ. ₹ 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, 13 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಕೋವಿಡ್‌ ಕಾರಣ ಕೆಲ ಕಾರ್ಮಿಕರು ಊರುಗಳಿಗೆ ಮರಳಿದ್ದರಿಂದ ನಿರ್ಮಾಣದ ಕಾರ್ಯಕ್ಕೆ ಅಡ್ಡಿ ಉಂಟಾಗಿತ್ತು. ಈಗ ಕಾರ್ಮಿಕರು ವಾಪಸ್‌ ಆಗಿದ್ದು, ನವೆಂಬರ್‌ ವೇಳೆಗೆ ಸೇವೆಗೆ ಸಜ್ಜುಗೊಳ್ಳಲಿದೆ.

ಘಟಕವು 17 ಹಾಸಿಗೆಗಳನ್ನು ಒಳಗೊಳ್ಳಲಿದೆ. ವೈದ್ಯರು ಹಾಗೂ ಸಿಬ್ಬಂದಿಗೆ ಸಂಸ್ಥೆಯು ತರಬೇತಿಯನ್ನು ನೀಡುತ್ತಿದೆ. ರೋಗಿಗಳನ್ನು ರಕ್ತದ ಕ್ಯಾನ್ಸರ್‌ನಿಂದ ಮುಕ್ತ ಮಾಡಲು ಅಸ್ಥಿಮಜ್ಜೆ ಕಸಿ ಸಹಾಯಕ. ಆದರೆ, ಸಂಕೀರ್ಣ ಚಿಕಿತ್ಸೆಗೆರೋಗಿಗಳು ಇಷ್ಟು ದಿನ ಖಾಸಗಿ ಆಸ್ಪತ್ರೆಗಳನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿತ್ತು. ಅಲ್ಲಿ ₹ 50 ಲಕ್ಷದವರೆಗೂ ವೆಚ್ಚ ಮಾಡಬೇಕಾದ ಕಾರಣ ಬಹುತೇಕರು ಈ ಚಿಕಿತ್ಸೆಗೆ ಹಿಂದೇಟು ಹಾಕುತ್ತಿದ್ದರು.

ADVERTISEMENT

₹ 21 ಲಕ್ಷದವರೆಗೆ ಉಚಿತ: ರಾಜ್ಯ ಸರ್ಕಾರವು 2018ರಲ್ಲಿ ಬಿಪಿಎಲ್‌ ಕುಟುಂಬಗಳಿಗಾಗಿ ‘ರಾಜ್ಯ ಅಂಗಾಂಗ ಕಸಿ ಯೋಜನೆ’ ಆರಂಭಿಸಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿದೆ. ಯೋಜನೆಯಡಿ ಹೃದಯ ಕಸಿಗೆ ಪ್ರತಿ ರೋಗಿಗೆ ₹ 11 ಲಕ್ಷ, ಮೂತ್ರಪಿಂಡ ಕಸಿಗೆ ₹ 3 ಲಕ್ಷ, ಯಕೃತ್ ಕಸಿಗೆ ₹ 12 ಲಕ್ಷ ಧನಸಹಾಯ ನೀಡಲು ಅವಕಾಶವಿದೆ. ಕಳೆದ ವರ್ಷ ಅಸ್ಥಿಮಜ್ಜೆ ಕಸಿಯನ್ನೂ ಸೇರ್ಪಡೆ ಮಾಡಲಾಗಿದ್ದು, ₹ 21 ಲಕ್ಷದವರೆಗೂ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ.

‘ಇತ್ತೀಚೆಗೆ ಅಸ್ಥಿಮಜ್ಜೆ ಸಮಸ್ಯೆ ಹೆಚ್ಚಾಗಿದ್ದು, ಅಧಿಕ ರೋಗಿಗಳು ಕಸಿಗಾಗಿ ಎದುರು ನೋಡುತ್ತಿದ್ದಾರೆ. ರಾಜ್ಯ ಅಂಗಾಂಗ ಕಸಿ ಯೋಜನೆಗೆ ಅಸ್ಥಿಮಜ್ಜೆ ಕಸಿಯನ್ನೂ ಸೇರ್ಪಡೆ ಮಾಡಲಾಗಿದೆ. ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟಕವಿಲ್ಲ. ನೂರಾರು ಬಡ ರೋಗಿಗಳಿಗೆ ಈ ಕೇಂದ್ರ ಸಹಾಯಕವಾಗಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಸಿ. ರಾಮಚಂದ್ರ ತಿಳಿಸಿದರು.

ಅಸ್ಥಿ ಮಜ್ಜೆ ಕಸಿ ಘಟಕದ ಕಟ್ಟಡದ ನಿರ್ಮಾಣದ ಕಾಮಗಾರಿ ಮುಗಿದಿದೆ. ವಿವಿಧ ಉಪಕರಣಗಳ ಖರೀದಿಗೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಈ ವರ್ಷಾಂತ್ಯಕ್ಕೆ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ ಎಂದು ನುಡಿದರು.

ಎರಡು ವಿಧದಲ್ಲಿ ಕಸಿ

ಅಸ್ಥಿಮಜ್ಜೆ ಕಸಿ ಘಟಕದಲ್ಲಿ ವ್ಯಕ್ತಿಯ ದೇಹದ ಭಾಗದಲ್ಲಿ ಸಕ್ರಿಯವಾಗಿರುವ ಕ್ಯಾನ್ಸರ್‌ ಕಣಗಳನ್ನು ನಾಶಮಾಡಲಾಗುತ್ತದೆ. ಅವರದೇ ದೇಹದ ಆರೋಗ್ಯವಂತ ಅಂಗದ ಒಂದಿಷ್ಟು ಮಜ್ಜೆಯನ್ನು ತೆಗೆದು, ಕ್ಯಾನ್ಸರ್‌ ಕಣಗಳು ನಾಶವಾದ ಜಾಗದಲ್ಲಿ ಕಸಿ ಮಾಡಲಾಗುತ್ತದೆ. ಈ ರೀತಿಯ ಕಸಿಯನ್ನು ಅಂಗಾಂಗ ಕಸಿ ಯೋಜನೆಯಡಿ ₹ 7 ಲಕ್ಷದವರೆಗೆ ಉಚಿತವಾಗಿ ಮಾಡಲಾಗುತ್ತದೆ. ಕ್ಯಾನ್ಸರ್‌ ಪೀಡಿತ ವ್ಯಕ್ತಿಯ ದೇಹಕ್ಕೆ ಹೊಂದಿಕೊಳ್ಳುವ ಮಜ್ಜೆಯನ್ನು ಬೇರೆಯವರಿಂದ ಪಡೆದು, ಕಸಿ ಮಾಡಿದಲ್ಲಿ ₹ 21 ಲಕ್ಷದವರೆಗೆ ಬಿಪಿಎಲ್‌ ಕುಟುಂಬದ ವ್ಯಕ್ತಿಗೆ ಧನಸಹಾಯ ಸಿಗಲಿದೆ ಎಂದು ಸಂಸ್ಥೆಯ ವೈದ್ಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.