ಬೆಂಗಳೂರು: ‘ವರಕವಿ ದ.ರಾ. ಬೇಂದ್ರೆ ಅವರ ವ್ಯಕ್ತಿತ್ವ, ಅವರ ಕೃತಿಗಳ ಸಾರದ ಬಗ್ಗೆ ಪರಿಚಯ ಮಾಡಿಕೊಳ್ಳಬೇಕಾದುದು ಬಹಳಷ್ಟಿದೆ. ಪದಗಳನ್ನು ಪೋಣಿಸುವುದರಲ್ಲಿ ಅವರು ನಿಸ್ಸೀಮರು. ಆ ಅದ್ಭುತ ಶಕ್ತಿ ಅವರಿಗಿತ್ತು’ ಎಂದುಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ಉದಯಭಾನು ಕಲಾಸಂಘವು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ಆಯೋಜಿಸಿದ್ದ ಜಿ.ಕೃಷ್ಣಪ್ಪ (ಬೇಂದ್ರೆ ಕೃಷ್ಣಪ್ಪ) ಅವರ ದ.ರಾ.ಬೇಂದ್ರೆ ಕಾವ್ಯಾರ್ಥ ಆಕರ ಗ್ರಂಥ ‘ಬೇಂದ್ರೆಕಾವ್ಯ: ಪದನಿರುಕ್ತ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಿ.ಕೃಷ್ಣಪ್ಪ ಅವರು ಬೇಂದ್ರೆ ಸಾಹಿತ್ಯವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ್ದಾರೆ. ಬೇಂದ್ರೆ ಕಾವ್ಯಗಳ ಅರ್ಥ, ವಿಶೇಷತೆ ಅರಿತುಕೊಳ್ಳಲು ಕೃಷ್ಣಪ್ಪ ಅವರ ಈ ಗ್ರಂಥವನ್ನು ಓದಲೇಬೇಕು’ ಎಂದರು
‘ಬೇಂದ್ರೆ ಕಾವ್ಯಗಳನ್ನು, ಗ್ರಂಥಗಳನ್ನು ಸರಳವಾಗಿ ಮನದಟ್ಟು ಮಾಡಿಕೊಳ್ಳಲು ಈ ಗ್ರಂಥ ಉಪಯುಕ್ತ. ಮುಂದಿನ ಪೀಳಿಗೆಗೂ ಸರಳವಾದ ಮಾಹಿತಿ ನೀಡುವ ಕೈಪಿಡಿ ಇದು. ಕನ್ನಡದಲ್ಲಿ ಮೊದಲ ಬಾರಿಗೆ ಪದನಿರುಕ್ತ ಕೃತಿ ಬಂದಿರುವುದು ನಮ್ಮ ಹೆಮ್ಮೆ’ ಎಂದು ತಿಳಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ, ‘ಜಿ.ಕೃಷ್ಣಪ್ಪ ಅವರು ಬೇಂದ್ರೆ ಅವರ ಸಾಹಿತ್ಯದ ಆಳ, ಅಗಲವನ್ನು ಸಂಪೂರ್ಣವಾಗಿ ಅರಗಿಸಿಕೊಂಡವರು. ಬೇಂದ್ರೆ ಅವರ ಕಾವ್ಯ ಓದಿಗೆ ಹೊಸ ಆಯಾಮವನ್ನು ಒದಗಿಸಿಕೊಟ್ಟವರು. ಕನ್ನಡ ಸಾಹಿತ್ಯಕ್ಕೆ ಅವರ ಸೇವೆ ಅಪಾರ’ ಎಂದರು.
**
ಪುಸ್ತಕ ದರ: ₹480
ಪ್ರಕಟಣೆ: ವಂಶಿ ಪ್ರಕಾಶನ, ನೆಲಮಂಗಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.