ಬೆಂಗಳೂರು: ‘ಭೂಮಿಯ ಮೇಲೆ ಹುಟ್ಟಿದ ಎಲ್ಲ ಜೀವಿಗೂ ತಮ್ಮದೇ ಆದ ಗೌರವವಿದೆ. ತೃತೀಯ ಲಿಂಗಿಗಳ ಸ್ವಾಭಿಮಾನದ ಬದುಕಿಗೆ ನಾವೆಲ್ಲರೂ ಕೈಜೋಡಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
‘ಒಂದೆಡೆ’ ಸಂಸ್ಥೆ ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ ಅವರ ಆತ್ಮಕತೆ ‘ಅಕ್ಕಯ್, ಕರುಣೆಗೊಂದು ಸವಾಲು’ ಪುಸ್ತಕ ಬಿಡುಗಡೆಗೊಳಿಸಿ, ಮಾತನಾಡಿದರು.
‘ಗಂಡು, ಹೆಣ್ಣು, ತೃತೀಯ ಲಿಂಗಿಗಳು ಎಂಬ ತಾರತಮ್ಯ ಸರಿಯಲ್ಲ. ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು. ಅಕ್ಕಯ್ ಪದ್ಮಶಾಲಿ ಅವರು ತಮ್ಮ ಆತ್ಮಕಥನದಲ್ಲಿ ಕುಟುಂಬ ಮತ್ತು ಹೊರಗಿನ ಸಮಾಜ ತಮ್ಮನ್ನು ಯಾವ ರೀತಿ ನೋಡುತ್ತಿತ್ತು, ತಮಗಾದ ಗಾಯಗಳು ಹಾಗೂ ಅನುಭವಿಸಿದ ಯಾತನೆಗಳನ್ನು ವಿವರಿಸಿದ್ದಾರೆ’ ಎಂದು ತಿಳಿಸಿದರು.
‘ಯಾರೇ ಆಗಲಿ ನೋವು ಅನುಭವಿಸದೇ ಸಾಧನೆ ಮಾಡಲಾಗುವುದಿಲ್ಲ. ಅಕ್ಕಯ್ ಪದ್ಮಶಾಲಿ ಅವರು ಕೂಡ ಅನೇಕ ಪೆಟ್ಟುಗಳನ್ನು ತಿಂದು, ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದಾರೆ. ಅದಕ್ಕಾಗಿ ನನ್ನಿಂದ ಹಿಡಿದು ಅಮೆರಿಕದ ಅಧ್ಯಕ್ಷರವರೆಗೂ ಎಲ್ಲರೂ ಅವರನ್ನು ಕರೆಯುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗಕರ್ಮಿ ಪ್ರಸನ್ನ, ‘ಸಣ್ಣ ಸಣ್ಣ ಸಮುದಾಯಗಳು ಒಂದೆಡೆ ಸೇರಿ ಮಹಾನ್ ಶಕ್ತಿಯನ್ನು ಸೃಷ್ಟಿಸಬೇಕು. ಸಮಾಜವು ಲೈಂಗಿಕ ಅಲ್ಪಸಂಖ್ಯಾತರನ್ನು ಹೀಯಾಳಿಸುತ್ತಿದೆ ಎಂದು ಆರೋಪಿಸುವುದು ಪರಿಹಾರವಲ್ಲ. ಅದರ ವಿರುದ್ಧ ಹೋರಾಡುವಂತೆ ಶೋಷಿತರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಹಾಗೂ ಅನಿವಾರ್ಯ’ ಎಂದರು.
ಸಾಮಾಜಿಕ ಹೋರಾಟಗಾರ್ತಿ ರೂತ್ ಮನೋರಮಾ, ಅಕ್ಕಯ್ ಪದ್ಮಶಾಲಿ, ಲೇಖಕ ಡಾ. ಡೊಮಿನಿಕ್, ಪತ್ರಕರ್ತ ಜಿ.ಎನ್. ಮೋಹನ್, ಶಾಸಕಿ ಸೌಮ್ಯಾರೆಡ್ಡಿ, ಶಾಸಕ ಎ. ಮಂಜು, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.