ಬೆಂಗಳೂರು: ‘ಒಮ್ಮೆ ಕಾರಿನಲ್ಲಿ ತೆರಳುತ್ತಿರುವಾಗ ಏಳು ಪುಟ್ಟ ಪುಟ್ಟ ಗುಡ್ಡಗಳಲ್ಲಿ ಸೀತಾ ಫಲದ ಗಿಡಗಳನ್ನು ಕಂಡ ಲೀಲಾವತಿ, ಮಗನಿಗೆ ಆ ಭೂಮಿಯನ್ನು ಖರೀದಿಸಲು ಸೂಚಿಸಿದರು. ಗುಡ್ಡವಾಗಿದ್ದ ಸೋಲದೇವನಹಳ್ಳಿಯ ಆ ಜಾಗವನ್ನು ನಂದನ ವನವನ್ನಾಗಿಸಿದ ಅವರು, ಅದೇ ಜಾಗದಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ’ ಎಂದು ಪತ್ರಕರ್ತ ಗಣೇಶ್ ಕಾಸರಗೋಡು ಹೇಳಿದರು.
ಸ್ನೇಹ ಬುಕ್ ಹೌಸ್ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬಿ.ಎಸ್. ವೆಂಕಟೇಶ ರಾವ್ ಅವರ ‘ಸಿನಿ ಮಾಯೆ’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು.
‘ಹೆಣ್ಣುಗಳಲ್ಲಿ ಸೀತಾ ಮಾತೆ, ಹಣ್ಣುಗಳಲ್ಲಿ ಸೀತಾ ಫಲ ತುಂಬಾ ಇಷ್ಟವೆಂದು ಹೇಳಿದ್ದ ಲೀಲಾವತಿ, ತಮ್ಮ ಜೀವನದ ಕೆಲ ಘಟನೆಗಳನ್ನು ಹಂಚಿಕೊಂಡಿದ್ದರು. ಏಳು ಗುಡ್ಡಗಳ ಜಾಗ ಖರೀದಿಸಬೇಕೆಂಬ ಲೀಲಾವತಿ ಅವರ ನಿರ್ಧಾರದಿಂದ ವಿನೋದ್ ಆಘಾತಕ್ಕೆ ಒಳಗಾಗಿದ್ದರು. ಚೆನ್ನೈ ಸೇರಿ ಹಲವೆಡೆ ನಮಗೆ ಜಮೀನು ಇದೆ ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸಿದ್ದರು. ಆದರೂ ಲೀಲಾವತಿ ಅವರು ಕೇಳದಿದ್ದರಿಂದ ಆ ಜಾಗವನ್ನು ವಿನೋದ್ ಖರೀದಿಸಿದ್ದರು’ ಎಂದು ನೆನಪಿಸಿಕೊಂಡರು.
ಕೃತಿಯ ಬಗ್ಗೆ ಮಾತನಾಡಿದ ಚಿತ್ರ ಸಾಹಿತಿ ಹೃದಯ ಶಿವ, ‘ಸಿನಿಮಾ ರಂಗದಲ್ಲಿ ಕೆಲಸ ಮಾಡುವ ಆಕಾಂಕ್ಷೆಯೊಂದಿಗೆ ಬಂದವರಿಗೆ ಸರಿಯಾದ ಮಾರ್ಗದರ್ಶನ ಸಿಗುವುದು ಅಪರೂಪ. ವೈದ್ಯ, ಎಂಜಿನಿಯರ್ ಸೇರಿ ಯಾವುದೇ ವೃತ್ತಿ ತೆಗೆದುಕೊಂಡರೂ ಒಂದಷ್ಟು ತಯಾರಿ ಅಗತ್ಯ. ಸಿನಿಮಾ ರಂಗಕ್ಕೆ ಬರುವವರೂ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಸಿನಿಮಾ ರಂಗ ಪ್ರವೇಶಿಸುವವರಿಗೆ ಈ ಕೃತಿ ಕೈಪಿಡಿಯಾಗಲಿದೆ’ ಎಂದು ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.