ಬೆಂಗಳೂರು: ‘ನಮ್ಮ ಸಂಸ್ಕೃತಿಯಲ್ಲಿ ರಾಮ ಮತ್ತು ಕೃಷ್ಣ ಮುಖ್ಯರಾಗುತ್ತಾರೆ. ರಾಮ ಧರ್ಮವನ್ನು ಸಂರಕ್ಷಿಸಿದರೆ, ಕೃಷ್ಣ ತನ್ನ ಮಹಿಮೆಯಿಂದ ಧರ್ಮವನ್ನು ತಿದ್ದಿದ’ ಎಂದು ವಿಮರ್ಶಕ ಎಸ್.ಆರ್. ವಿಜಯಶಂಕರ್ ತಿಳಿಸಿದರು.
ಸಮನ್ವಿತ ತಂಡವು ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಎ.ವಿ. ಪ್ರಸನ್ನ ಅವರ ‘ಕುಮಾರವ್ಯಾಸ ಕಂಡ ಶ್ರೀಕೃಷ್ಣ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ‘ರಾಮ ನಮಗೆ ಪ್ರಾರಂಭದಿಂದ ಕೊನೆಯವರೆಗೂ ಮನುಷ್ಯನಾಗಿ ಕಾಣಿಸುತ್ತಾನೆ. ರಾಮ ತಾನು ಒಪ್ಪಿಕೊಂಡ ಧರ್ಮವನ್ನು ಸಂರಕ್ಷಿಸಿ, ಬೆಳೆಸುತ್ತಾನೆ. ರಾಮನನ್ನು ಎಲ್ಲರ ದೃಷ್ಟಿಯಲ್ಲಿಯೂ ಒಂದೇ ರೀತಿ ಕಾಣಬಹುದು. ಆದರೆ, ಕೃಷ್ಣ ಬೇರೆ ಬೇರೆ ರೀತಿ ಕಾಣಿಸುತ್ತಾನೆ. ಕೃಷ್ಣನ ಮಹಿಮೆ ಅಪಾರ. ಆತ ಧರ್ಮವನ್ನು ತಿದ್ದುವ ಜತೆಗೆ ಸೃಷ್ಟಿಸುವ ಶಕ್ತಿ ಹೊಂದಿದ್ದ’ ಎಂದು ಹೇಳಿದರು.
‘ಭಕ್ತಿಗೆ ಒಂದು ಶೀಲವಿದೆ. ಅದು ಒಂದು ಭೋಳೇತನದ, ಜವಾಬ್ದಾರಿ ರಹಿತವಾದ ಭಟ್ಟಂಗಿತನವಲ್ಲ. ಕರ್ತವ್ಯ ನಿರತನಾಗಿ ಏನನ್ನು ಮಾಡಬೇಕೋ ಅದನ್ನು ಮನುಷ್ಯ ಪ್ರಯತ್ನವಾಗಿ ಮಾಡಿ, ಉಳಿದದ್ದನ್ನು ಮಾನುಷ ಪ್ರಯತ್ನಕ್ಕೆ ಬಿಡುವುದೇ ಭಕ್ತಿಯ ಶೀಲ. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ’ ಎಂಬುದರ ಅರ್ಥವೂ ಇದೇ ಆಗಿದೆ. ಕರ್ಮದಲ್ಲಿ ಲೋಪವಿಲ್ಲದೆ ನಿರ್ವಹಿಸಿ, ಫಲಾಫಲಗಳನ್ನು ದೈವಕ್ಕೆ ಬಿಡುವುದೇ ಭಕ್ತಿ’ ಎಂದು ತಿಳಿಸಿದರು.
ಕೃತಿಯ ಲೇಖಕ ಎ.ವಿ. ಪ್ರಸನ್ನ, ‘ಕುಮಾರವ್ಯಾಸ ತನ್ನ ಬಗ್ಗೆ ಎರಡು ಸಂಗತಿಗಳನ್ನು ಮಾತ್ರ ಹೇಳಿಕೊಂಡಿದ್ದಾನೆ. ಮೊದಲನೆಯದು ತಾನು ಗದುಗಿನ ವೀರನಾರಾಯಣ ಭಕ್ತ, ಎರಡನೆಯದು ತಾನು ವ್ಯಾಸರ ಮಾನಸಪುತ್ರ ಶುಕರೂಪ. ಅಪ್ರತಿಮ ಕೃಷ್ಣ ಭಕ್ತನಾಗಿರುವ ಇವನು, ಮಹಾಭಾರತವನ್ನು ಕೃಷ್ಣನ ಕಥೆಯನ್ನಾಗಿ ಪರಿವರ್ತಿಸಿದ ಬಗೆ ನಮ್ಮಲ್ಲಿ ವಿಸ್ಮಯವನ್ನು ಉಂಟುಮಾಡುತ್ತದೆ. ಕೃಷ್ಣನ ಬಗೆಗೆ ಬರೆದ ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ’ ಎಂದು ಹೇಳಿದರು.
ಇದಕ್ಕೂ ಮೊದಲು ನಿರ್ಮಲಾ ಮತ್ತು ಪ್ರಸನ್ನ ದಂಪತಿಯಿಂದ ಕುಮಾರವ್ಯಾಸ ಭಾರತದ ಆಯ್ದ ಭಾಗಗಳ ಗಮಕ ವಾಚನ–ವ್ಯಾಖ್ಯಾನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.