ADVERTISEMENT

ಪುಸ್ತಕ ಖರೀದಿ: ಟೆಂಡರ್ ರದ್ಧತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 14:41 IST
Last Updated 19 ಜುಲೈ 2024, 14:41 IST
   

ಬೆಂಗಳೂರು: ‘ಕಾಲೇಜು ಶಿಕ್ಷಣ ಇಲಾಖೆಯು ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನದಡಿ (ರೂಸಾ) ಪುಸ್ತಕ ಖರೀದಿಗೆ ನಡೆಸಿದ ಟೆಂಡರ್ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ. ಆದ್ದರಿಂದ ಈ ಟೆಂಡರ್ ಪ‍್ರಕ್ರಿಯೆಯನ್ನು ರದ್ದುಪಡಿಸಬೇಕು’ ಎಂದು ಕರ್ನಾಟಕ ಪ್ರಕಾಶಕರ ಮತ್ತು ಪುಸ್ತಕ ವ್ಯಾಪಾರಿಗಳ ಸಂಘ ಸರ್ಕಾರಕ್ಕೆ ಮನವಿ ಮಾಡಿದೆ. 

ಈ ಬಗ್ಗೆ ಸಂಘದ ಅಧ್ಯಕ್ಷ ಎ. ರಮೇಶ್ ಅವರು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ. ‘ರಾಜ್ಯದಾದ್ಯಂತ ಎಲ್ಲ ಪದವಿ ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಇಲಾಖೆಯು ಪುಸ್ತಕಗಳನ್ನು ಖರೀದಿಸುತ್ತಿದೆ. ಪುಸ್ತಕ ಖರೀದಿಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಪುಸ್ತಕಗಳ ಪಟ್ಟಿ ಬಿಡುಗಡೆಯಾಗಿದೆ. ಈ ಟೆಂಡರ್‌ನ ನಿಯಮ ಹಾಗೂ ನಿಬಂಧನೆಗಳು ಕೇವಲ ಇಬ್ಬರು ಪುಸ್ತಕ ವ್ಯಾಪಾರಿಗಳಿಗೆ ಅನುಕೂಲಕರವಾಗಿದೆ. ಇಲಾಖೆಯ ನಡೆಯಿಂದ ಉಳಿದ ಪುಸ್ತಕ ವ್ಯಾಪಾರಿಗಳು, ಪ್ರಕಾಶಕರು ಮತ್ತು ಲೇಖಕರಿಗೆ ಅನ್ಯಾಯವಾಗಿದೆ’ ಎಂದು ತಿಳಿಸಿದ್ದಾರೆ. 

‘ಖರೀದಿಯಾಗುತ್ತಿರುವ ಶೇ 80 ರಷ್ಟು ಪುಸ್ತಕಗಳು ಎರಡು ಮೂರು ಪ್ರಕಾಶನಗಳಿಗೆ ಸೇರಿವೆ. ರಾಜ್ಯದಾದ್ಯಂತ ಸಾವಿರಾರು ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು, ಲೇಖಕರಿದ್ದು, ಇಲಾಖೆಯು ಏಕಸ್ವಾಮ್ಯದ ರೀತಿಯಲ್ಲಿ ನಡೆದುಕೊಂಡಿದೆ. ಈ ರೀತಿಯ ಟೆಂಡರ್ ಪ್ರಕ್ರಿಯೆ ಅಗತ್ಯ ಇರಲಿಲ್ಲ. ಬದಲಾಗಿ, ಆಯಾ ಕಾಲೇಜು ಪ್ರಾಂಶುಪಾಲರು ಕಾಲೇಜು ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ, ಪುಸ್ತಕಗಳನ್ನು ಖರೀದಿಸಿದ್ದರೆ ಎಲ್ಲ ಪ್ರಕಾಶಕರು ಮತ್ತು ಪುಸ್ತಕ ವ್ಯಾಪಾರಿಗಳು ಪಾಲ್ಗೊಳ್ಳಲು ಸಾಧ್ಯವಾಗುತ್ತಿತ್ತು’ ಎಂದು ಹೇಳಿದ್ದಾರೆ. 

ADVERTISEMENT

‘ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಟೆಂಡರ್ ಕರೆದು, ಪುಸ್ತಕ ಖರೀದಿ ಮಾಡುವ ರೀತಿಯಲ್ಲಿ ಆದೇಶ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.