ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಸ್ಯವಿಜ್ಞಾನ ವಿಭಾಗ ಶತಮಾನೋತ್ಸವ ಸಂಭ್ರಮದ
ಲ್ಲಿದ್ದು, ಇದರ ನೆನಪಿನ ಅಂಗವಾಗಿ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ 50 ಎಕರೆ ಪ್ರದೇಶದಲ್ಲಿ ಸಸ್ಯೋದ್ಯಾನ ನಿರ್ಮಾಣವಾಗಲಿದೆ.
ಇದೇ 19 ಮತ್ತು 20ರಂದು ಜ್ಞಾನಭಾರತಿ ಪ್ರಾಂಗಣದ ಎಚ್.ಎನ್.ಸಭಾಂಗಣದಲ್ಲಿ ಶತಮಾನೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರುಸಸ್ಯೋದ್ಯಾನಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 2 ಸಾವಿರ ನೀಲಗಿರಿ ಮರಗಳನ್ನು ತೆರವುಗೊಳಿಸಿ ಸುಮಾರು 10 ಸಾವಿರದಷ್ಟು ವೈದ್ಯಕೀಯ
ಸಸ್ಯಗಳನ್ನು ಬೆಳೆಸಿ ಉದ್ಯಾನ ನಿರ್ಮಿಸಲಾಗುವುದು. ಗಾಜಿನ ಮನೆಯೂನಿರ್ಮಾಣವಾಗಲಿದೆ. ಮುಂದಿನ ವರ್ಷದಿಂದ ಸಸ್ಯವಿಜ್ಞಾನದಲ್ಲಿ ಎರಡು ಸ್ನಾತಕೋತ್ತರ ಕೋರ್ಸ್‌ಗಳು ಆರಂಭವಾಗಲಿವೆ ಎಂದರು.
ಶತಮಾನೋತ್ಸವ ಸಮಾರಂಭದಲ್ಲಿ ಜೈವಿಕ ಕ್ಷೇತ್ರದ ಉದ್ಯಮಿಗಳ ಸಮಾವೇಶ, ಹಳೆವಿದ್ಯಾರ್ಥಿಗಳ ಸಮಾಗಮ, ಈ ಹಿಂದಿನ ನಾಲ್ವರು ಕುಲಪತಿಗಳಿಗೆ ಸನ್ಮಾನಕಾರ್ಯಕ್ರಮಗಳಿರುತ್ತವೆ ಎಂದರು.
280 ವಿದ್ಯಾರ್ಥಿಗಳು: ಸಸ್ಯವಿಜ್ಞಾನ ವಿಭಾಗದಲ್ಲಿ 280 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರತಿ ವರ್ಷ
60 ವಿದ್ಯಾರ್ಥಿಗಳ ಪ್ರವೇಶಕ್ಕೆಅವಕಾಶ ಇದೆ ಎಂದು ಹೇಳಿದರು.
ಪ್ರಬಲ ಹಳೆ ವಿದ್ಯಾರ್ಥಿ ಶಕ್ತಿ: ಸಸ್ಯವಿಜ್ಞಾನ ವಿಭಾಗಕ್ಕೆ ದೊಡ್ಡ ಶಕ್ತಿಯೇ ಅದರಹಳೆ ವಿದ್ಯಾರ್ಥಿಗಳು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಪ್ರಸಿದ್ಧ ತಳಿಶಾಸ್ತ್ರಜ್ಞ ಡಾ.ಶರತ್‌ಚಂದ್ರ, ಖ್ಯಾತ ಜೈವಿಕ ತಂತ್ರಜ್ಞಾನ ತಜ್ಞರಾದ ಡಾ.ಕೆ.ಎನ್.ಗಾಂಧಿ, ಡಾ.ಶಾಂತಾರಾಮ್, ಡಾ.ಸಂಜಪ್ಪ, ಹಿರಿಯ ಪ್ರಾಧ್ಯಾಪಕಿ ಡಾ.ತಸ್ನೀಮ್ ಫಾತಿಮಾ ಕಲೀಲ್, ವಿಶ್ವಸಂಸ್ಥೆಯ ಸದಸ್ಯ ಡಾ.ಸೀನಪ್ಪ ಮೊದಲಾದವರು ಈ ವಿಭಾಗದ ಹಳೆ ವಿದ್ಯಾರ್ಥಿಗಳು.
* ದೇಶದ ಅತ್ಯಂತ ಹಳೆಯ ವಿಭಾಗಗಳಲ್ಲಿ ಒಂದು
* 1919ರಲ್ಲಿ ಮದ್ರಾಸ್ ವಿವಿ ಅಡಿಯಲ್ಲಿ ಆರಂಭ
* ಮೈಸೂರು ವಿವಿಯಲ್ಲಿ ವಿಲೀನ, 1964ರಲ್ಲಿ ಬೆಂಗಳೂರು ವಿವಿಗೆ ಹಸ್ತಾಂತರ
ಎರಡು ವಿವಿಗಳ ಪೈಪೋಟಿ
ಸುಮಾರು ಮೂರು ತಿಂಗಳ ಹಿಂದೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಸಸ್ಯವಿಜ್ಞಾನ ವಿಭಾಗದ ಶತಮಾನೋತ್ಸವ ಸಮಾರಂಭ ಹಮ್ಮಿಕೊಂಡಿತ್ತು. ಹಿಂದಿನ ಸಸ್ಯವಿಜ್ಞಾನ ವಿಭಾಗ ಇದ್ದುದು ಸೆಂಟ್ರಲ್ ಕಾಲೇಜು ಆವರಣದಲ್ಲಿ ಎಂಬ ಕಾರಣಕ್ಕೆ ಈ ಆಚರಣೆ ನಡೆದಿತ್ತು.
‘ಆರಂಭದಿಂದಲೂ ಬೆಂಗಳೂರು ವಿಶ್ವವಿದ್ಯಾಲಯದ ಭಾಗವಾಗಿಯೇ ಇರುವುದರಿಂದ, ವಿಭಾಗದ ಎಲ್ಲ ಬೋಧಕರೂ ಇದೇ ವಿಶ್ವವಿದ್ಯಾಲಯಕ್ಕೆ ಒಳಪಡುವುದರಿಂದ ಈಗ ನಡೆಯುತ್ತಿರುವುದು ನಿಜವಾದ ಶತಮಾನೋತ್ಸವ. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಆಚರಣೆ ಮಾಡಿದ್ದರೂ ಅದರಲ್ಲಿ ತಪ್ಪೇನಿಲ್ಲ’ ಎಂದು ಕುಲಪತಿ ವೇಣುಗೋಪಾಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.