ಬೆಂಗಳೂರು: ಕೋವಿಡ್ ಪೀಡಿತರ ಚಿಕಿತ್ಸೆಗಾಗಿ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಹೊಸದಾಗಿ 10 ಹಾಸಿಗೆಗಳ ತೀವ್ರ ನಿಗಾ ಘಟಕವನ್ನು (ಐಸಿಯು) ನಿರ್ಮಿಸಲಾಗಿದೆ.
ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಬಳಸಿ ಹನಿವೆಲ್ ಇಂಡಿಯಾ ಕಂಪನಿಯು ಈ ಘಟಕವನ್ನು ನಿರ್ಮಿಸಿಕೊಟ್ಟಿದೆ. ಈ ಘಟಕಕ್ಕೆ ವರ್ಚುವಲ್ ವೇದಿಕೆಯ ಮೂಲಕ ಚಾಲನೆ ನೀಡಿದ ಉಪಮುಖ್ಯಮಂತ್ರಿಡಾ.ಸಿ.ಎನ್. ಅಶ್ವತ್ಥನಾರಾಯಣ, ‘ನಗರದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕಾರ್ಪೊರೇಟ್ ಕಂಪನಿಗಳು ಮುಂದೆ ಬರಬೇಕಿದೆ. ಸಿಎಸ್‌ಆರ್ ನಿಧಿಯಡಿ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ಒದಗಿಸುವಿಕೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಿಗೆ ಅವಕಾಶಗಳಿವೆ’ ಎಂದು ತಿಳಿಸಿದರು.
ನೂತನ ಐಸಿಯು ಘಟಕದಲ್ಲಿ ಅತ್ಯಾಧುನಿಕ ವೆಂಟಿಲೇಟರ್, ಎಕ್ಸ್–ರೇ ಯಂತ್ರ, ಇಸಿಜಿ ಯಂತ್ರಗಳು ಸೇರಿದಂತೆ ವಿವಿಧ ವೈದ್ಯಕೀಯ ಸಾಧನಗಳನ್ನು ಅಳವಡಿಸಲಾಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಒದಗಿಸಲು 200 ವೈದ್ಯಕೀಯ ಆಮ್ಲಜನಕ ಸಾಂದ್ರಕಗಳು ಹಾಗೂ ಎನ್–95 ಮುಖಗವಸುಗಳನ್ನು ಕಂಪನಿಯು ಸರ್ಕಾರಕ್ಕೆ ಒದಗಿಸಿದೆ.
ಕಂಪನಿಯ ಅಧ್ಯಕ್ಷ ಡಾ. ಅಕ್ಷಯ್ ಬೆಳ್ಳಾರೆ, ‘ಕೋವಿಡ್‌ನಿಂದಾಗಿ ದೇಶವು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಹೀಗಾಗಿ, ಈ ಸಂದರ್ಭದಲ್ಲಿ ಆಸ್ಪತ್ರೆಗಳನ್ನು ಬಲಪಡಿಸಿ, ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕಿದೆ. ಆ ನಿಟ್ಟಿನಲ್ಲಿ ವಿವಿಧ ಆಸ್ಪತ್ರೆಗಳಿಗೆ ನೆರವು ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.