ಬೆಂಗಳೂರು: ನಿಂತಿದ್ದ ಟ್ರ್ಯಾಕ್ಟರ್ ಏರಿ ಆಟವಾಡಲು ಹೋಗಿದ್ದ ಬಾಲಕ ತಮೋಜ್ಞ ಎಂಬಾತ ಟ್ರೇಲರ್ ತಗುಲಿ ಮೃತಪಟ್ಟಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಐದೂವರೆ ವರ್ಷದ ಬಾಲಕ ತಮೋಜ್ಞ, ಚಿಕ್ಕ ಬೆಳ್ಳಂದೂರು ಬಳಿಯ ಕಾನ್ವೆಂಟ್‌ನಲ್ಲಿ ಯು.ಕೆ.ಜಿ ಓದುತ್ತಿದ್ದ ಕಾನ್ವೆಂಟ್ ಸಮೀಪದ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದ್ದು, ಟ್ರ್ಯಾಕ್ಟರ್ ಬಳಸಲಾಗುತ್ತಿತ್ತು. ಮಳೆ ಸುರಿದಿದ್ದರಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಚಾಲಕ ಟ್ರ್ಯಾಕ್ಟರ್ ರಸ್ತೆಯಲ್ಲಿ ನಿಲ್ಲಿಸಿ ಕೀಯನ್ನು ಮರೆತು ಟ್ರ್ಯಾಕ್ಟರ್
ನಲ್ಲೇ ಬಿಟ್ಟು ಮನೆಗೆ ಹೋಗಿದ್ದ. ಟ್ರ್ಯಾಕ್ಟರ್ ಸಹ ಒಂದನೇ ಗೇರ್‌ನಲ್ಲಿತ್ತು’ ಎಂದು ಸಂಚಾರ ಪೊಲೀಸರು ಹೇಳಿದರು.
‘ಡಿ. 13ರಂದು ಕಾನ್ವೆಂಟ್ ರಸ್ತೆಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಏರಿದ್ದ ಬಾಲಕ, ಅದರಲ್ಲಿದ್ದ ಕೀ ಆನ್ ಮಾಡಿದ್ದ. ಮುಂದಿನ ಚಕ್ರ ಗುಂಡಿಯೊಳಗೆ ಇಳಿದು ಟ್ರ್ಯಾಕ್ಟರ್ ಭಾಗಶಃ ಬಾಗಿತ್ತು. ಇದೇ ವೇಳೆ ಬಾಲಕ ತಮೋಜ್ಞ, ಹಿಮ್ಮುಖವಾಗಿ ಬಿದ್ದಿದ್ದ. ಆತನ ತಲೆಗೆ ಟ್ರೇಲರ್ ತಗುಲಿ ತೀವ್ರ ಪೆಟ್ಟಾಗಿತ್ತು. ಸ್ಥಳೀಯರು, ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಬಾಲಕ ಅಸುನೀಗಿದ್ದಾನೆ’ ಎನ್ನಲಾಗಿದೆ.
ಚಾಲಕನ ವಿರುದ್ಧ ಪ್ರಕರಣ: ‘ಟ್ರ್ಯಾಕ್ಟರ್ ಒಂದನೇ ಗೇರ್‌ನಲ್ಲಿಟ್ಟು, ಕೀ ಸಹ ಅದರಲ್ಲೇ ಬಿಟ್ಟು ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.