ADVERTISEMENT

ಕಮ್ಮನಹಳ್ಳಿ ಉದ್ಯಾನದಲ್ಲಿ ವಿದ್ಯುತ್ ತಂತಿಗೆ ಬಾಲಕ ಬಲಿ

ಬಿಬಿಎಂಪಿ, ಬಿಡಿಎ, ಬೆಸ್ಕಾಂ ವಿರುದ್ಧ ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 19:37 IST
Last Updated 25 ಫೆಬ್ರುವರಿ 2019, 19:37 IST
ಬಾಲಕನ ಸಾವಿಗೆ ಕಾರಣವಾಗಿದೆ ಎನ್ನಲಾದ ತಂತಿ
ಬಾಲಕನ ಸಾವಿಗೆ ಕಾರಣವಾಗಿದೆ ಎನ್ನಲಾದ ತಂತಿ   

ಬೆಂಗಳೂರು: ಕಮ್ಮನಹಳ್ಳಿಯಲ್ಲಿರುವ ಡಾ. ರಾಜ್‌ಕುಮಾರ್‌ ಉದ್ಯಾನದಲ್ಲಿ ಅವೈಜ್ಞಾನಿಕವಾಗಿ ಜೋಡಿಸಿದ್ದ ವಿದ್ಯುತ್ ತಂತಿಗೆ ಉದಯ್‌ಕುಮಾರ್‌ ಎಂಬ ಎಂಟು ವರ್ಷದ ಬಾಲಕ ಬಲಿಯಾಗಿದ್ದಾನೆ.ಉದ್ಯಾನದಲ್ಲಿ ಆಡುವಾಗ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಆತನ ತಮ್ಮನಿಗೂ ಗಾಯವಾಗಿದೆ.

ಗುತ್ತಿಗೆದಾರ ನಾಗರಾಜ್ ಹಾಗೂ ಗೌರಮ್ಮ ದಂಪತಿ ಮಗನಾಗಿದ್ದ ಉದಯ್, ಸ್ಥಳೀಯ ಸರ್ಕಾರಿ ಶಾಲೆ ಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ. ಸಹೋದರನ ಜೊತೆ ಆಟವಾಡಲೆಂದು ಭಾನುವಾರ ಉದ್ಯಾನಕ್ಕೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

‘ಉದ್ಯಾನದಲ್ಲಿ ವಿದ್ಯುತ್ ದೀಪಗಳ ಕಂಬಗಳಿವೆ. ನೆಲದಡಿಯಲ್ಲಿ ತಂತಿ ಅಳವಡಿಸಿ, ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇತ್ತೀಚೆಗೆ ಕೆಲ ಕಂಬಗಳು ಹಾಳಾಗಿದ್ದವು. ದುರಸ್ತಿಗಾಗಿ ಅವುಗಳನ್ನು ತೆರವುಗೊಳಿಸಲಾಗಿತ್ತು’ ಎಂದುಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಂಬ ತೆರವುಗೊಳಿಸಿದ ನಂತರ ವಿದ್ಯುತ್‌ ತಂತಿಯನ್ನು ಕತ್ತರಿಸಿ ಟೇಪ್‌ನಿಂದ ಅವೈಜ್ಞಾನಿಕವಾಗಿ ಸುತ್ತಿಡಲಾಗಿತ್ತು. ಅದೇ ತಂತಿಯಿಂದ ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತಪಟ್ಟಿದ್ದಾನೆ’ ಎಂದು ದೂರಿದರು.

‘ಸಂಜೆ 6.45 ಗಂಟೆ ಸುಮಾರಿಗೆ ಸಹೋದರನ ಜೊತೆ ಉದಯ್, ಉದ್ಯಾನಕ್ಕೆ ಹೋಗಿದ್ದ. ನಡಿಗೆ ಪಥಕ್ಕೆ ಹೊಂದಿಕೊಂಡಿರುವ ಹುಲ್ಲು ಬೆಳೆದಿದ್ದ ಜಾಗದಲ್ಲಿ ಆತ ಓಡಾಡುತ್ತಿದ್ದ. ಅದೇ ಸ್ಥಳದಲ್ಲಿದ್ದ ವಿದ್ಯುತ್ ತಂತಿಯ ಮೇಲೆ ಕಾಲಿಟ್ಟಿದ್ದ. ವಿದ್ಯುತ್ ಸ್ಪರ್ಶಿಸಿ ಚೀರಾಡಲಾರಂಭಿಸಿದ್ದ. ಆತನ ಬಳಿಗೆ ಹೋಗಿದ್ದ ಸಹೋದರ, ಕೈ ಹಿಡಿದು ಎಳೆಯಲಾರಂಭಿಸಿದ್ದ. ಆಗ ಅವನಿಗೂ ವಿದ್ಯುತ್ ಸ್ಪರ್ಶಿಸಿತ್ತು’ ಎಂದು ವಿವರಿಸಿದರು.

‘ಸಹಾಯಕ್ಕೆ ಬಂದ ಸ್ಥಳೀಯರು, ಇಬ್ಬರೂ ಬಾಲಕರನ್ನು ಬಾಣಸವಾಡಿಯ ಸ್ಪೆಷಲಿಸ್ಟ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ಉದಯ್‌ನನ್ನು ಅಂಬೇಡ್ಕರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಉದಯ್ ಅಸುನೀಗಿದ’ ಎಂದು ತಿಳಿಸಿದರು.

ಅಂಬೇಡ್ಕರ್ ಆಸ್ಪತ್ರೆಯಲ್ಲಿ ಬಾಲಕನ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಸೋಮವಾರವೇ ಕುಟುಂಬದವರು ಅಂತ್ಯಕ್ರಿಯೆ ನೆರವೇರಿಸಿದರು.

ಬಿಬಿಎಂಪಿ, ಬಿಡಿಎ, ಬೆಸ್ಕಾಂ ವಿರುದ್ಧ ಎಫ್‌ಐಆರ್‌: ‘ಬಾಲಕನ ಸಾವಿಗೆ ಬಿಬಿಎಂಪಿ, ಬಿಡಿಎ ಹಾಗೂ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ಸಂಬಂಧಿಕರು ದೂರು ನೀಡಿದ್ದಾರೆ. ಅದರನ್ವಯ ಬಾಣಸವಾಡಿ ಪೊಲೀಸರು, ಮೂರೂ ಸಂಸ್ಥೆಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಉದ್ಯಾನದ ನವೀಕರಣ ಕಾಮಗಾರಿ ನಡೆಯುತ್ತಿದೆ. ಅದರ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಯೊಂದು ವಹಿಸಿಕೊಂಡಿದೆ. ಉದ್ಯಾನದಲ್ಲಿದ್ದ ಹಳೇ ವಿದ್ಯುತ್‌ ಕಂಬಗಳನ್ನು ತೆಗೆದು ಹೊಸ ಕಂಬಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಅದರ ವೆಲ್ಡಿಂಗ್‌ಗಾಗಿ ವಿದ್ಯುತ್ ತಂತಿಗಳನ್ನು ಹಾಕಲಾಗಿದ್ದು, ಅದೇ ತಂತಿಯಿಂದಲೇ ಈ ಅವಘಡ ಸಂಭವಿಸಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಮೇಲ್ಪದರ ಕಿತ್ತು ಹೋಗಿರುವ ತಂತಿಯನ್ನು ಉದ್ಯಾನದಲ್ಲಿ ಹಾಗೇ ಬಿಡಲಾಗಿತ್ತು. ಸದ್ಯ ಬಿಬಿಎಂಪಿ, ಬಿಡಿಎ ಹಾಗೂ ಬೆಸ್ಕಾಂ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಗುತ್ತಿಗೆದಾರರನ್ನು ವಿಚಾರಣೆಗೆ ಒಳಪಡಿಸಿ
ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ನಿವಾಸಿಗಳ ಪ್ರತಿಭಟನೆ

ಬಾಲಕನ ಸಾವಿನಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು, ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘ಉದ್ಯಾನದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಯುವಿಹಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಅಲ್ಲಿ ಮೂಲಸೌಕರ್ಯಗಳ ಕೊರತೆ ಸಾಕಷ್ಟಿದೆ. ವಿದ್ಯುತ್ ಕಂಬಗಳು ಹಾಳಾಗಿದ್ದು, ತಂತಿಗಳೂ ಎಲ್ಲೆಂದರಲ್ಲಿ ಬಿದ್ದಿವೆ. ಅವುಗಳನ್ನು ಸರಿಪಡಿಸುವಂತೆ ಹೇಳಿದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅವರ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ’ ಎಂದು ಪ್ರತಿಭಟನಾಕಾರರು ದೂರಿದರು.

₹10 ಲಕ್ಷ ಪರಿಹಾರ: ಘಟನಾ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ್ದ ಮೇಯರ್ ಗಂಗಾಂಬಿಕೆ, ‘ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು. ‘ಮೃತ ಬಾಲಕನ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.