ಕೆ.ಆರ್.ಪುರ: ಕಡೆ ಶ್ರಾವಣ ಶನಿವಾರ ಅಂಗವಾಗಿ ಎ. ನಾರಾಯಣಪುರದ ವೆಂಕಟೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಸಮೀಪದ ಎ.ನಾರಾಯಣಪುರ ಮತ್ತು ಉದಯನಗರದ ಪ್ರಮುಖ ರಸ್ತೆ ಮತ್ತು ಬೀದಿಗಳಲ್ಲಿ ಪೂಜಾ ಕುಣಿತ, ತಮಟೆ ವಾದ್ಯ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ನಡೆಸಲಾಯಿತು.
ದೇವಾಲಯದಲ್ಲಿ ಉತ್ಸವ ದೇವರಿಗೆ ವಿಶೇಷ ಪೂಜೆ, ವಿವಿಧ ದ್ರವ್ಯಗಳಿಂದ ಅಭಿಷೇಕ, ಹೋಮ, ಹವನ ಹಾಗೂ ಮಹಾಮಂಗಳಾರತಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಯಿತು.
ದೇವಾಲಯದಲ್ಲಿ ಬಗೆ ಬಗೆಯ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ನಾಲ್ಕನೇ ಶ್ರಾವಣ ಶನಿವಾರ ಪ್ರಯುಕ್ತ ಹಮ್ಮಿಕೊಂಡಿದ್ದ ಬ್ರಹ್ಮರಥೋತ್ಸವದಲ್ಲಿ ಎ.ನಾರಾಯಣಪುರ, ಟಿನ್ ಪ್ಯಾಕ್ಟರಿ, ಪೈಲೇಔಟ್, ಅಕಾಶ್ ಬಡಾವಣೆ, ಜ್ಯೋತಿಪುರ ಮುಂತಾದ ವಿವಿಧ ಪ್ರದೇಶಗಳಿಂದ ಆಗಮಿಸಿದ ನೂರಾರು ಭಕ್ತರು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಧನ್ಯತಾಭಾವ ಮೆರೆದರು.
ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಬಿಬಿಎಂಪಿ ಮಾಜಿ ಸದಸ್ಯ ವಿ.ಸುರೇಶ್, ಮುಖಂಡರಾದ ಪ್ರದೀಪ್ ರೆಡ್ಡಿ, ಸಂತೋಷ, ಯಶವಂತ್, ವಸಂತ್, ಗಿರಿ ಸೇರಿದಂತೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.