ADVERTISEMENT

ನಗರ ಜಲ ನಿರ್ವಹಣೆಗೆ ಹೊಸ ರೂಪ

ಕೆ–100 ಯೋಜನೆಯಡಿ ತ್ಯಾಜ್ಯನೀರು ಸಾಗಣೆ ಕೊಳವೆ ಅಳವಡಿಕೆ– ಶೇ 90ರಷ್ಟು ಕಾಮಗಾರಿ ಪೂರ್ಣ * ಮೂರು ಎಸ್‌ಟಿಪಿ ಕಾರ್ಯಾರಂಭ ಶೀಘ್ರ

ಗುರು ಪಿ.ಎಸ್‌
Published 1 ಫೆಬ್ರುವರಿ 2021, 1:12 IST
Last Updated 1 ಫೆಬ್ರುವರಿ 2021, 1:12 IST
ನಗರದ ಶಾಂತಲಾ ಸಿಲ್ಕ್ ಬಳಿ ಬಿಬಿಎಂಪಿ ಕೈಗೆತ್ತಿಕೊಂಡಿರುವ ಮಳೆ ನೀರುಗಾಲುವೆ ದುರಸ್ತಿ ಕಾಮಗಾರಿಯ ನೋಟ -ಪ್ರಜಾವಾಣಿ ಚಿತ್ರ/ ರಂಜು ಪಿ
ನಗರದ ಶಾಂತಲಾ ಸಿಲ್ಕ್ ಬಳಿ ಬಿಬಿಎಂಪಿ ಕೈಗೆತ್ತಿಕೊಂಡಿರುವ ಮಳೆ ನೀರುಗಾಲುವೆ ದುರಸ್ತಿ ಕಾಮಗಾರಿಯ ನೋಟ -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಯಾವುದೇ ಮಹಾನಗರ ಅಭಿವೃದ್ಧಿಗೆ ಮತ್ತು ಅದರ ಬ್ರ್ಯಾಂಡ್‌ ಮೌಲ್ಯವರ್ಧನೆಗೆ ಲಭ್ಯವಿರುವ ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಅತ್ಯಗತ್ಯ. ನಗರದ ಜನರಿಗೆ ಪೂರೈಸುವ ಕುಡಿಯುವ ನೀರನ್ನು 100 ಕಿ.ಮೀ. ದೂರದ ಕಾವೇರಿ ನೀರನ್ನು ಅವಲಂಬಿಸಿದ್ದೇವೆ. ಮಳೆ ನೀರಿನ ಸಂಗ್ರಹ ಮತ್ತು ಕೆರೆಗಳ ಪುನರುಜ್ಜೀವನ ಮಾಡದಿದ್ದರೆ ಜಲಮಂಡಳಿ ಭವಿಷ್ಯದಲ್ಲಿ ಕಠಿಣ ಸವಾಲು ಎದುರಿಸಬೇಕಾಗುತ್ತದೆ.

ಹೊರಗಿನಿಂದ ಬರುವ ನೀರನ್ನು ಸರಿಯಾಗಿ ನಿರ್ವಹಿಸುವುದರ ಜೊತೆಗೆ, ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ನಿಟ್ಟಿನಲ್ಲಿಯೂ ಜಲಮಂಡಳಿ ಸಾಕಷ್ಟು ಶ್ರಮ ಹಾಕಬೇಕಾಗಿದೆ. ಸದ್ಯ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯ ಮಹತ್ವಾಕಾಂಕ್ಷಿ ಕೆ–100 ಯೋಜನೆಗೆ ಜಲಮಂಡಳಿ ಕೈ ಜೋಡಿಸಿದ್ದು, ರಾಜಕಾಲುವೆಗಳಲ್ಲಿ ಕೊಳಚೆ ನೀರು ಸೇರದಿರಲು ಕ್ರಮ ಕೈಗೊಳ್ಳುತ್ತಿದೆ. ಅಂದಾಜು ₹16,900 ಕೋಟಿ ವೆಚ್ಚದ ಈ ಯೋಜನೆಯನ್ನು ಐದು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಏನಿದು ಯೋಜನೆ ?

ADVERTISEMENT

ಹಿಂದಿನ ಧರ್ಮಾಂಬುಧಿ ಕೆರೆಯಿಂದ ಅಂದರೆ, ಈಗಿನ ಮೆಜೆಸ್ಟಿಕ್‌ ಬಳಿಯ ಶಾಂತಲಾ ಸಿಲ್ಕ್ಸ್‌ನಿಂದ ಬೆಳ್ಳಂದೂರು ಕೆರೆಯವರೆಗಿನ 16 ಕಿ.ಮೀ. ಉದ್ದದ ರಾಜಕಾಲುವೆಯನ್ನು ಪುನರುಜ್ಜೀವನಗೊಳಿಸಿ, ಆಕರ್ಷಣೀಯ ತಾಣವಾಗಿಸುವುದು ಕೆ–100 ಯೋಜನೆಯ ಉದ್ದೇಶ. ಈ ಯೋಜನೆಯಡಿ ಶಾಂತಲಾ ಸಿಲ್ಕ್ಸ್‌ನಿಂದ ಕೋರಮಂಗಲದವರೆಗೆ ತ್ಯಾಜ್ಯ ನೀರು ಸಾಗಿಸುವ ಕೊಳವೆಗಳನ್ನು ಜಲಮಂಡಳಿ ಅಳವಡಿಸುತ್ತಿದೆ. ರಾಜಕಾಲುವೆ ಪಕ್ಕದಲ್ಲಿಯೇ ಈ ಕೊಳಚೆ ನೀರು ಸಾಗಿಸುವ ಪೈಪ್‌ಲೈನ್‌ ಕೂಡ ಸಾಗಿ ಹೋಗುತ್ತದೆ.

ಮನಿಲಾದಲ್ಲಿನ ಪಾಸಿಗ್‌ ನದಿ, ದಕ್ಷಿಣ ಕೊರಿಯಾದ ಸಿಯೊಲ್‌ನ ಚಿಯಾಂಗ್ ನದಿ ಮತ್ತು ಬ್ಯಾಂಕಾಕ್‌ನ ಕ್ಲಾಂಗ್‌ ಆಂಗ್‌ ಕಾಲುವೆ ಮಾದರಿಯಲ್ಲಿ ಈ ರಾಜಕಾಲುವೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಕಾಲುವೆಯ ಇಕ್ಕೆಲಗಳಲ್ಲಿ ಸೈಕಲ್‌ ಮತ್ತು ಕಾಲ್ನಡಿಗೆ ಪಥ, ವಿಶ್ರಾಂತಿಗೆ ಬೆಂಚ್‌ಗಳು, ಎರಡೂ ಬದಿಯಲ್ಲಿ ಆಲಂಕಾರಿಕ ಗಿಡಗಳು, ಕಾಲುವೆಯ ಬಳಿ ಅಗತ್ಯವಿರುವಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗುತ್ತದೆ.

ಶೇ 90ರಷ್ಟು ಪೂರ್ಣ:

‘ಕೋರಮಂಗಲ–ಚಳ್ಳಘಟ್ಟ ಕಣಿವೆ ನಗರದ ಪ್ರಮುಖ ಮಳೆ ನೀರು ಹರಿಯುವ ಮಾರ್ಗ. ಹೀಗೆ ಹರಿಯುವ ಮಳೆ ನೀರಿನ ಜೊತೆಗೆ ಕೊಳಚೆ ನೀರು ಸೇರಿಕೊಂಡು ಕಾಲುವೆಯೇ ಕಲುಷಿತವಾಗುತ್ತಿತ್ತು. ಇದು ಬೆಳ್ಳಂದೂರು ಕೆರೆ ಸೇರುತ್ತಿದ್ದುದರಿಂದ ಆ ಕೆರೆಯೂ ಕಲುಷಿತಗೊಳ್ಳುತ್ತಿತ್ತು. ಕೆ–100 ಯೋಜನೆಯಡಿ ಈಗ ಈ ಮಾರ್ಗದಲ್ಲಿ ತ್ಯಾಜ್ಯ ನೀರು ಪ್ರತ್ಯೇಕವಾಗಿ ಸಾಗಿಸಲು ಕೊಳವೆಗಳನ್ನು ಅಳವಡಿಸಲಾಗುತ್ತಿದೆ. ಈ 16 ಕಿ.ಮೀ. ಮಾರ್ಗದಲ್ಲಿ ಈಗಾಗಲೇ 15.7 ಕಿ.ಮೀ. (ಶೇ 90) ಉದ್ದದವರೆಗೆ ಕೊಳವೆಗಳನ್ನು ಅಳವಡಿಸಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ಎನ್. ಜಯರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ರಾಜಕಾಲುವೆಯನ್ನು ಸೇರುತ್ತಿದ್ದ ಕೊಳಚೆ ನೀರನ್ನು ಈಗಾಗಲೇ ಶೇ 85ರಷ್ಟು ನಿಯಂತ್ರಿಸಲಾಗಿದೆ. ಈ ಕೊಳಚೆ ನೀರನ್ನು ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ (ಎಸ್‌ಟಿಪಿ)ಶುದ್ಧೀಕರಿಸಿ ಬೆಳ್ಳಂದೂರು ಕೆರೆಗೆ ಹರಿಸಿ ಆ ನೀರನ್ನು ಕೃಷಿ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತದೆ’ ಎಂದರು.

‘ನಗರದ ನೀರುಗಾಲುವೆಗಳಲ್ಲಿ ಎಲ್ಲೆಲ್ಲಿ ತ್ಯಾಜ್ಯ ನೀರು ಸೇರ್ಪಡೆಯಾಗುತ್ತಿದೆಯೋ ಅದಕ್ಕೆ ಕಡಿವಾಣ ಹಾಕಲಾಗುವುದು. ನೀರುಗಾಲುವೆಗಳಲ್ಲಿ ಮಳೆ ನೀರು ಮಾತ್ರ ಸಾಗುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದೂ ಅವರು ಹೇಳಿದರು.

ರಾಜಕಾಲುವೆ, ನೀರುಗಾಲುವೆಗಳ ಶುದ್ಧೀಕರಣದ ಜೊತೆಗೆ ತ್ಯಾಜ್ಯನೀರಿನ ಶುದ್ಧೀಕರಣ ಮತ್ತು ಮಳೆ ನೀರು ಸಂಗ್ರಹ ಪ್ರಮಾಣ ಹೆಚ್ಚಲು ಜಲಮಂಡಳಿ ಮತ್ತಷ್ಟು ಹೆಚ್ಚು ಆಸ್ಥೆಯಿಂದ ಕಾರ್ಯಪ್ರವೃತ್ತವಾದರೆ ಬೆಂಗಳೂರಿನ ಬ್ರ್ಯಾಂಡ್‌ ಮೌಲ್ಯ ಮತ್ತಷ್ಟು ಹೆಚ್ಚುವುದು ನಿಶ್ಚಿತ.

ನೀರು ಸೋರಿಕೆ ಪ್ರಮಾಣ ಶೇ 36

ನಗರದಲ್ಲಿ ಶೇ 36ರಷ್ಟು ನೀರು ಸೋರಿಕೆಯಾಗುತ್ತಿದೆ. ಅನಧಿಕೃತ ಸಂಪರ್ಕಗಳು, ಶಿಥಿಲಗೊಂಡಿರುವ ಪೈಪ್‌ಲೈನ್‌ಗಳು ಮತ್ತು ಜಲಾಗರಗಳಿಂದ ಈ ಪ್ರಮಾಣದ ನೀರು ಸೋರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟಬೇಕಾದ ಅವಶ್ಯಕತೆ ಇದೆ.

‘ದೇಶದ ಬೇರೆ ಮಹಾನಗರಗಳಲ್ಲೂ ನೀರು ಸೋರಿಕೆ ಪ್ರಮಾಣ ಇಷ್ಟೇ ಇದೆ. 100 ಕಿ.ಮೀ. ಗೂ ಹೆಚ್ಚು ದೂರದಿಂದ ನೀರನ್ನು ತರುತ್ತಿರುವುದರಿಂದ ಸೋರದಂತೆ ತಡೆಯುವುದು ಕಷ್ಟ. ಆದರೂ, ಸೋರಿಕೆ ತಡೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನೀರು ಸೋರಿಕೆ ಪ್ರಮಾಣ ಮೊದಲು ಶೇ 48ರಷ್ಟು ಇತ್ತು. ಈಗ ಇದನ್ನು ಶೇ 36ಕ್ಕೆ ಇಳಿಸಲಾಗಿದೆ. ಇನ್ನೂ ಶೇ 10ರಷ್ಟು ಸೋರಿಕೆ ಪ್ರಮಾಣ ತಡೆಗಟ್ಟಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಜಯರಾಮ್ ಹೇಳಿದರು.

‘30 ಸಾವಿರಕ್ಕೂ ಹೆಚ್ಚು ಅನಧಿಕೃತ ಸಂಪರ್ಕಗಳನ್ನು ಗುರುತಿಸಲಾಗಿದೆ. ಇವರಿಗೆ ದಂಡ ವಿಧಿಸಿ, ಅವುಗಳನ್ನು ಅಧಿಕೃತ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘ಮೆಜೆಸ್ಟಿಕ್ ಸುತ್ತ–ಮುತ್ತ 50–60 ವರ್ಷಗಳಷ್ಟು ಹಳೆಯದಾದ ಪೈಪ್‌ಲೈನ್‌ಗಳಿವೆ. ಹಳೆಯ ಪೈಪ್‌ಲೈನ್‌ಗಳನ್ನು ಬದಲಾಯಿಸುವುದು ತುಂಬಾ ವೆಚ್ಚದಾಯಕ ಮತ್ತು ಸವಾಲಿನ ಕೆಲಸ. ಆದರೂ, ಇಂದಿರಾ ನಗರ ಸೇರಿದಂತೆ ನಗರದ ವಿವಿಧ ಕಡೆಗೆ ಹಳೆಯ ಪೈಪ್‌ಲೈನ್‌ ತೆರವುಗೊಳಿಸಿ ಹೊಸ ಪೈಪ್‌ಲೈನ್‌ ಅಳವಡಿಸಲಾಗಿದೆ’ ಎಂದರು.

ದಿನಕ್ಕೆ 120 ಕೋಟಿ ಲೀಟರ್ ತ್ಯಾಜ್ಯನೀರು ಶುದ್ಧೀಕರಣ

‘ನಗರದಲ್ಲಿ ದಿನಕ್ಕೆ ಸುಮಾರು 140 ಕೋಟಿ ಲೀಟರ್‌ (1,440 ದಶಲಕ್ಷ ಲೀಟರ್) ತ್ಯಾಜ್ಯ ನೀರು ಉತ್ಪಾದನೆಯಾಗುತ್ತದೆ. ಸುಮಾರು 120 ಕೋಟಿ ಲೀಟರ್‌ (1,282 ದಶಲಕ್ಷ ಲೀಟರ್‌) ಕೊಳಚೆ ನೀರು ಶುದ್ಧೀಕರಿಸುವ ನಿಟ್ಟಿನಲ್ಲಿ 32 ಎಸ್‌ಟಿಪಿಗಳು ಕಾರ್ಯನಿರ್ವಹಿಸುತ್ತಿವೆ. ಮಾರ್ಚ್‌ ವೇಳೆಗೆ ಇನ್ನೂ ಮೂರು ಎಸ್‌ಟಿಪಿಗಳು ಕಾರ್ಯಾರಂಭ ಮಾಡಲಿವೆ’ ಎಂದು ಜಲಮಂಡಳಿಯ ತ್ಯಾಜ್ಯ ನೀರು ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಸಿ. ಗಂಗಾಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘35 ಎಸ್‌ಟಿಪಿಗಳು ಕಾರ್ಯಾರಂಭ ಮಾಡಿದ ನಂತರ, ನೀರುಗಾಲುವೆಗಳಿಗೆ ಕೊಳಚೆನೀರು ಸೇರುವ ಪ್ರಮಾಣವನ್ನು ಶೇ 95ರಷ್ಟು ಕಡಿಮೆ ಮಾಡಬಹುದು. ರಾಜಕಾಲುವೆ ಒತ್ತುವರಿ ಮತ್ತಿತರ ಸವಾಲುಗಳು ಇರುವುದರಿಂದ ಉಳಿದ ಶೇ 5ರಷ್ಟು ಪ್ರಮಾಣ ತಗ್ಗಿಸುವುದು ಕಷ್ಟವಿದೆ. ಆದರೂ, ನಗರವನ್ನು ಕೊಳಚೆಮುಕ್ತವಾಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.