ಬೆಂಗಳೂರು: ‘ಬ್ರ್ಯಾಂಡ್ ಬೆಂಗಳೂರು’ ಅಭಿವೃದ್ಧಿ ಉದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು (ಬಿಬಿಎಂಪಿ) ವರ್ಲ್ಡ್ ಡಿಸೈನ್ ಆರ್ಗನೈಷೇಷನ್ (ಡಬ್ಲ್ಯೂಡಿಒ) ಜತೆ ಒಪ್ಪಂದ ಮಾಡಿಕೊಂಡಿದೆ.
ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಕೆನಡಾ ಮೂಲದ ಡಬ್ಲ್ಯೂಡಿಒ ಅಧ್ಯಕ್ಷ ಸೋಮವಾರ ಸಹಿ ಹಾಕಿದರು. ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ‘ಬೆಂಗಳೂರನ್ನು ವಾಸಯೋಗ್ಯ ನಗರವಾಗಿ ನಿರ್ಮಿಸುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ, ಬ್ರ್ಯಾಂಡ್ ಬೆಂಗಳೂರು ಹಾಗೂ ಕರ್ನಾಟಕದ ಪಾಲಿಗೆ ಹೊಸ ಅಧ್ಯಾಯ ಆರಂಭವಾಗಿದೆ’ ಎಂದರು.
‘ಬೆಂಗಳೂರನ್ನು ಜಾಗತಿಕ ನಗರವಾಗಿ ಮಾಡಲು ಸರ್ಕಾರ ಬದ್ಧವಾಗಿದೆ. ಯಾವುದೇ ಯೋಜನೆಯಾದರೂ ಅದರ ವಿನ್ಯಾಸ ಬಹಳ ಮುಖ್ಯ. ಹೀಗಾಗಿ, ನಾವು ಈ ಸಂಸ್ಥೆಯ ಜೊತೆ ಕೈಜೋಡಿಸುತ್ತಿದ್ದೇವೆ. ಈಗಿರುವ ಬೆಂಗಳೂರಿನಲ್ಲಿ ಯಾವ ರೀತಿಯ ಬದಲಾವಣೆ ಮಾಡಬಹುದು, ಮುಂದೆ ಬೆಳೆಯಲಿರುವ ಬೆಂಗಳೂರನ್ನು ಹೇಗೆ ರೂಪಿಸಬೇಕು, ಹೊಸ ಸ್ಯಾಟಲೈಟ್ ಟೌನ್ ಹೇಗೆ ರೂಪಿಸಬೇಕು ಎಂಬ ಬಗ್ಗೆ ಸಲಹೆ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ’ ಎಂದರು.
‘ಡಬ್ಲ್ಯೂಡಿಒ ಕೇಂದ್ರ ಕಚೇರಿ ಕೆನಡಾದಲ್ಲಿದ್ದು, ಸಂಸ್ಥೆಯು ವಿಶ್ವದ ಅತ್ಯುತ್ತಮ ವಾಸ್ತುಶಿಲ್ಪಿಗಳನ್ನು ಹೊಂದಿದೆ. ಅನೇಕ ದೇಶಗಳ ಜತೆ ಈ ಸಂಸ್ಥೆಯು ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಸುಮಾರು 200-300 ಎಂಜಿನಿಯರ್‌ಗಳು ಕೆಲಸ ಮಾಡಲಿದ್ದಾರೆ. ಇಲ್ಲಿ ಅವರು ಯಾವುದೇ ಕಟ್ಟಡ ನಿರ್ಮಾಣ ಮಾಡುವುದಿಲ್ಲ. ಬೆಂಗಳೂರಿಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಸಲಹೆಗಳನ್ನು ಮಾತ್ರ ನೀಡಲಿದ್ದು, ಅದನ್ನು ನೋಡಿಕೊಂಡು ಜಿಲ್ಲಾ ಕೇಂದ್ರಗಳು ಹಾಗೂ ತಾಲ್ಲೂಕು ಕೇಂದ್ರಗಳಿಗೆ ರೂಪ ನೀಡುವ ಬಗ್ಗೆಯೂ ಆಲೋಚಿಸಲಾಗುವುದು’ ಎಂದರು.
ಮುಂಬೈ, ದೆಹಲಿಗೆ ಭೇಟಿ: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಅನಿಲ ಹಾಗೂ ತ್ಯಾಜ್ಯ ಇಂಧನ ಉತ್ಪಾದನೆ ಯೋಜನೆಗಳ ಬಗ್ಗೆ ಗಮನಹರಿಸಲಾಗುತ್ತಿದೆ. ತ್ಯಾಜ್ಯವನ್ನು ಒಂದು ಕಡೆ ಗುಡ್ಡೆ ಹಾಕಿದರೆ ಪ್ರಯೋಜನವಿಲ್ಲ. ಅದ ಸುಟ್ಟು ಹಾಕಬೇಕು. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ನಿಷ್ಕ್ರಿಯವಾಗಿವೆ. ಈ ಬಗ್ಗೆ ಅಧ್ಯಯನ ಮಾಡಲು ಮುಂಬೈ, ದೆಹಲಿ, ಇಂದೋರ್‌ಗಳಿಗೆ ಭೇಟಿ ನೀಡಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.