ADVERTISEMENT

ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ‘ಅಕ್ಕ ಕೆಫೆ’ ಬಲ

ಖಲೀಲಅಹ್ಮದ ಶೇಖ
Published 28 ಅಕ್ಟೋಬರ್ 2024, 23:30 IST
Last Updated 28 ಅಕ್ಟೋಬರ್ 2024, 23:30 IST
ಗಾಂಧಿನಗರದ ಪಂಚಾಯತರಾಜ್‌ ಆಯುಕ್ತಾಲಯದ ಆವರಣದಲ್ಲಿರುವ ಅಕ್ಕ ಕೆಫೆ
ಪ್ರಜಾವಾಣಿ ಚಿತ್ರ: ಕಿಶೋರ್‌ ಕುಮಾರ್‌ ಬೋಳಾರ್
ಗಾಂಧಿನಗರದ ಪಂಚಾಯತರಾಜ್‌ ಆಯುಕ್ತಾಲಯದ ಆವರಣದಲ್ಲಿರುವ ಅಕ್ಕ ಕೆಫೆ ಪ್ರಜಾವಾಣಿ ಚಿತ್ರ: ಕಿಶೋರ್‌ ಕುಮಾರ್‌ ಬೋಳಾರ್   

ಬೆಂಗಳೂರು: ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯೆಯರನ್ನು ಹೋಟೆಲ್‌ ಉದ್ದಿಮೆಯಲ್ಲಿ ತೊಡಗಿಸಿ, ಅವರ ಸ್ವಾವಲಂಬಿ ಜೀವನಕ್ಕೆ ನೆರವಾಗುವ ಉದ್ದೇಶದಿಂದ ರಾಷ್ಟ್ರೀಯ ಜೀವನೋಪಾಯ ಮಿಷನ್‌ (ಎನ್‌ಎಲ್‌ಎಂ) ಆರಂಭಿಸಿದ ‘ಅಕ್ಕ ಕೆಫೆ’ ಯೋಜನೆ ಆರಂಭಿಕ ಯಶಸ್ಸು ಕಂಡಿದೆ. ಮತ್ತಷ್ಟು ಕೆಫೆಗಳನ್ನು ಆರಂಭಿಸುವ ಮೂಲಕ ಬೆಂಗಳೂರಿನ ವನಿತೆಯರಿಗೆ ಶಕ್ತಿ ತುಂಬಲು ಎನ್‌ಎಲ್‌ಎಂ ಸಜ್ಜಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದ ಈ ಯೋಜನೆಯನ್ನು ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಎನ್‌ಎಲ್‌ಎಂ ಜೊತೆಗೂಡಿ ಅನುಷ್ಠಾನಕ್ಕೆ ತಂದಿದೆ. ‘ಅಕ್ಕ ಕೆಫೆ’ಗಳು ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡುವುದರ ಜೊತೆಯಲ್ಲೇ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುತ್ತಿವೆ. ಬೆಂಗಳೂರಿನಂತಹ ಮಹಾನಗರಗಳಲ್ಲೂ ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಮಹಿಳೆಯರಿಗೆ ಉದ್ಯೋಗದ ಅವಕಾಶಗಳನ್ನು ಸೃಜಿಸುವ ಕನಸನ್ನು ಈ ಯೋಜನೆ ಸಾಕಾರಗೊಳಿಸಿದೆ.

ಗಾಂಧಿನಗರದ ‌ಪಂಚಾಯತರಾಜ್ ಆಯುಕ್ತಾಲಯದ ಆವಣರದಲ್ಲಿ 2024ರ ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆಯ ದಿನ ಮೊದಲ ‘ಅಕ್ಕ ಕೆಫೆ’ಗೆ ಚಾಲನೆ ನೀಡಲಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮತ್ತೊಂದು ಅಕ್ಕ ಕೆಫೆ ಹಾಗೂ ಬೇಕ್ಸ್‌ಗೆ (ಬೇಕರಿ) ಚಾಲನೆ ನೀಡಲಾಗಿದೆ. ಎರಡೂ ಕಡೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯಶಸ್ಸಿನ ಬೆನ್ನಲ್ಲೇ ಬಿಬಿಎಂಪಿಯ ಎಂಟು ವಲಯಗಳಲ್ಲೂ ‘ಅಕ್ಕ ಕೆಫೆ’ಗಳನ್ನು ಪ್ರಾರಂಭಿಸಲು ರಾಷ್ಟ್ರೀಯ ಜೀವನೋಪಾಯ ಮಿಷನ್‌ ಸಿದ್ಧತೆ ನಡೆಸಿದೆ.

ADVERTISEMENT

ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಮಿಷನ್ ಅಡಿಯಲ್ಲಿ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ‘ಅಕ್ಕ ಕೆಫೆ’ಗಳನ್ನು ಪ್ರಾರಂಭಿಸುವ ಯೋಜನೆ ರೂಪಿಸಿದೆ. ಇಲ್ಲಿ ಬಡವರು, ಕೂಲಿಕಾರ್ಮಿಕರು, ಉದ್ಯೋಗ ಅರಸಿ ದೂರದಿಂದ ಬರುವವರು, ವಿದ್ಯಾರ್ಥಿಗಳು ಸೇರಿದಂತೆ ಶ್ರಮಿಕ ವರ್ಗ ಸೇರಿದಂತೆ ಎಲ್ಲರಿಗೂ ಕಡಿಮೆ ದರದಲ್ಲಿ ಉತ್ತಮ ತಿಂಡಿ ಮತ್ತು ಊಟ ನೀಡಲಾಗುತ್ತಿದೆ.

ಈ ಕೆಫೆಗಳನ್ನು ಮಹಿಳೆಯರೇ ಸಂಪೂರ್ಣವಾಗಿ ನಿರ್ವಹಿಸುವುದು ವಿಶೇಷ. ಅಡುಗೆ ಸಿದ್ಧಪಡಿಸುವುದು, ಗ್ರಾಹಕರಿಗೆ ತಲುಪಿಸುವುದು, ಹಣಕಾಸು ವಹಿವಾಟು ಎಲ್ಲವನ್ನೂ ಮಹಿಳೆಯರೇ ಮಾಡುತ್ತಾರೆ. ಅದರಲ್ಲೂ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಲ್ಲಿ ಸಕ್ರಿಯವಾಗಿರುವ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರೇ ಇಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ.

‘ಅಕ್ಕ ಕೆಫೆ ಯೋಜನೆಯಡಿ ಮಹಿಳೆಯರಿಗೆ ತಮ್ಮದೇ ಆಹಾರೋದ್ಯಮ ಸ್ಥಾಪಿಸಲು ಬೇಕಾದ ತರಬೇತಿಯನ್ನು ನೀಡಲಾಗುತ್ತದೆ. ಪ್ರಮುಖ ಪ್ರವಾಸಿ ತಾಣಗಳು, ಜನನಿಬಿಡ ಸ್ಥಳಗಳು ಹಾಗೂ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಈ ಕೆಫೆಗಳು ತೆರೆಯಲಾಗುತ್ತದೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ‘ಅಕ್ಕ’ ಬ್ರ್ಯಾಂಡ್‌ನ ಅಡಿಯಲ್ಲಿ ಆಹಾರೋದ್ಯಮ ಸಂಸ್ಥೆಗಳನ್ನು ಕಟ್ಟಬಹುದು’ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. 

‘ಅಕ್ಕ ಕೆಫೆ’ಗೆ ಪ್ರೇರಣೆ: ಮಹಿಳಾ ಸ್ವಸಹಾಯ ಸಂಘಗಳು ಆರು ವರ್ಷಗಳಿಂದ ದೀನ್ ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆ ಅಡಿಯಲ್ಲಿ ಮಹಿಳಾ ಉದ್ಯಮಿಗಳು ಸರ್ಕಾರಿ ಹಾಗೂ ಇತರೆ ಕಾರ್ಯಕ್ರಮಗಳಿಗೆ ಮತ್ತು ರುಚಿ ರುಚಿಯಾದ ಆಹಾರ ಮತ್ತು ಪಾನೀಯ ಪೂರೈಸುತ್ತಿದ್ದವು. ಇದನ್ನು ಗಮನಿಸಿದ ರಾಜ್ಯ ಸರ್ಕಾರ ಮಹಿಳೆಯರೇ ನಡೆಸುವ ‘ಕೆಫೆಗಳನ್ನು ತೆರೆಯಲು ಈ ಯೋಜನೆ ರೂಪಿಸಿದೆ.

ನಂದಗೋಕುಲ ಮಹಿಳೆಯರ ಸ್ವಸಹಾಯ ಗುಂಪಿಗೆ ಸೇರಿದ 12 ಮಹಿಳೆಯರ ತಂಡವು ಈ ಕೆಫೆಯನ್ನು ನಡೆಸುತ್ತಿದೆ. ಅಕ್ಕ ಕೆಫೆ ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ವಾರದ ಎಲ್ಲ ದಿನಗಳಲ್ಲೂ ಕಾರ್ಯನಿರ್ಹಿಸುತ್ತದೆ. ಇಲ್ಲಿ ಆರೋಗ್ಯಕರ, ಸ್ವಾದಿಷ್ಟಕರವಾದ ಆಹಾರ ಲಭ್ಯವಿದ್ದು, ಶುಚಿ-ರುಚಿಯ ಜೊತೆಗೆ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಆಹಾರವನ್ನು ಪೂರೈಸಲಾಗುತ್ತದೆ ಎಂದು ಗಾಂಧಿನಗರದಲ್ಲಿರುವ ಅಕ್ಕ ಕೆಫೆಯ ಪುಷ್ಪಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರ ಅಕ್ಕ ಕೆಫೆಯ ಬ್ರ್ಯಾಂಡಿಂಗ್‌ ಹಾಗೂ ಕಟ್ಟಡ ನಿರ್ಮಿಸಿ ಕೊಡುತ್ತದೆ. ಸ್ವಸಹಾಯ ಮಹಿಳಾ ಸಂಘದಿಂದ ಸಾಲದ ರೂಪದಲ್ಲಿ ಹಣ ಪಡೆದುಕೊಂಡು ಈ ಉದ್ಯಮಕ್ಕೆ ಬೇಕಾಗುವ ಯಂತ್ರೋಪಕರಣ ಖರೀದಿ ಹಾಗೂ ಬಂಡವಾಳ ಹೂಡಿಕೆ ಮಾಡಿದ್ದೇವೆ. ಪ್ರತಿದಿನ ಅಕ್ಕ ಕೆಫೆಯಿಂದ ಬರುವ ಆದಾಯದಲ್ಲಿ ಸಾಲ ತೀರಿಸುವ ಜೊತೆಗೆ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸಂಬಳವನ್ನು ನೀಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ಅಕ್ಕ ಕೆಫೆಯಲ್ಲಿ ವಿವಿಧ ಖಾದ್ಯಗಳ ತಯಾರಿಲ್ಲಿ ತೊಡಗಿದ್ದ ಅಕ್ಕಂದಿರು‌ ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

Cut-off box - ‘ಮತ್ತಷ್ಟು ಕೆಫೆ ಆರಂಭಕ್ಕೆ ಸಿದ್ಧತೆ’ ‘ಈಗಾಗಲೇ ಆರಂಭವಾಗಿರುವ ಎರಡು ಅಕ್ಕ ಕೆಫೆಗಳಲ್ಲಿ ಉತ್ತಮ ವಹಿವಾಟು ನಡೆಯುತ್ತಿದ್ದು ಜನರ ಸ್ಪಂದನೆ ಚೆನ್ನಾಗಿದೆ. ಬೆಂಗಳೂರಿನ ಹಲವೆಡೆ ಇನ್ನಷ್ಟು ಕೆಫೆಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ’ ಎಂದು ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಹಿಳಾ ಸಬಲೀಕರಣದ ದೃಷ್ಟಿಯಿಂದ ಇದೊಂದು ಮಹತ್ವದ ಯೋಜನೆ. ಬಜೆಟ್‌ ಘೋಷಣೆಯಂತೆ ರಾಜ್ಯದಾದ್ಯಂತ ಇನ್ನೂ 48 ಅಕ್ಕ ಕೆಫೆಗಳನ್ನು ಆರಂಭಿಸುತ್ತೇವೆ’ ಎಂದರು.

‘ಅಕ್ಕ ಕೆಫೆ: ಮಹಿಳೆಯರಿಗೆ ತರಬೇತಿ’

‘ಅಕ್ಕ ಕೆಫೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ಇಲಾಖೆ ವತಿಯಿಂದ ಆಹಾರ ತಯಾರಿಕೆ ಸ್ವಚ್ಛತೆ ಗ್ರಾಹಕರೊಂದಿಗೆ ಸಂವಾದ ನಡೆಸುವ ಕಲೆ ಘನತ್ಯಾಜ್ಯ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತದೆ ಎಂದು ರಾಷ್ಟ್ರೀಯ ಜೀವನೋಪಾಯ ಮಿಷನ್‌ನ ನಿರ್ದೇಶಕಿ ಪಿ.ಐ. ಶ್ರೀವಿದ್ಯಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಅಕ್ಕ ಕೆಫೆಗಳಲ್ಲಿ ಕರ್ನಾಟಕದ ನೆಲಮೂಲದ ಆಹಾರವನ್ನು ಶುಚಿ–ರಚಿಯಾಗಿ ತಯಾರಿಸಿ ನೀಡಲಾಗುತ್ತದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕಾರಿ ಆಗಲಿದೆ’ ಎಂದರು.

ಸರ್ಕಾರಿ ಕಚೇರಿಗಳಿಂದ ಬೇಡಿಕೆ’

‘ಸರ್ಕಾರಿ ಕಚೇರಿಗಳೆಲ್ಲ ಅಕ್ಕ ಕೆಫೆಯಿಂದ ಊಟ ಮತ್ತು ತಿಂಡಿ ಖರೀದಿಸಿಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ವಿಧಾನಸೌಧ ವಿಕಾಸಸೌಧ ಎಂ.ಎಸ್. ಬಿಲ್ಡಿಂಗ್ ಸೇರಿದಂತೆ ಸರ್ಕಾರಿ ಕಚೇರಿಗಳಿಂದ ತಿಂಡಿ ಹಾಗೂ ಊಟಕ್ಕೆ ಬೇಡಿಕೆ ಬರುತ್ತಿದೆ. ಇದರಿಂದ ತಿಂಗಳಿಗೆ ₹ 80 ಸಾವಿರದಿಂದ ₹ 1ಲಕ್ಷದವರೆಗೂ ವಹಿವಾಟು ನಡೆಯುತ್ತಿದೆ. ಇದನ್ನು ಹೊರೆತುಪಡಿಸಿ ಪ್ರತಿದಿನ ₹ 8 ಸಾವಿರದಿಂದ 10 ಸಾವಿರವರೆಗೂ ವಹಿವಾಟು ನಡೆಯುತ್ತಿದೆ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಮಾಲೀಕರು’ ಎಂದು ಪುಷ್ಪಾ ಮಾಹಿತಿ ಹಂಚಿಕೊಂಡರು.

ಜನ ಏನಂತಾರೆ?

ಮಹಿಳೆಯರು ಸೇರಿ ಒಂದು ಉದ್ಯಮ ಪ್ರಾರಂಭಿಸಲು ಸರ್ಕಾರ ಸಹಾಯ ಮಾಡಿರುವುದು ಶ್ಲಾಘನೀಯ. ಇಲ್ಲಿ ಕಾರ್ಯನಿರ್ವಹಿಸುವ ಎಲ್ಲ ಮಹಿಳೆಯರಲ್ಲಿ ಒಗ್ಗಟ್ಟಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಅಕ್ಕ ಕೆಫೆಗಳು ಸಹಕಾರಿಯಾಗಲಿವೆ.

- ಜ್ಯೋತಿ ಗ್ರಾಹಕಿ

***

ಅಕ್ಕ ಕೆಫೆಗಳಲ್ಲಿ ಶುಚಿ–ರುಚಿಯಾದ ಆಹಾರ ತಯಾರಿಸಲಾಗುತ್ತಿದೆ. ಇಲ್ಲಿನ ಆಹಾರ ಸೇವಿಸಿದರೆ ಮನೆಯ ಊಟ ಸವಿದಂಥ ಭಾಸವಾಗುತ್ತದೆ. ನಾನು ಪ್ರತಿನಿತ್ಯ ಇಲ್ಲಿಗೆ ಬಂದು ಮಧ್ಯಾಹ್ನದ ಊಟ ತೆಗೆದುಕೊಂಡು ಹೋಗುತ್ತೇನೆ.

-ಎಚ್.ಎಸ್. ಚಂದ್ರಶೇಖರ್ ವಕೀ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.