ADVERTISEMENT

ಬೆಂಗಳೂರು | ಹಸಿರು ಹೊದಿಕೆ ವೃದ್ಧಿಗೆ ‘ಥೀಮ್‌’ ವೃಕ್ಷವನ

ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಿಬಿಎಂಪಿ ವಿಶೇಷ ಯೋಜನೆ; ಮಿಯಾವಾಕಿ ಅರಣ್ಯಕ್ಕೂ ಒತ್ತು

ಆರ್. ಮಂಜುನಾಥ್
Published 4 ಆಗಸ್ಟ್ 2024, 0:30 IST
Last Updated 4 ಆಗಸ್ಟ್ 2024, 0:30 IST
<div class="paragraphs"><p>ಮಿಯಾವಾಕಿ ಅರಣ್ಯ<br></p></div>

ಮಿಯಾವಾಕಿ ಅರಣ್ಯ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದಲ್ಲಿ ‘ಹಸಿರು ಹೊದಿಕೆ’ಯನ್ನು ವೃದ್ಧಿಸುವ ಉದ್ದೇಶದಿಂದ ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಡಿ ವೃಕ್ಷವನ, ಮಿಯಾವಾಕಿ ಅರಣ್ಯಗಳನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ.

ADVERTISEMENT

ವೃಕ್ಷವನಗಳಲ್ಲಿ ಸ್ಥಳೀಯ ಸಸ್ಯಗಳನ್ನು ಮಾತ್ರ ನೆಡಲಾಗುತ್ತದೆ. ಇದರಲ್ಲಿ ಔಷಧೀಯ ಗುಣಗಳುಳ್ಳ ಸಸಿಗಳಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ. ನಗರದ ಹವಾಗುಣಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ಬೆಳೆಸಿ, ಮರಗಳನ್ನಾಗಿಸಿ, ವಾಯು ಮಾಲಿನ್ಯವನ್ನು ನಿಯಂತ್ರಿಸಲು ಯೋಜಿಸಲಾಗಿದೆ.

ಬಿಬಿಎಂಪಿ ತೋಟಗಾರಿಕೆ ವಿಭಾಗದ ಸ್ವಾಧೀನದಲ್ಲಿರುವ ಒಂಬತ್ತು ಉದ್ಯಾನಗಳನ್ನು, ಅರಣ್ಯ ವಿಭಾಗದ ವತಿಯಿಂದ ವೃಕ್ಷವನಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ವೃಕ್ಷವನಗಳನ್ನು ಸಸಿಗಳನ್ನು ನೆಟ್ಟು ಪೋಷಿಸುವುದಕ್ಕೆ ಸೀಮಿತಗೊಳಿಸದೆ, ‘ಥೀಮ್ಡ್‌ ಪಾರ್ಕ್’ಗಳನ್ನಾಗಿ ರೂಪಿಸಲು ಬಿಬಿಎಂಪಿ ನಿರ್ಧರಿಸಿದೆ. ಧನ್ವಂತರ ವನ, ರಾಶಿವನ, ಅರಣ್ಯ ಆಟ, ಬುಡಕಟ್ಟು ಅರಣ್ಯ ಎಂಬ ವಿಷಯಗಳನ್ನು ಆಧರಿಸಿ ವೃಕ್ಷವನಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ.

‘ಔಷಧೀಯ ಗುಣಗಳ ಸಸ್ಯಗಳನ್ನೇ ಹೊಂದಿರುವ ಧನ್ವಂತರಿ ವನ, ಬುಡಕಟ್ಟು ಸಮುದಾಯದ ಪರಿಸರ ವನ್ನು ಬಿಂಬಿಸುವ ರೀತಿಯಲ್ಲಿ ವೃಕ್ಷವನ, ಮಕ್ಕಳು ಆಟವಾಡಲು ಕಾಡಿನ ಮಾದರಿಯಲ್ಲೇ ಆಟೋಪಕರಣ ಗಳನ್ನೂ ರೂಪಿಸಲಾಗುತ್ತದೆ’ ಎಂದು ಬಿಬಿಎಂಪಿ ಅರಣ್ಯ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ ತಿಳಿಸಿದರು.

ಬಿಬಿಎಂಪಿ ಈಗ ಒಂದು ಮಿಯಾವಾಕಿ ಅರಣ್ಯವನ್ನು ನಿರ್ಮಿಸಿದ್ದು, ಇನ್ನೂ ಎರಡು ಮಿಯಾವಾಕಿ ಅರಣ್ಯ ನಿರ್ಮಿಸಲಾಗುತ್ತಿದೆ. ಹೊಸ ನರ್ಸರಿ ಹಾಗೂ ನರ್ಸರಿಗಳ ಅಭಿವೃದ್ಧಿ ಕಾರ್ಯವನ್ನೂ ಕೈಗೊಳ್ಳಲಾಗುತ್ತಿದೆ.
ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇನ್ನೊಂದು ವರ್ಷದಲ್ಲಿ ಹೊಸ ಉದ್ಯಾನಗಳ ಅಭಿವೃದ್ಧಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

₹25 ಕೋಟಿ; ಅರಣ್ಯ ವಿಭಾಗದಿಂದ ಒಟ್ಟು ವೆಚ್ಚ

₹11 ಕೋಟಿ; 9 ವೃಕ್ಷವನಗಳ ಅಭಿವೃದ್ಧಿಗೆ ವೆಚ್ಚ

₹10 ಕೋಟಿ; ಹೊಸ ನರ್ಸರಿ, ಹಳೆಯ ನರ್ಸರಿ ಅಭಿವೃದ್ಧಿ

₹4 ಕೋಟಿ; ಎರಡು ಮಿಯಾವಾಕಿ ಅರಣ್ಯ ಅಭಿವೃದ್ಧಿ

ಎಲ್ಲೆಲ್ಲಿ ಏನೇನು?

ಮಿಯಾವಾಕಿ ಅರಣ್ಯ; ಬೊಮ್ಮನಹಳ್ಳಿ ಹಾಗೂ ಆವಲಹಳ್ಳಿ, ಯಲಹಂಕ

ನರ್ಸರಿ; ದಾಸರಹಳ್ಳಿಯ ಶೆಟ್ಟಿಹಳ್ಳಿಯಲ್ಲಿ ಹೊಸ ನರ್ಸರಿ ಹಾಗೂ ಬೊಮ್ಮನಹಳ್ಳಿಯ ಕೂಡ್ಲು, ರಾಜೀವ್‌ಗಾಂಧಿ ಉದ್ಯಾನ, ಕೆಂಪಾಪುರ ನರ್ಸರಿಗಳ ಅಭಿವೃದ್ಧಿ

ವೃಕ್ಷವನ; ಮಹದೇವಪುರದ ರಾಂಪುರ ಕೆರೆ ಆವರಣದಲ್ಲಿನ ಎರಡು ಉದ್ಯಾನ; ಬೊಮ್ಮನಹಳ್ಳಿಯ ಬನ್ನೇರುಘಟ್ಟ ಜೈವಿಕ ಉದ್ಯಾನದ ವನ್ಯಜೀವಿ ರಕ್ಷಣಾ ಕೇಂದ್ರ; ಯಲಹಂಕದ ಬ್ಯಾಟರಾಯನಪುರದಲ್ಲಿರುವ ಎನ್‌ಟಿಐ ಲೇಔಟ್‌ನಲ್ಲಿ ಎರಡು ಉದ್ಯಾನ; ಬೊಮ್ಮನಹಳ್ಳಿಯ ಸಿಂಗಸಂದ್ರ ಎಇಸಿಎಸ್‌ ಲೇಔಟ್‌; ಬೊಮ್ಮನಹಳ್ಳಿಯ ಪೂರ್ಣಪ್ರಜ್ಞ ಲೇಔಟ್‌ನಲ್ಲಿನ ಮೂರು ಉದ್ಯಾನ.

‘ಮರ ಗಣತಿಗೆ: ಇನ್ನೂ ನಾಲ್ಕು ತಿಂಗಳು ಬೇಕು’

‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮರಗಳ ಗಣತಿ ಕಾರ್ಯ ನಡೆಯುತ್ತಿದ್ದು, ಇನ್ನು ನಾಲ್ಕು ತಿಂಗಳಲ್ಲಿ ಮುಗಿಯಲಿದೆ’ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಸ್ವಾಮಿ ತಿಳಿಸಿದರು.‘10 ವಾರ್ಡ್‌ಗಳಲ್ಲಿ ಗಣತಿ ಮುಗಿದಿದ್ದು, 2.5 ಲಕ್ಷ ಮರಗಳ ಗಣತಿಯಾಗಿದೆ. ಉಳಿದ ವಾರ್ಡ್‌ಗಳಲ್ಲಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.