ಬೆಂಗಳೂರು: ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವವರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವುದರ ಜೊತೆಯಲ್ಲೇ ಗರಿಷ್ಠ ಸುರಕ್ಷತೆಯನ್ನೂ ಒದಗಿಸುವಂತಹ ‘ಸ್ಮಾರ್ಟ್ ಬಸ್ ತಂಗುದಾಣ’ಗಳ ಪರಿಕಲ್ಪನೆ ನಗರದಲ್ಲಿ ಸಾಕಾರಗೊಂಡಿದೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯ ನೆರವಿನಲ್ಲಿ ಇಂತಹ ಮೂರು ತಂಗುದಾಣಗಳು ನಿರ್ಮಾಣವಾಗಿದ್ದು, ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಜನಸ್ನೇಹಿ ತಂಗುದಾಣಗಳನ್ನು ನಿರ್ಮಿಸಿ ಹೊಸ ಆದಾಯದ ಮೂಲವನ್ನೂ ಸೃಜಿಸಿಕೊಳ್ಳಬಹುದಾದ ಅವಕಾಶ ಬಿಬಿಎಂಪಿಗೆ ದೊರಕಿದೆ.
ಈ ಆಕರ್ಷಕ ತಂಗುದಾಣಗಳಲ್ಲಿ ಪ್ರಯಾಣಿಕರ ಪ್ರಾಥಮಿಕ ಆದ್ಯತೆಗಳಾದ ಆಸನ ಮತ್ತು ಆಸರೆಯ ವ್ಯವಸ್ಥೆ ಇದ್ದು, ತಂಗುದಾಣದಲ್ಲಿನ ಡಿಜಿಟಲ್ ಪರದೆಯಲ್ಲಿ ಮಾರ್ಗದ ಮೂಲಕ ಹಾದು ಹೋಗುವ ಬಸ್‌ಗಳ ಪಟ್ಟಿ, ತಂಗುದಾಣಕ್ಕೆ ಬಸ್ ಬಂದು ತಲುಪುವ ಸರಾಸರಿ ಸಮಯದ ಮಾಹಿತಿ ಬಿತ್ತರಗೊಳ್ಳಲಿದೆ. ರಾತ್ರಿವೇಳೆ ಎಲ್‌ಇಡಿ ಬಲ್ಬ್‌ಗಳು ಬೆಳಕು ಬೀರುತ್ತಿರುತ್ತವೆ.
ಸೇಪಿಯನ್ಸ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಬಹುರಾಷ್ಟ್ರೀಯ ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕಾ ನಿಧಿ (ಸಿಎಸ್‌ಆರ್) ಅಡಿಯಲ್ಲಿ ಶಿಲ್ಪಾ ಫೌಂಡೇಷನ್ ಸಹಯೋಗದಲ್ಲಿ ₹1.1 ಕೋಟಿ ವೆಚ್ಚದಲ್ಲಿ ನಗರದ ನೃಪತುಂಗ ರಸ್ತೆ, ಕೋರಮಂಗಲದ ನೆಕ್ಸಸ್ ಮಾಲ್ ಮುಂಭಾಗ ಹಾಗೂ ಕಾಡುಬೀಸನಹಳ್ಳಿಯ ನ್ಯೂ ಹೊರೈಝಾನ್ ಕಾಲೇಜಿನ ಮುಂಭಾಗ ಅತ್ಯಾಧುನಿಕ ಹಾಗೂ ಸುಸಜ್ಜಿತ ‘ಸ್ಮಾರ್ಟ್ ತಂಗುದಾಣ’ಗಳನ್ನು ನಿರ್ಮಿಸಲಾಗಿದೆ. ಐದು ವರ್ಷಗಳ ನಿರ್ವಹಣೆಯೂ ಯೋಜನೆಯಲ್ಲಿ ಸೇರಿದೆ. ಈಗಾಗಲೇ ಈ ತಂಗುದಾಣಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ.
ಬೆಂಗಳೂರು ನಗರದಲ್ಲಿ ಸಾವಿರಾರು ಬಸ್ ತಂಗುದಾಣಗಳಿದ್ದರೂ, ಪ್ರಯಾಣಿಕ ಸ್ನೇಹಿ ಹಾಗೂ ಅತ್ಯಾಧುನಿಕ ಸೌಲಭ್ಯವುಳ್ಳ ತಂಗುದಾಣಗಳ ಸಂಖ್ಯೆ ವಿರಳ. ಬಿಬಿಎಂಪಿಗೆ ಯಾವುದೇ ರೀತಿಯಲ್ಲೂ ಹೊರೆಯಾಗದಂತೆ ಸುಸಜ್ಜಿತ ಮತ್ತು ಅತ್ಯಾಧುನಿಕ ಸೌಲಭ್ಯಗಳುಳ್ಳ ಬಸ್ ಪ್ರಯಾಣಿಕರ ತಂಗುದಾಣ ಕಲ್ಪಿಸುವ ಉದ್ದೇಶದೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ. ಪ್ರಯಾಣಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ತಂಗುದಾಣವನ್ನು ವಿನ್ಯಾಸಗೊಳಿಸಲಾಗಿದೆ.
ನಿರಂತರ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು: ಸ್ಮಾರ್ಟ್ ಬಸ್ ತಂಗುದಾಣಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಡಿವಾಣ ಹಾಕಲು ದಿನದ 24 ಗಂಟೆಯೂ ಚಾಲನೆಯಲ್ಲಿ ಇರುವಂತೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಈ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಳೀಯ ಪೊಲೀಸ್ ಠಾಣೆಯೊಂದಿಗೆ ಜೋಡಿಸಲಾಗಿದೆ. ಪೊಲೀಸರು ನಿರಂತರವಾಗಿ ನಿಗಾ ಇರಿಸಲು ಅವಕಾಶ ಕಲ್ಪಿಸಲಾಗಿದೆ.
ಇದರ ಜೊತೆಗೆ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯ ಉಂಟಾಗುವ ಪರಿಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ ರವಾನೆಯಾಗಲಿದೆ. ಕೆಲವೇ ನಿಮಿಷಗಳಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣೆ ಒದಗಿಸಲಿದ್ದಾರೆ.
ಚಾರ್ಜಿಂಗ್ ಸಮಸ್ಯೆಗೂ ಪರಿಹಾರ: ‘ಈ ತಂಗುದಾಣಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳಿದ್ದು, ಪ್ರಯಾಣಿಕರು ತಮ್ಮ ಲ್ಯಾಪ್‌ಟಾಪ್, ಮೊಬೈಲ್‌ಗಳನ್ನು ಚಾರ್ಜಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಮಳೆ ನೀರು ಪೋಲಾಗದಂತೆ ಗಿಡಗಳಿಗೆ ಅಥವಾ ಇಂಗುಗುಂಡಿಗಳಿಗೆ ಹರಿದು ಹೋಗುವ ವ್ಯವಸ್ಥೆ ಇದೆ. ಸೆನ್ಸಾರ್ ಆಧಾರಿತ ಕಸದ ಬುಟ್ಟಿಗಳನ್ನು ಅಳವಡಿಸಿದ್ದು, ಒಣ ಕಸ ಹಾಗೂ ಹಸಿ ಕಸವನ್ನು ವಿಂಗಡಿಸಿ ತ್ಯಾಜ್ಯ ಶೇಖರಿಸಲಿದೆ. ಕಸದ ಬುಟ್ಟಿ ತುಂಬಿದ ತಕ್ಷಣ ಆನ್‌ಲೈನ್ ಮೂಲಕ ಮಾಹಿತಿ ರವಾನಿಸಲಿದ್ದು, ಬಿಬಿಎಂಪಿ ಸಿಬ್ಬಂದಿ ಬಂದು ತ್ಯಾಜ್ಯ ವಿಲೇವಾರಿ ಮಾಡಬಹುದು’ ಎಂದು ‘ಸ್ಮಾರ್ಟ್ ತಂಗುದಾಣ’ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರುವ ಶಿಲ್ಪಾ ಫೌಂಡೇಷನ್‌ನ ಸಂಸ್ಥಾಪಕ ಅಚ್ಚುತ್‌ಗೌಡ ತಿಳಿಸಿದರು.
‘ಅತ್ಯಾಧುನಿಕ ಹಾಗೂ ಸುಸಜ್ಜಿತ ಬಸ್ ತಂಗುದಾಣವನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ. ಸಂಸ್ಥೆಯ ವತಿಯಿಂದ ಯಾವುದೇ ರೀತಿಯ ಜಾಹೀರಾತುಗಳನ್ನು ಅಳವಡಿಸಲಾಗುವುದಿಲ್ಲ. ಡಿಜಿಟಲ್ ಪರದೆಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಜಾಹೀರಾತುಗಳನ್ನು ಬಿತ್ತರಿಸಬಹುದು’ ಎಂದರು.
ಸೇಪಿಯನ್ಸ್ ಹಾಗೂ ಶಿಲ್ಪಾ ಫೌಂಡೇಷನ್ ನಿರ್ಮಿಸಿರುವ ಸ್ಮಾರ್ಟ್ ತಂಗುದಾಣವು ಹಲವಾರು ಸೌಲಭ್ಯಗಳಿಂದ ಕೂಡಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದನ್ನು ಸಾರ್ವಜನಿಕರು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು.-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಮಹಿಳೆಯರು ಮತ್ತು ಮಕ್ಕಳು ಸಾರ್ವಜನಿಕ ಪ್ರದೇಶಗಳಲ್ಲಿ ಅದರಲ್ಲೂ ಬಸ್ ತಂಗುದಾಣಗಳಲ್ಲಿ ನಿರ್ಭೀತಿಯಿಂದ ಇರಬೇಕು ಎಂಬ ಉದ್ದೇಶದಿಂದ ಸ್ಮಾರ್ಟ್ ತಂಗುದಾಣವನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಡಿಯೊಗಳನ್ನು ಪ್ರದರ್ಶಿಸಲು ಬಿಬಿಎಂಪಿ ಜೊತೆಗೆ ಮಾತುಕತೆ ನಡೆಸುತ್ತೇವೆ.-ಅಚ್ಚುತ್ ಗೌಡ, ಶಿಲ್ಪಾ ಫೌಂಡೇಷನ್‌ನ ಸಂಸ್ಥಾಪಕರು
ಸೇಪಿಯನ್ಸ್ ಸಂಸ್ಥೆಯು ತನ್ನ ಸಿಎಸ್‌ಆರ್ ನಿಧಿ ಬಳಸಿಕೊಂಡು ವಿನೂತನ ಶೈಲಿಯ ಸ್ಮಾರ್ಟ್ ತಂಗುದಾಣವನ್ನು ನಿರ್ಮಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದೆ. ಹೊಸ ತಲೆಮಾರಿನವರಿಗೆ ಹೊಸತನವನ್ನು ನೀಡುವ ಉದ್ದೇಶದಿಂದ ಸ್ಮಾರ್ಟ್ ತಂಗುದಾಣ ನಿರ್ಮಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರೆ ಈ ಯೋಜನೆ ಯಶಸ್ವಿಯಾಗಲಿದೆ.-ಸುರಜಿತ್ ಬಸು, ಸೇಪಿಯನ್ಸ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಸೇಪಿಯನ್ಸ್ ವಿಶ್ವವಿದ್ಯಾಲಯದ ಮುಖ್ಯಸ್ಥ
ನೃಪತುಂಗ ರಸ್ತೆಯಲ್ಲಿರುವ ತಂಗುದಾಣದಲ್ಲಿ ರಾತ್ರಿ ಸಮಯದಲ್ಲಿ ಹೆಚ್ಚು ಪ್ರಯಾಣಿಕರು ಇರುವುದಿಲ್ಲ. ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪ್ಯಾನಿಕ್ ಬಟನ್ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದು ಶ್ಲಾಘನೀಯ.-ಗಗನಶ್ರೀ ಎಂ.ಟೆಕ್ ವಿದ್ಯಾರ್ಥಿನಿ
ನಗರ ಪ್ರದೇಶಗಳಲ್ಲಿ ಇತ್ತೀಚಿಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಬಸ್ ತಂಗುದಾಣಗಳಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿರುವುದು ಒಳ್ಳೆಯ ಕ್ರಮ. ಇಂತಹ ತಂಗುದಾಣಗಳ ಸಂಖ್ಯೆ ಹೆಚ್ಚಾಗಲಿ.-ಅನಿತಾ ಭಾರದ್ವಾಜ್ ಗೃಹಿಣಿ
ಅಂಕಿ–ಅಂಶಗಳು
* 3 ನಗರದಲ್ಲಿ ನಿರ್ಮಿಸಲಾಗಿರುವ ಸ್ಮಾರ್ಟ್ ತಂಗುದಾಣಗಳ ಸಂಖ್ಯೆ
* 1.1 ಕೋಟಿ ಒಟ್ಟು ವೆಚ್ಚ
* 1,689 ನಗರದಲ್ಲಿರುವ ಒಟ್ಟು ಬಸ್ ತಂಗುದಾಣಗಳ ಸಂಖ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.