ಬೆಂಗಳೂರು: ಉದ್ಯಾನನಗರಿ, ಸಿಲಿಕಾನ್ ಸಿಟಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರು, ದಿನ ಕಳೆದಂತೆಲ್ಲಾ ತನ್ನ ವ್ಯಾಪ್ತಿಯನ್ನು ಹಿರಿದಾಗಿಸಿಕೊಳ್ಳುತ್ತಲೇ ಇದೆ. ಎಲ್ಲ ಜಾತಿ, ಧರ್ಮ, ಭಾಷೆಯವರ ಅಚ್ಚುಮೆಚ್ಚಿನ ತಾಣವಾಗಿರುವ ಈ ಮಹಾನಗರಿಸುಮಾರು 1.23 ಕೋಟಿ ಜನರಿಗೆ ತನ್ನೊಡಲಲ್ಲಿ ಆಶ್ರಯ ಕಲ್ಪಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿರುವ ಬೆಂಗಳೂರು, ಕ್ರೀಡಾ ಲೋಕಕ್ಕೂ ಅನೇಕ ದಿಗ್ಗಜರನ್ನು ಕೊಡುಗೆಯಾಗಿ ನೀಡಿದೆ.ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಬ್ರಿಜೇಶ್ ಪಟೇಲ್, ಪಂಕಜ್ ಆಡ್ವಾಣಿ, ನಿಶಾ ಮಿಲ್ಲೆಟ್ ಹೀಗೆ ಹಲವರುಎತ್ತರದ ಸಾಧನೆಯ ಮೂಲಕ ಉದ್ಯಾನನಗರಿಯ ಕೀರ್ತಿ ಹೆಚ್ಚಿಸಿದ್ದಾರೆ. ಇಂತಹವಿಶಿಷ್ಟ ಕ್ರೀಡಾ ಪರಂಪರೆ ಹೊಂದಿರುವ ಈ ನಗರಿಯಲ್ಲಿ ಈಗ ಆಟದ ಮೈದಾನಗಳೇ ಮಾಯವಾಗುತ್ತಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 192 ಆಟದ ಮೈದಾನಗಳಿವೆ. ಈ ಪೈಕಿ ಶೇ 21ರಷ್ಟು ಮೈದಾನಗಳು ಸಾರ್ವಜನಿಕರ ಬಳಕೆಗೆ ಅಲಭ್ಯವಾಗಿವೆ. 82 ಅಂಗಳಗಳು ಬಳಕೆಗೆ ಯೋಗ್ಯವೇ ಅಲ್ಲ ಎಂಬ ಅಂಶ ಜನಾಗ್ರಹ ಸಂಸ್ಥೆಯು2017ರಲ್ಲಿ ನಡೆಸಿದ್ದ ಸಮೀಕ್ಷೆಯಿಂದ ತಿಳಿದುಬಂದಿತ್ತು. ಹಿಂದಿನ ಮೂರು ವರ್ಷಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಅನೇಕ ಮೈದಾನಗಳು ಉದ್ಯಾನಗಳಾಗಿ ಮಾರ್ಪಟ್ಟಿವೆ. ಇನ್ನೂ ಕೆಲವು ಅಂಗಳಗಳು ನಿರ್ವಹಣೆಯ ಕೊರತೆಯಿಂದಾಗಿ ಶೋಚನೀಯ ಸ್ಥಿತಿಗೆ ತಲುಪಿವೆ. ಅಲ್ಲಿ ಬೀಡಾಡಿ ದನಗಳು ಹಾಗೂ ಬೀದಿ ನಾಯಿಗಳೂ ಆಶ್ರಯ ಪಡೆದಿವೆ.
ಮೈದಾನಗಳಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಕಲ್ಪಿಸಿ ಆ ಮೂಲಕ ಕ್ರೀಡಾಪಟುಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕಿದ್ದ ಬಿಬಿಎಂಪಿ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಯ ನೆಪವೊಡ್ಡಿ ಅವುಗಳ ಅಸ್ತಿತ್ವವೇ ಇಲ್ಲದಂತಾಗಿಸುತ್ತಿವೆ. ಹೀಗಾಗಿ ಹೊಸ ತಲೆಮಾರಿನ ಹುಡುಗರು ಮನೆಯ ಮುಂದಣ ಡಾಂಬರ್ ರಸ್ತೆಯಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ವಾಲಿಬಾಲ್ ಆಡುವುದು ಸಾಮಾನ್ಯವಾಗಿಬಿಟ್ಟಿದೆ. ಇನ್ನೂ ಕೆಲವರು ಮೊಬೈಲ್ ಗೇಮಿಂಗ್ ಮೊರೆ ಹೋಗಿದ್ದಾರೆ.
ಮೈದಾನಗಳನ್ನೇ ಕಾಣದ ಬಡಾವಣೆಗಳು
ಹೊಸ ಬಡಾವಣೆ ಆರಂಭಿಸುವಾಗ ಮೈದಾನ ಹಾಗೂ ಉದ್ಯಾನಕ್ಕೆ ಪ್ರತ್ಯೇಕ ಜಾಗ ಮೀಸಲಿಡಬೇಕು ಎಂಬ ಕಾನೂನೇ ಇದೆ. ಆದರೆ, ಅದು ಕಡತಕ್ಕೆ ಸೀಮಿತವಾಗಿದೆ. ಅದನ್ನು ಯಾರೂ ಪಾಲಿಸುತ್ತಿಲ್ಲ. ಇದರ ಪರಿಣಾಮ ಬೆಂಗಳೂರಿನ ಕೆಲ ಬಡಾವಣೆಗಳು ಇದುವರೆಗೂ ಮೈದಾನಗಳನ್ನೇ ಕಂಡಿಲ್ಲ. ಚಂದ್ರಾ ಲೇಔಟ್ ಇದಕ್ಕೊಂದು ನಿದರ್ಶನ.
ಹೆಚ್ಚಿದ ಅತಿಕ್ರಮಣ..
ಬಿಡಿಎ ಹಾಗೂ ಬಿಬಿಎಂಪಿ, ಅಭಿವೃದ್ಧಿಯ ನೆವ ಹೇಳಿ ಕೆಲ ಮೈದಾನಗಳನ್ನು ಖಾಸಗಿಯವರ ಸುಪರ್ದಿಗೆ ಒಪ್ಪಿಸಿವೆ. ಆ ಅಂಗಳಗಳಿಗೆ ಸ್ಥಳಿಯರೇ ಕಾಲಿಡುವಂತಿಲ್ಲ.
‘ಬಹಳಷ್ಟು ಕಡೆ ಮೈದಾನಗಳನ್ನು ಒತ್ತುವರಿ ಮಾಡಲಾಗಿದೆ. ಇದರ ಅರಿವಿದ್ದರೂ ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಪ್ರಭಾವಿಗಳು ಹಾಗೂ ಗುತ್ತಿಗೆದಾರರ ಎದುರು ಸಂಪೂರ್ಣವಾಗಿ ಮಂಡಿಯೂರಿದ್ದಾರೆ. ಬಿಡಿಎ ತನ್ನ ವ್ಯಾಪ್ತಿಯ ಬಹುತೇಕ ಮೈದಾನಗಳನ್ನು ನಿವೇಶನಗಳನ್ನಾಗಿ ಮಾರ್ಪಡಿಸಿದೆ’ ಎಂಬುದು ಸಾರ್ವಜನಿಕರ ದೂರು.
‘ಅನ್ಯ ಉದ್ದೇಶಕ್ಕೆ ಅಧಿಕ ಬಳಕೆ’
‘ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ವಿಶಿಷ್ಟ ಇತಿಹಾಸವಿದೆ. ಜಿ.ಆರ್.ವಿಶ್ವನಾಥ್, ಬಿ.ಎಸ್.ಚಂದ್ರಶೇಖರ್, ಇಎಎಸ್ ಪ್ರಸನ್ನ ಅವರಂತಹ ವಿಶ್ವಶ್ರೇಷ್ಠ ಆಟಗಾರರು ಕ್ರಿಕೆಟ್ ಕಲಿತದ್ದು ಈ ಮೈದಾನದಲ್ಲಿ. ಇಂತಹ ಮೈದಾನ ಆಟಕ್ಕಿಂತಲೂ ಅನ್ಯ ಉದ್ದೇಶಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಇಲ್ಲಿ ಒಂದಿಲ್ಲೊಂದು ಕಾರ್ಯಕ್ರಮ ಆಯೋಜನೆಯಾಗುತ್ತಿರುವುದರಿಂದ ಕ್ರೀಡಾಪಟುಗಳು ಪರಿತಪಿಸುವಂತಾಗಿದೆ’ ಎಂದು ಕ್ರಿಕೆಟ್ ಕೋಚ್ ಮುರಳೀಧರ ಹೇಳುತ್ತಾರೆ.
‘ಬಿಬಿಎಂಪಿ ಈ ಮೈದಾನದ ನಿರ್ವಹಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾವೇ ಹಣ ಹಾಕಿ ಇದನ್ನು ನಿರ್ವಹಣೆ ಮಾಡುತ್ತಿದ್ದೇವೆ. ಕ್ರಿಕೆಟ್ ಮಾತ್ರವಲ್ಲ ಫುಟ್‌ಬಾಲ್, ಬ್ಯಾಸ್ಕೆಟ್‌ಬಾಲ್, ಹ್ಯಾಂಡ್ ಬಾಲ್ ಸೇರಿದಂತೆ ಇತರ ಕ್ರೀಡೆಗಳ ತರಬೇತಿಗೂ ಪೂರಕ ವಾತಾವರಣ ಮನಿರ್ಮಿಸಲಾಗಿದೆ. ಕಾರ್ಯಕ್ರಮಗಳಿಗೆ ಅಂಗಳ ಬಿಟ್ಟುಕೊಡುತ್ತಿರುವ ಬಿಬಿಎಂಪಿ ಕ್ರಮ ಪ್ರಶ್ನಿಸಿ ಶಂಕರಪುರ ಹಿತರಕ್ಷಣಾ ಸಂಸ್ಥೆ ವತಿಯಿಂದ ಸುಪ್ರೀಂಕೋರ್ಟ್ ಮೆಟ್ಟಿಲೂ ಏರಿದ್ದೆವು’ ಎಂದರು.
‘ಯೋಗ್ಯ ಟ್ರ್ಯಾಕ್‌ಗಳನ್ನಾದರೂ ನಿರ್ಮಿಸಲಿ’
‘ಅಥ್ಲೆಟಿಕ್ಸ್ ಹಾಗೂ ಇನ್ನಿತರ ಕ್ರೀಡಾ ಚಟುವಟಿಕೆಗಳಿಗಾಗಿ ಬೆಂಗಳೂರಿಗರು ಕಂಠೀರವ ಕ್ರೀಡಾಂಗಣವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಕಂಠೀರವ ರೀತಿಯ ಕ್ರೀಡಾಂಗಣ ಅಲ್ಲದೇ ಹೋದರೂ ಆಯಾ ವಲಯದಲ್ಲಿ ತರಬೇತಿಗೆ ಯೋಗ್ಯವಾದ ಕೇಂದ್ರಗಳನ್ನು ನಿರ್ಮಾಣ ಮಾಡಬೇಕು. ಎಂಟು ಲೇನ್‌ಗಳ ಟ್ರ್ಯಾಕ್, ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ ಹಾಗೂ ಒಂದು ಉಗ್ರಾಣ ಇದ್ದರೆ ಸಾಕು. ಇದಕ್ಕೆ ಅಂದಾಜು ₹20 ಕೋಟಿ ವೆಚ್ಚವಾಗಬಹುದಷ್ಟೆ. ಹಿಂದಿನಿಂದಲೂ ನಾವು ಈ ಬೇಡಿಕೆ ಇಡುತ್ತಲೇ ಬಂದಿದ್ದೇವೆ. ಆದರೆ, ಯಾರೂ ಇದರತ್ತ ಗಮನ ಹರಿಸಿಲ್ಲ’ ಎಂದು ಅಥ್ಲೆಟಿಕ್ಸ್‌ನ ಹಿರಿಯ ಕೋಚ್ ಲಕ್ಷ್ಮೀಶ ಹೇಳಿದರು.
‘ಅಥ್ಲೆಟಿಕ್ಸ್‌ನಲ್ಲಿ ಎತ್ತರದ ಸಾಧನೆ ಮಾಡುವ ಕನಸು ಹೊತ್ತವರ ತರಬೇತಿಗೆ ಬೆಂಗಳೂರಿನಲ್ಲೇ ಸರಿಯಾದ ಮೂಲ ಸೌಕರ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ಎರಡು ತರಬೇತಿ ಕೇಂದ್ರಗಳನ್ನಾದರೂ ಸರ್ಕಾರ ಆರಂಭಿಸಬೇಕು’ ಎಂದು ಒತ್ತಾಯಿಸಿದರು.
‘ಬೆಂಗಳೂರಿನಲ್ಲಿ ಉದ್ಯಾನ ಮತ್ತು ಮೈದಾನಕ್ಕೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಉದ್ಯಾನದೊಳಗೆ ಕ್ರೀಡಾಪಟುಗಳ ತರಬೇತಿಗೆ ಅವಕಾಶ ನೀಡುವುದು ತಪ್ಪು. ಅದರಿಂದ ಅಥ್ಲೀಟ್‌ಗಳು ಸರಿಯಾಗಿ ಅಭ್ಯಾಸ ಮಾಡಲು ಆಗುವುದಿಲ್ಲ. ಉಳ್ಳವರು ಬೇಕಾದಷ್ಟು ಹಣ ಖರ್ಚು ಮಾಡಿ ತಮ್ಮ ಮಕ್ಕಳಿಗೆ ಗುಣಮಟ್ಟದ ತರಬೇತಿ ಕೊಡಿಸುತ್ತಾರೆ. ಆದರೆ ಬಡವರು ಏನು ಮಾಡಬೇಕು’ ಎಂದು ಪ್ರಶ್ನಿಸಿದರು.
ಬಿಡಿಎ ಮೈದಾನದಲ್ಲಿ ಸ್ಥಳಿಯರಿಗೇ ಪ್ರವೇಶವಿಲ್ಲ!
ವಸಂತನಗರದಲ್ಲಿರುವ ಬಿಡಿಎ ಮೈದಾನವನ್ನು (ಅಂಬೇಡ್ಕರ್ ಭವನದ ಎದುರಿರುವುದು) ಕಾಲೇಜೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಈ ಮೈದಾನದಲ್ಲಿ ಈಗ ಸ್ಥಳೀಯರೇ ಕಾಲಿಡುವಂತಿಲ್ಲ.
‘ಕಾಲೇಜು ಆಡಳಿತ ಮಂಡಳಿಯು ಈ ಮೈದಾನವನ್ನು 99 ವರ್ಷಕ್ಕೆ ಗುತ್ತಿಗೆ ಪಡೆದುಕೊಂಡಿದೆ. ವಿಸ್ತಾರವಾದ ಈ ಜಾಗದಲ್ಲಿ ಯಾವ ಚಟುವಟಿಕೆಗಳೂ ನಡೆಯುತ್ತಿಲ್ಲ. ಹೀಗಾಗಿ ಬೆಳಿಗ್ಗೆ ಮತ್ತು ಸಂಜೆ ವಾಯು ವಿಹಾರಕ್ಕೆ ಅವಕಾಶ ನೀಡುವಂತೆ ಆಡಳಿತ ಮಂಡಳಿಯವರಿಗೆ ಮನವಿ ಮಾಡಿದ್ದೆವು. ಅದಕ್ಕವರು ಒಪ್ಪಲಿಲ್ಲ. ಸರ್ಕಾರದ ಜಾಗದಲ್ಲಿ ಸಾರ್ವಜನಿಕರಿಗೇ ಅವಕಾಶವಿಲ್ಲದಿದ್ದರೆ ಹೇಗೆ’ ಎಂದು ಸ್ಥಳೀಯರು ಕಿಡಿಕಾರಿದರು.
***
ಇಲ್ಲಿ ದೊಡ್ಡ ಮೈದಾನವಿದೆ. ನಿರ್ವಹಣೆಯ ಕೊರತೆಯಿಂದಾಗಿ ಇದು ಶೋಚನೀಯ ಸ್ಥಿತಿಗೆ ತಲುಪಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಇಲ್ಲಿ ಕ್ರಿಕೆಟ್ ಜೊತೆಗೆ ಇತರ ಆಟಗಳನ್ನೂ ಕಲಿಯಲು ಅಗತ್ಯವಿರುವ ಮೂಲ ಸೌಕರ್ಯ ಕಲ್ಪಿಸಿದರೆ ಸುತ್ತಲಿನ ಮಕ್ಕಳಿಗೆ ಅನುಕೂಲವಾಗುತ್ತದೆ. ಇದರಿಂದ ಪ್ರತಿಭೆಗಳನ್ನೂ ಪೋಷಿಸಿದಂತಾಗುತ್ತದೆ.
–ಲಕ್ಷ್ಮೀಶ ಭಟ್, ವಿದ್ಯಾಪೀಠ ನಿವಾಸಿ
ಹಲವು ವರ್ಷಗಳಿಂದ ನಾನು ಈ ಮೈದಾನದಲ್ಲಿ ಆಡುತ್ತಾ ಬೆಳೆದಿದ್ದೇನೆ. ಇದರ ಸುತ್ತ ಇದ್ದ ಕಬ್ಬಿಣದ ಬೇಲಿಗಳೆಲ್ಲಾ ಕಿತ್ತು ಹೋಗಿವೆ. ಹೀಗಾಗಿ ದನಗಳು, ಕುರಿಗಳು ಹಾಗೂ ಬೀದಿ ನಾಯಿಗಳು ಮೈದಾನದೊಳಗೆ ಪ್ರವೇಶಿಸುತ್ತಿವೆ. ಇದರಿಂದ ವಾಯು ವಿಹಾರಿಗಳು ಹಾಗೂ ಕ್ರೀಡಾಸಕ್ತರಿಗೆ ತೊಂದರೆಯಾಗುತ್ತಿದೆ. ವಾಲಿಬಾಲ್, ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ ಇರುವ ಸಾಕಷ್ಟು ಮಕ್ಕಳು ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ತರಬೇತಿಗಾಗಿ ಅವರೆಲ್ಲಾ ಕಂಠೀರವ ಕ್ರೀಡಾಂಗಣಕ್ಕೆ ಹೋಗಬೇಕು. ಈ ಕಾರಣಕ್ಕಾಗಿಯೇ ಅನೇಕರು ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ.
– ರಕ್ಷಿತ್, ನಾಗೇಂದ್ರ ಬ್ಲಾಕ್ ನಿವಾಸಿ
ಮಕ್ಕಳನ್ನು ಕ್ರೀಡಾಪಟುಗಳನ್ನಾಗಿ ರೂಪಿಸಬೇಕು. ಅವರಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು ಎಂಬ ಹಂಬಲ ಎಲ್ಲ ತಂದೆ ತಾಯಿಗಳಿಗೂ ಇರುತ್ತದೆ. ಅದು ಈಡೇರಬೇಕಾದರೆ ಗುಣಮಟ್ಟದ ಮೈದಾನಗಳು ಇರಲೇಬೇಕು. ಆದರೆ, ನಮ್ಮ ಬಡಾವಣೆಯ ನಿವಾಸಿಗಳು ಅದರಿಂದ ವಂಚಿತರಾಗಿದ್ದಾರೆ. ನಮ್ಮ ಮಕ್ಕಳು ಆಟ ಆಡಬೇಕಾದರೆ ಇಲ್ಲಿಂದ ನಾಲ್ಕು ಕಿ.ಮೀ.ದೂರದಲ್ಲಿರುವ ಎಂ.ಸಿ.ಲೇಔಟ್‌ಗೆ ಹೋಗಬೇಕು. ಪ್ರತಿದಿನ ಕೆಲಸ ಬಿಟ್ಟು ಅಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದು ಕಷ್ಟ. ನಮ್ಮ ಬಡಾವಣೆಯಲ್ಲೇ ಸುಸಜ್ಜಿತ ಮೈದಾನ ಸ್ಥಾಪಿಸಿದರೆ ಅನುಕೂಲ.
–ಮಹೇಶ್, ಚಂದ್ರಾ ಲೇಔಟ್ ನಿವಾಸಿ
ರಾಜಕಾಲುವೆಯ ಪಕ್ಕದಲ್ಲಿ ಮೈದಾನ ನಿರ್ಮಿಸಲಾಗಿದೆ. ಹೀಗಾಗಿ ಮಳೆಗಾಲದಲ್ಲಿ ಇಲ್ಲೆಲ್ಲಾ ತ್ಯಾಜ್ಯ ನೀರು ಸಂಗ್ರಹವಾಗಿ ಬಿಡುತ್ತದೆ. ಇಲ್ಲೇ ಘನ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕಿ ಈ ಮೈದಾನವನ್ನು ಉನ್ನತೀಕರಿಸಲು ಪ್ರಯತ್ನಿಸಬೇಕು.
–ಶಿವಾಜಿ ರಾವ್, ಬಸವೇಶ್ವರನಗರ 100ನೇ ವಾರ್ಡ್ ನಿವಾಸಿ
ಕ್ರೀಡೆ ಅಂದರೆ ಕೇವಲ ಕ್ರಿಕೆಟ್ ಅಲ್ಲ. ವಾಲಿಬಾಲ್, ಕೊಕ್ಕೊ, ಕಬಡ್ಡಿ, ಫುಟ್‌ಬಾಲ್‌ಗೂ ಆದ್ಯತೆ ನೀಡಬೇಕಿದೆ. ಬಿಬಿಎಂಪಿ ಹಾಗೂ ಬಿಡಿಎ ಇದನ್ನು ಗಮನದಲ್ಲಿಟ್ಟುಕೊಂಡು ಮೈದಾನಗಳನ್ನು ಅಭಿವೃದ್ಧಿಪಡಿಸಿದರೆ ಉತ್ತಮ.
– ಸುಮನ್ ಚಂದ್ರಶೇಖರ್, ಉದ್ಯೋಗಿ, ಪೀಣ್ಯ
ನಗರದ ಬಹುತೇಕ ಮೈದಾನಗಳಿಗೆ ಗೇಟ್ ಇಲ್ಲ. ಅಂತಹ ಮೈದಾನಗಳು ಕಾರು ಮತ್ತು ಬೈಕ್ ಸವಾರರ ಚಾಲನಾ ತರಬೇತಿ ತಾಣಗಳಾಗಿವೆ. ಅನೇಕರು ವ್ಹೀಲಿಂಗ್ ಮಾಡುವುದನ್ನೂ ನೋಡಿದ್ದೇನೆ. ಇದರಿಂದ ಮೈದಾನಗಳು ಹಾಳಾಗುತ್ತಿವೆ. ಇದಕ್ಕೆ ಕಡಿವಾಣ ಬೀಳಬೇಕಿದೆ.
–ಶಿವರಂಜನ್, ಚಾಮರಾಜಪೇಟೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.