ADVERTISEMENT

ರಸ್ತೆ ನಿಯಮ ಉಲ್ಲಂಘನೆ | ಪ್ರಕರಣ ಹೆಚ್ಚು ದಾಖಲಿಸಿ: ಮೇಲಧಿಕಾರಿಗಳ ಸೂಚನೆ

ಆದಾಯ ಕಡಿಮೆಯಾಗದಂತೆ ಕ್ರಮ ವಹಿಸಲು ಬ್ರೇಕ್‌ ಇನ್‌ಸ್ಪೆಕ್ಟರ್‌ಗಳಿಗೆ ಮೇಲಧಿಕಾರಿಗಳ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಮೇ 2024, 14:45 IST
Last Updated 23 ಮೇ 2024, 14:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಸೂಲಿ ಮಾಡುವ ಪ್ರಕರಣಗಳನ್ನು ಹೆಚ್ಚಿಸಲು ಬ್ರೇಕ್ ಇನ್‌ಸ್ಪೆಕ್ಟರ್‌ಗಳಿಗೆ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ. ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಆದಾಯ ಇಳಿಕೆಯಾಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೇಲಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕುಡಿದು ವಾಹನ ಚಾಲನೆ, ಓವರ್ ಲೋಡ್‌, ಸದೃಢ ಪ್ರಮಾಣಪತ್ರ (ಫಿಟ್‌ನೆಸ್‌ ಸರ್ಟಿಫಿಕೆಟ್‌) ಇಲ್ಲದಿರುವುದು, ರಹದಾರಿ (ಪರ್ಮಿಟ್‌) ಇರದಿರುವುದು, ವಾಯು ಮಾಲಿನ್ಯ–ಶಬ್ದ ಮಾಲಿನ್ಯ ಉಂಟು ಮಾಡುವುದು ಸೇರಿದಂತೆ ಮೋಟರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸಬೇಕು. ಪ್ರತಿ ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ತಿಂಗಳಿಗೆ 250ರಿಂದ 300 ಪ್ರಕರಣಗಳನ್ನು ದಾಖಲಿಸುವ ಗುರಿ ಇತ್ತು. ಅದನ್ನು 400ಕ್ಕೆ ಏರಿಸಲಾಗಿದೆ. ಆದಾಯ ಹೆಚ್ಚಿಸುವುದರ ಜೊತೆಗೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಕಡಿಮೆ ಮಾಡುವುದು ಕೂಡ ಆದ್ಯತೆಯಾಗಿದೆ ಎಂದು ಸಾರಿಗೆ ಜಂಟಿ ಆಯುಕ್ತರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ನಗರದ ಯಶವಂತಪುರ, ಕೋರಮಂಗಲ, ಚಂದಾಪುರ, ಎಲೆಕ್ಟ್ರಾನಿಕ್ಸ್‌ ಸಿಟಿ, ಜಯನಗರ, ಜ್ಞಾನಭಾರತಿ, ಇಂದಿರಾನಗರ, ಕೆ.ಆರ್‌.ಪುರ, ರಾಜಾಜಿನಗರ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಈ ಗುರಿ ನಿಗದಿಪಡಿಸಲಾಗಿದೆ.

ADVERTISEMENT

ಗುರಿ ತಲುಪುವುದು ಕಷ್ಟ: ‘ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ದಾಖಲಿಸುವ ಪ್ರಕರಣ ಹೆಚ್ಚಿಸಬೇಕು ಎಂದು ಸೂಚನೆ ನೀಡುವುದರ ಜೊತೆಗೆ ಕುಡಿದು ಚಾಲನೆ ಮಾಡುವುದನ್ನು ಪತ್ತೆಹಚ್ಚಲು ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದ್ದಾರೆ. ಪೊಲೀಸರು ಈ ಕೆಲಸ ಮಾಡುತ್ತಿದ್ದಾರೆ. ನಡುರಾತ್ರಿಯಲ್ಲಿ ನಾವು ಪರೀಕ್ಷೆ ಮಾಡಲು ಮುಂದಾದರೆ, ವಾಹನ ಸವಾರರು ಹಲ್ಲೆ ಮಾಡಲು ಮುಂದಾಗುತ್ತಾರೆ. ಪೊಲೀಸ್‌ ರಕ್ಷಣೆ ಇಲ್ಲದೇ ಈ ಕೆಲಸ ಕಷ್ಟ’ ಎಂದು ಬ್ರೇಕ್‌ ಇನ್‌ಸ್ಪೆಕ್ಟರ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬಹುತೇಕ ಆರ್‌ಟಿಒ ಕಚೇರಿಗಳಲ್ಲಿ ಬ್ರೇಕ್‌ ಇನ್‌ಸ್ಪೆಕ್ಟರ್‌ಗಳ ಕೊರತೆ ಇದೆ. ಇದರಿಂದ ಹಲವರಿಗೆ ಹೆಚ್ಚುವರಿಯಾಗಿ ಇನ್ನೊಂದು ಕಚೇರಿಯ ಜವಾಬ್ದಾರಿಯನ್ನು ವಹಿಸಲಾಗಿದೆ. ದಂಡ ವಸೂಲಿ ಮಾಡುವ ಅಧಿಕಾರ ಬ್ರೇಕ್‌ ಇನ್‌ಸ್ಪೆಕ್ಟರ್‌ಗಳಿಗೆ ಮಾತ್ರ ಇರುವುದರಿಂದ ಕಚೇರಿ ಕೆಲಸದೊಂದಿಗೆ ಇದನ್ನೂ ಮಾಡಬೇಕು’ ಎಂದು ದೂರಿದರು.

ಸಹಜ ಪ್ರಕ್ರಿಯೆ

ಕಳೆದ ವರ್ಷ ₹11500 ಕೋಟಿ ಆದಾಯವನ್ನು ಸಂಗ್ರಹಿಸಿ ನೀಡುವ ಗುರಿ ಸಾರಿಗೆ ಇಲಾಖೆಗೆ ಇತ್ತು. ಈ ವರ್ಷ ₹13000 ಕೋಟಿ ಗುರಿ ನಿಗದಿಪಡಿಸಲಾಗಿದೆ. ಆಗ ಪ್ರಾದೇಶಿಕ ಕಚೇರಿಗಳಿಗೂ ಗುರಿ ಪ್ರಮಾಣ ಏರಿಸುವುದು ಸಹಜ. ಅದೇನು ಅಪರಾಧ ಅಥವಾ ಮಾಡಬಾರದ ಪ್ರಕ್ರಿಯೆ ಅಲ್ಲ.  ಎ.ಎಂ. ಯೋಗೀಶ್‌ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಆಂತರಿಕ ಕ್ರಮ ಇಲಾಖೆಯಲ್ಲಿ ಇಂಥ ಗುರಿ ನಿಗದಿ ಆಗಾಗ ನಡೆಯುತ್ತಿರುತ್ತದೆ. ಇದೇನೂ ಹೊಸತಲ್ಲ. ಇಂಥ ಆಂತರಿಕ ಕ್ರಮಗಳು ಅಧಿಕಾರಿಗಳನ್ನು ಎಚ್ಚರವಾಗಿ ಇಡುತ್ತದೆ. ಅದೆಲ್ಲ ಪ್ರಚಾರ ನೀಡಬೇಕಾದ ವಿಚಾರಗಳಲ್ಲ. ಸಿ. ಮಲ್ಲಿಕಾರ್ಜುನ ಸಾರಿಗೆ (ಪ್ರವರ್ತನ) ಹೆಚ್ಚುವರಿ ಆಯುಕ್ತ ನಿಯಮ ಜಾರಿಗೆ ಅನಿವಾರ್ಯ ರಸ್ತೆ ಸುರಕ್ಷತಾ ನಿಯಮಗಳ ಜಾರಿ ಕಟ್ಟುನಿಟ್ಟಾಗಿರಬೇಕು. ಅದಕ್ಕೆ ಆಗಾಗ ಅಧಿಕಾರಿಗಳಿಗೆ ಗುರಿ ನೀಡಬೇಕಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದರು. ಚುನಾವಣೆ ಮುಗಿದ ಬಳಿಕ ಅದೇ ಉತ್ಸಾಹ ಉಳಿಸುವಂತೆ ಮಾಡುವುದು ಅನಿವಾರ್ಯ. ಶೋಭಾ ಸಾರಿಗೆ ಜಂಟಿ ಆಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.