ಬೆಂಗಳೂರು: ‘ಬದಲಾದ ಜೀವನಶೈಲಿ, ಪಾಶ್ಚಾತ್ಯ ಆಹಾರ ಪದ್ಧತಿ ಸೇರಿ ವಿವಿಧ ಕಾರಣಗಳಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಳವಾಗುತ್ತಿದೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಪಿಂಕ್ ಸ್ಟ್ರಾಂಗ್’ ವಾಕಥಾನ್‌ಗೆ ಚಾಲನೆ ನೀಡಿ, ಮಾತನಾಡಿದರು.
‘ರೋಗವನ್ನು ಶೀಘ್ರವಾಗಿ ಪತ್ತೆ ಮಾಡಿ, ಸಕಾಲದಲ್ಲಿ ಚಿಕಿತ್ಸೆ ಒದಗಿಸಿದಲ್ಲಿ ಸುಲಭವಾಗಿ ವಾಸಿ ಮಾಡಬಹುದಾಗಿದೆ. ಮಹಿಳೆಯರು ಸ್ತನ ಕ್ಯಾನ್ಸರ್ ಲಕ್ಷಣದ ಬಗ್ಗೆ ತಿಳಿದಲ್ಲಿ ಮಾತ್ರ ರೋಗ ಉಲ್ಬಣ ತಡೆ ಸಾಧ್ಯ. ಆದ್ದರಿಂದ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಹೆಚ್ಚಬೇಕು. ಮಹಿಳೆಯರು ಆರೋಗ್ಯ ಕಡೆಗಣಿಸದೆ, ರೋಗ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.
ಫೋರ್ಟಿಸ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞೆ ಡಾ.ಮೋನಿಕಾ ಪನ್ಸಾರಿ, ‘ಸ್ತನ ಕ್ಯಾನ್ಸರ್ ವಯಸ್ಸಾದ ಮಹಿಳೆಯರಿಗೆ ಮಾತ್ರ ಸೀಮಿತವಾಗಿರದೆ, ಯುವತಿಯರಲ್ಲಿಯೂ ಕಂಡುಬರುತ್ತಿದೆ. ನಿರಂತರ ತಪಾಸಣೆ ಮತ್ತು ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಿಂದ ಮಾತ್ರ ಕ್ಯಾನ್ಸರ್ ತಡೆಗಟ್ಟಲು ಸಾಧ್ಯ. ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಮಹಿಳೆಯರೇ ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ತಮ್ಮ ಸ್ತನದಲ್ಲಿ ಗಂಟಿನ ರೀತಿ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಬೇಕು’ ಎಂದರು.
5 ಕಿ.ಮೀ. ದೂರದ ಈ ವಾಕಥಾನ್‌ನಲ್ಲಿ ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾದವರು, ಅವರ ಕುಟುಂಬಸ್ಥರು, ಸಾರ್ವಜನಿಕರು, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿ 450ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.